ನನ್ನ ಶಾಲು ತೊಟ್ಟವರು ಮಿಲಿಯನೇರ್ ಆಗಿದ್ದಾರೆ, ಇದು ನನ್ನ ಬರಕತ್; ಟೀಕೆಗೆ ಗುರಿಯಾದ NRI ಉದ್ಯಮಿಯ ಹೇಳಿಕೆ!
Tuesday, January 21, 2025
ಮಂಗಳೂರು: ಅನಿವಾಸಿ ಭಾರತೀಯ ಉದ್ಯಮಿ, ಮುಝೈನ್ ಸಂಸ್ಥೆಯ ಸಂಸ್ಥಾಪಕ ಝಕರಿಯಾ ಜೋಕಟ್ಟೆ ಆಡಿರುವ ಮಾತೊಂದು ಇದೀಗ ಭಾರೀ ಸಂಚಲನ ಮೂಡಿಸಿದೆ. ಬಂಟ್ವಾಳದ ಕಲಾಯಿಯಲ್ಲಿ ನಡೆದಿತ್ತು ಎನ್ನಲಾದ ಧಾರ್ಮಿಕ ಕಾರ್ಯಕ್ರಮದ ವೇದಿಕೆಯಲ್ಲಿ ಝಕರಿಯಾ ಜೋಕಟ್ಟೆ ತನಗೆ ಗೌರವಪೂರ್ವಕವಾಗಿ ಸಂಘಟಕರು ಹಾಕಿದ್ದ ಶಾಲನ್ನು ವೇದಿಕೆಯಲ್ಲಿ ತಾನೇ ಏಲಂ ಕೂಗಿದ್ದಾರೆ. ಈ ವೇಳೆ ಅವರು ಆಡಿದ್ದ ಮಾತು ಟೀಕೆಗೆ ಗುರಿಯಾಗಿದೆ. ಕೆಲವರಂತೂ ತನ್ನನ್ನು ತಾನೇ ಹೊಗಳಿಕೊಳ್ಳುವ ಮೂಲಕ ಝಕರಿಯಾ ಜೋಕಟ್ಟೆ ಧಾರ್ಮಿಕ ಪಂಡಿತರ ಮುಂದೆ ಅಹಂ ಪ್ರದರ್ಶಿಸಿದ್ದಾರೆ ಎಂದು ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
"ನನಗೆ ಹಾಕಿರೋ ಶಾಲನ್ನು ಯಾವತ್ತೂ ನಾನು ತಗೊಂಡು ಹೋಗಿದ್ದಿಲ್ಲ. ಅದನ್ನ ಅಲ್ಲಿಯೇ ಏಲಂ ಮಾಡುತ್ತೇನೆ. ಝಕರಿಯಾ ನೀಡಿದ ಶಾಲು ತೊಟ್ಟವ ಮಿಲಿಯನೇರ್ ಆಗಿದ್ದಾರೆ. ಅದು ನನ್ನ ಬರಕತ್ (ಮಹಿಮೆ)ನಿಂದ ಆಗಿದೆ. ಹಾಗಾಗಿ ಈ ಶಾಲನ್ನ ಯಾರಾದ್ರೂ ಖರೀದಿಸಿದರೆ ಒಳ್ಳೆಯದಾಗಬಹುದು. ಈ ಶಾಲು ಯಾರೂ ತಗೊಳ್ಳದೇ ಹೋದರೆ ನಾನೇ ಖರೀದಿಸುವೆ" ಎಂದಿದ್ದಾರೆ.
ಈ ವೇಳೆ ಅವರೇ ಶಾಲಿಗೆ 5 ಸಾವಿರ ರೂಪಾಯಿಯಿಂದ ಏಲಂ ಕೂಗಲು ಆರಂಭಿಸಿದ್ದಾರೆ. ಇನ್ನೋರ್ವ ವ್ಯಕ್ತಿ 7 ಸಾವಿರ ಬಿಡ್ ಮಾಡಿದ್ದಾರೆ. ಅದನ್ನ ಉದ್ದೇಶಿಸಿ ಮಾತು ಮುಂದುವರೆಸಿದ್ದ ಝಕರಿಯಾ ಅವರು, 7 ಸಾವಿರ ಅನ್ನೋದು ನಥಿಂಗ್. ಇದು ಝಕರಿಯಾ ಶಾಲು. ಝಕರಿಯಾ ಶಾಲು ಹಾಕಿದವನು ಯಾವತ್ತೂ ಸ್ಥಿತಿವಂತನಾಗಿದ್ದಾನೆ ಎಂದಿದ್ದಾರೆ. ಶಾಲು ಪಡೆದ ಆಸಿಫ್ ಅವರ ಮುಂದಿನ ಹೊಸ ಯೋಜನೆ ಈ ಶಾಲಿನ ಬರಕತ್‌ನಿಂದ ಒಳ್ಳೆಯದಾಗಲಿ ಎಂದಿದ್ದಾರೆ.
ವೀಡಿಯೋ ವೈರಲ್
ಸದ್ಯ ಜಾಲತಾಣದಲ್ಲಿ ಈ ಕುರಿತು ಭಾರೀ ಟೀಕೆ ವ್ಯಕ್ತವಾಗಿದೆ. ಇದೇ ವೇಳೆ ಅತ್ತ ಸೌದಿ ಅರೇಬಿಯಾದಲ್ಲಿಯ ಝಕರಿಯಾ ಜೋಕಟ್ಟೆ ಅವರ 'ಮುಝೈನ್' ಕಂಪೆನಿಯಲ್ಲಿನ ನೌಕರರಿಗೆ 4 ತಿಂಗಳಿನಿಂದ ವೇತನ ಪಾವತಿಸಿಲ್ಲ ಎನ್ನಲಾಗಿದ್ದು, ಆ ಕುರಿತು ಕಾರ್ಮಿಕರು ಮಾಡಿದ ವೀಡಿಯೋ ವೈರಲ್ ಆಗಿದ್ದರೆ, ಇತ್ತ ಮಂಗಳೂರು ಭಾಗದ ಬ್ಯಾರಿ ಭಾಷಿಕ ಮುಸ್ಲಿಮರು ಕೂಡಾ ಝಕರಿಯಾ ಅವರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.