
ಹೆಬ್ರಿ: ಕೆರೆಕಟ್ಟೆಯಲ್ಲಿ ಕಾಣಿಸಿಕೊಂಡ ಟಾರ್ಚ್ ಲೈಟ್!? ANF ಕೂಂಬಿಂಗ್ ಕಾರ್ಯಾಚರಣೆ ಚುರುಕು!
ಉಡುಪಿ: ಪೀತುಬೈಲ್ ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ಸಮಯದಲ್ಲಿ ತಪ್ಪಿಸಿಕೊಂಡಿದ್ದಾರೆ ಎನ್ನಲಾದ ನಕ್ಸಲರ ಪತ್ತೆಗಾಗಿ ಬಿರುಸಿನ ಶೋಧ ಕಾರ್ಯ ನಡೆಯುತ್ತಿದೆ. ನಕ್ಸಲ್ ಪೀಡಿತ ಪ್ರದೇಶಗಳಾದ ಹೆಬ್ರಿ ತಾಲ್ಲೂಕಿನ ನಾಡ್ಪಾಲು, ಕಬ್ಬಿನಾಲೆ, ಚಿಕ್ಕಮಗಳೂ ರಿನ ಕೊಪ್ಪ, ಕೆರೆಕಟ್ಟೆ ಪರಿಸರದ ಅರಣ್ಯದಲ್ಲಿ ಎಎನ್ಎಫ್ ಕಾರ್ಯ ಶೋಧ ತೀವ್ರಗೊಂಡಿದೆ.ಎ ಎನ್ಎಫ್ ಎಸ್.ಪಿ. ಜಿತೇಂದ್ರ ದಯಾಮ ಮಾರ್ಗದರ್ಶನದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ಹೆಬ್ರಿಯ ಕೂಡ್ಲು ಫಾಲ್ಸ್ಗೆ ಡಿಸೆಂಬರ್ 4ರವರೆಗೆ ಪ್ರವಾಸಿಗರು ತೆರಳದಂತೆ ನಿರ್ಬಂಧ ಹೇರಲಾಗಿದೆ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಡಿಸಿಎಫ್ ಶಿವರಾಮ್ ಬಾಬು ತಿಳಿಸಿದ್ದಾರೆ.
ನಕ್ಸಲರು ಶೃಂಗೇರಿ ಭಾಗದಲ್ಲಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಶೃಂಗೇರಿ ಕೆರೆಕಟ್ಟೆಯ ಸುತ್ತಿನಗುಡ್ಡ ಎಂಬಲ್ಲಿ ಶುಕ್ರವಾರ ನಡುರಾತ್ರಿ ವೇಳೆ ದಟ್ಟ ಕಾಡಿನ ನಡುವೆ ಟಾರ್ಚ್ ಬೆಳಕು ಕಂಡುಬಂದಿದೆ. ಇದು ನಕ್ಸಲರ ಓಡಾಟ ಇರಬಹುದು ಎಂಬ ಅನುಮಾನದಲ್ಲಿ ನಕ್ಸಲ್ ನಿಗ್ರಹ ಪಡೆ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದೆ. ನಕ್ಸಲರು ಮರಳಿ ಕೇರಳಕ್ಕೆ ಹೋಗಿರಬಹುದು ಎಂದು ಅನುಮಾನಿಸಲಾಗಿತ್ತು. ಆದರೆ, ಈಗ ಕೆರೆಕಟ್ಟೆ ಪರಿಸರದಲ್ಲಿ ಟಾರ್ಚ್ ಬೆಳಕು ಕಂಡಿರುವುದರಿಂದ ಅವರು ಇನ್ನೂ ಇಲ್ಲೇ ಇರುವ ಶಂಕೆ ಇದೆ ಎಂದು ಮೂಲಗಳು ತಿಳಿಸಿವೆ.
‘ಟಾರ್ಚ್ ಬೆಳಕು ಕಂಡಿರುವ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ನಕ್ಸಲ್ ನಿಗ್ರಹ ಪಡೆಯಿಂದ ನಿರಂತರವಾಗಿ ಶೋಧ ಕಾರ್ಯ ನಡೆಯುತ್ತಿದೆ. ಜಿಲ್ಲೆಯ ಗಡಿ ಭಾಗ, ನಕ್ಸಲ್ಪೀಡಿತ ವಿವಿಧ ಜಿಲ್ಲೆಯ ಗಡಿಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ’ ಎಂದು ನಕ್ಸಲ್ ನಿಗ್ರಹ ಪಡೆಯ ವರಿಷ್ಠಾಧಿಕಾರಿ ಜಿತೇಂದ್ರ ದಯಾಮ ತಿಳಿಸಿದ್ದಾರೆ ಎಂದು 'ಪ್ರಜಾವಾಣಿ' ವರದಿ ಮಾಡಿದೆ.