ಮಂಗಳೂರು: ಬಿಜೆಪಿ ಕಡೆಗೆ ವಾಲಿದ ಮೊಯ್ದಿನ್ ಬಾವಾ!? ಕೇಸರಿ ಪಕ್ಷದಲ್ಲಿ ಸಿಗುತ್ತಾ ಉನ್ನತ ಸ್ಥಾನ?
Friday, November 15, 2024
ಧರ್ಮಸ್ಥಳ (ದಕ್ಷಿಣ ಕನ್ನಡ): ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಲಾಭಾಂಶ ವಿತರಣೆ ಕಾರ್ಯಕ್ರಮದ ಬಳಿಕ ಮಾಜಿ ಶಾಸಕ, ಹಾಲಿ ಜೆಡಿಎಸ್ ಮುಖಂಡ ಮೊಯ್ದಿನ್ ಬಾವಾ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹಬ್ಬಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್, ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಬಿಜೆಪಿ ನಾಯಕರ ಜೊತೆಗೆ ಮೊಯ್ದಿನ್ ಬಾವಾ ಅತ್ಯಂತ ಆತ್ಮೀಯವಾಗಿ ಕ್ಷಣವನ್ನು ಕಳೆದಿದ್ದಾರೆ.
2023ರ ಚುನಾವಣೆಯ ಸಂದರ್ಭ ಕೊನೆಯ ಕ್ಷಣದಲ್ಲಿ ಮೊಯ್ದಿನ್ ಬಾವಾ ಅವರಿಗೆ ಟಿಕೆಟ್ ಕೈ ತಪ್ಪಿತ್ತು. ಇದರಿಂದ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ಬಾವಾ ಅವರು ಮಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ತನಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕುತಂತ್ರದಿಂದ ಟಿಕೆಟ್ ತಪ್ಪಿಸಿದ್ದಾಗಿ ದೂರಿದ್ದರು. ಅನಂತರ ಜೆಡಿಎಸ್‌ನಲ್ಲಿದ್ದರೂ ಅಲ್ಲೊಂದು ಇಲ್ಲೊಂದು ಕಾರ್ಯಕ್ರಮದಲ್ಲಷ್ಟೇ ಬಾವಾ ಅವರು ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಜೆಡಿಎಸ್‌ನಿಂದಲೂ ದೂರವಾಗುತ್ತಿದ್ದು, ಅಲ್ಲದೇ ಕರಾವಳಿಯಲ್ಲಿ ಜೆಡಿಎಸ್‌ಗೆ ಹೆಚ್ಚು ಪ್ರಾಬಲ್ಯವಿಲ್ಲದಾಗಿದೆ. ಇನ್ನೊಂದೆಡೆ ಕಳೆದ ಲೋಕಸಭಾ ಚುನಾವಣೆಯನ್ನು ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಬಳಿಕ ಮೊಯ್ದಿನ್ ಬಾವಾ ಅವರು ಬಿಜೆಪಿ ಕಡೆಗೆ ಒಲವು ತೋರಿದ್ದಾರೆ ಎನ್ನಲಾಗಿದೆ.
ಬಿಜೆಪಿ ಬುಲಾವ್ ನಿಜ!
ಬಿಜೆಪಿಗೆ ಸೇರ್ಪಡೆಯಾಗುವಂತೆ ತನಗೆ ಆಫರ್ ಇರುವುದು ನಿಜ ಎಂದು ಸ್ವತಃ ಮೊಯ್ದಿನ್ ಬಾವಾ ಅವರೇ 'ದಿ ನ್ಯೂಸ್ ಅವರ್'ಗೆ ಸ್ಪಷ್ಟಪಡಿಸಿದ್ದಾರೆ. ಸಮಾಜ ಸೇವೆಗೆ ಯಾವ ಪಕ್ಷವಾದರೆ ಏನು ಎನ್ನುವ ಬಾವಾ ಅವರು ಕಾಂಗ್ರೆಸ್ ತನಗೆ ಮಾಡಿದ ಅನ್ಯಾಯಕ್ಕೆ ತಕ್ಕ ಪಾಠ ಕಲಿಸುವ ಹುಮ್ಮಸ್ಸಿನಲ್ಲಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಧರ್ಮಸ್ಥಳದ ಕಾರ್ಯಕ್ರಮದಲ್ಲಿ ಮೊಯ್ದಿನ್ ಬಾವಾ ಅವರು ನಿರ್ಮಲಾ ಸೀತರಾಮನ್ ಹಾಗೂ ಬಿಜೆಪಿಯ ಸಂಸದ, ಶಾಸಕರ ಜೊತೆಗೆ ಭಾರೀ ಆತ್ಮೀಯತೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಇದರ ಫೋಟೋಗಳು ಕೂಡಾ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.
ಬಿಜೆಪಿಗೆ ಸೇರ್ಪಡೆಗೊಂಡಲ್ಲಿ ಮುಂದಿನ ವಿಧಾನಸಭೆಗೆ ಮಂಗಳೂರು (ಉಳ್ಳಾಲ) ಕ್ಷೇತ್ರದಿಂದ ಸ್ಪರ್ಧೆಗಿಳಿದು ಯುಟಿ ಖಾದರ್‌ಗೆ ಟಕ್ಕರ್ ನೀಡಲು ಮುಂದಾಗಲಿದ್ದಾರೆ ಎಂದು ಬಾವಾ ಅವರ ಆಪ್ತ ವಲಯ ತಿಳಿಸಿದೆ. ಚುನಾವಣೆಗೆ ಇನ್ನೂ ಮೂರೂವರೆ ವರ್ಷಗಳಿದ್ದು ಈಗಿಂದ್ಲೇ ಬಿಜೆಪಿ ಸೇರಿ ಉಳ್ಳಾಲ ಕ್ಷೇತ್ರದಲ್ಲಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿಯೂ ಮೊಯ್ದಿನ್ ಬಾವಾ ಸಕ್ರಿಯರಾಗುವ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ.