ಪುತ್ತೂರು: ಆರ್‌ಪಿಸಿ ಗ್ರಾಹಕರಿಗೆ ಶಾಕ್; ಬಾಗಿಲು ಮುಚ್ಚಿದ ಅನಧಿಕೃತ ಸಂಸ್ಥೆ!
Tuesday, December 24, 2024
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರೀ ಸಂಚಲನ ಮೂಡಿಸಿದ್ದ ಚೈನ್ ಲಿಂಕ್ ಮಾದರಿಯ ಆರ್‌ಪಿಸಿ ತನ್ನ ಸಾವಿರಾರು ಗ್ರಾಹಕರಿಗೆ ಪಂಗನಾಮ ಹಾಕಿ ಕೋಟಿಗಟ್ಟಲೆ ಹಣ ಲಪಟಾಯಿಸಿದೆ ಅನ್ನೋ ಸುದ್ದಿ ಹೊರ ಬಿದ್ದಿದೆ. ಇಂದಿನಿಂದ 3 ದಿನಗಳ ಕಾಲ ವಿತ್ ಡ್ರಾ ಮಾಡಲು ಅವಕಾಶ ನೀಡಿದ್ದ ಸಂಸ್ಥೆಯು ಪುನಃ ರಿನೀವಲ್ ಹಾಗೂ ಆಧಾರ್ ಸಂಖ್ಯೆ ಕೇಳುತ್ತಿದ್ದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಆರ್‌ಪಿಸಿ ಡಿಸೆಂಬರ್ ತಿಂಗಳಿಗೆ ಅಂತ್ಯವಾಗಲಿದೆ ಎಂದು ಈ ಹಿಂದೆಯೇ 'ದಿ ನ್ಯೂಸ್ ಅವರ್' ಎಚ್ಚರಿಸಿತ್ತು.
ಇತ್ತೀಚಿನ ದಿನಗಳಲ್ಲಿ ಸೈಬರ್ ಖದೀಮರು ಕೂಡಾ ಇಂತಹ ಚೈನ್ ಲಿಂಕ್ ಮಾದರಿಯ ಗ್ಯಾಂಬ್ಲಿಂಗ್ ಬಳಸುತ್ತಿದ್ದಾರೆ. RPC ಕೂಡಾ ಅಂತಹದ್ದೇ ಮಾದರಿ ಅನುಸರಿಸುತ್ತಿದೆಯಾ ಅನ್ನೋ ಶಂಕೆ ಶುರುವಾಗಿದೆ. ಗ್ರಾಹಕರ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಸಾಧ್ಯತೆ ಬಗ್ಗೆ ಈಗ ಗ್ರಾಹಕರು ಚಿಂತಿತರಾಗಿದ್ದಾರೆ.
ಜಿಲ್ಲೆಯ ಸಾವಿರಾರು ಮಂದಿ ಜನರು ಆರ್‌ಪಿಸಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ಆರಂಭದಲ್ಲಿ ಕೆಲವು ಗ್ರಾಹಕರಿಗೆ ತಮ್ಮ ಹೂಡಿಕೆ ಹಣಕ್ಕಿಂತ ಡಬಲ್ ಮೊತ್ತ ನೀಡಿತ್ತು. ಉಳಿದಂತೆ ಬೇರೆ ಗ್ರಾಹಕರಿಗೆ ಇಂದಿನಿಂದ ಮೂರು ದಿನಗಳ ಕಾಲ ವಿತ್ ಡ್ರಾ ಅವಕಾಶ ನೀಡಿದ ಆರ್‌ಪಿಸಿ ಸಂಸ್ಥೆಯ ವಿತ್ ಡ್ರಾ ಆಯ್ಕೆ ಮಾಡಿದರೆ ಯಾವುದೇ ಮೊತ್ತ ಕಂಡು ಬರುತ್ತಿಲ್ಲ ಎನ್ನಲಾಗುತ್ತಿದೆ. ಅದಲ್ಲದೇ ತಮ್ಮ ಸಂಸ್ಥೆ 50 ವರ್ಷಗಳು ಪೂರೈಸಿದ್ದು, ಬಂಪರ್ ಆಫರ್ ಹೆಸರಲ್ಲಿ ಗ್ರಾಹಕರಲ್ಲಿ ಮತ್ತಷ್ಟು ಹಣ ಹೂಡುವಂತೆ ಪ್ರೇರೇಪಣೆ ನೀಡುತ್ತಿದೆ. ಆದರೆ ಅನಧಿಕೃತ ಆರ್‌ಪಿಸಿ ಆಪ್ ಇದೀಗ ಬಹುತೇಕ ಮಕಾಡೆ ಮಲಗಿದ್ದು ಖಾತ್ರಿಯಾಗಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.