
ಮಂಗಳೂರು: NITK ಟೋಲ್ ಗೇಟ್ ಸುತ್ತಮುತ್ತ ನಿಷೇಧಾಜ್ಞೆ; ಹೋರಾಟಕ್ಕೆ ಅಡ್ಡಿ?
ಮಂಗಳೂರು: NITK ಟೋಲ್ ಗೇಟ್ ಬಳಿ ಎರಡನೇ ಹಂತದ ಹೋರಾಟಕ್ಕೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಮುಂದಾಗುತ್ತಲೇ ಒಂದು ವಾರ ಕಾಲ ನಿಷೇಧಾಜ್ಞೆ ವಿಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶಿಸಿದ್ದಾರೆ.
ನಾಳೆ (ಅಕ್ಟೋಬರ್ 28) NITK ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಅನುಮತಿ ಪಡೆದಿದ್ದಾಗಿಯೂ ಸಂಘಟಕರು ತಿಳಿಸಿದ್ದಾರೆ.
ಇಂದು ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಡಳಿತವು ನಾಳಿನ ಪ್ರತಿಭಟನಾ ಸಭೆಯನ್ನು ಕೈ ಬಿಡುವಂತೆ ಕೇಳಿಕೊಂಡಿತ್ತು. ಅದಾಗ್ಯೂ ಕೈ ಬಿಡದೇ ಪ್ರತಿಭಟನೆಗೆ ಮುಂದಾಗಿರುವ ಹಿನ್ನೆಲೆ ನಾಳೆ ಬೆಳಿಗ್ಗೆ 6 ಗಂಟೆಯಿಂದ ನವೆಂಬರ್ 3 ರ ಸಾಯಂಕಾಲ 6 ಗಂಟೆವರೆಗೆ ಸೆಕ್ಷನ್ 144 ರ ಅನ್ವಯ ನಿಷೇಧಾಜ್ಞೆ ವಿಧಿಸಿ ಪೊಲೀಸ್ ಕಮೀಷನರ್ ಆದೇಶಿಸಿದ್ದಾರೆ.
ಆದೇಶದನ್ವಯ ಸುರತ್ಕಲ್ NITK ಟೋಲ್ ಗೇಟ್ ಸುತ್ತಲಿನ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಅಲ್ಲದೇ ಯಾವುದೇ ರಸ್ತೆ ತಡೆ, ಜಾಥ, ಪ್ರತಿಭಟನೆ, ಐದು ಜನರಿಗಿಂತ ಹೆಚ್ಚು ಮಂದಿ ಸೇರದಂತೆ ಹಾಗೂ ಘೋಷಣೆ, ಭಾಷಣಗಳನ್ನು ನಡೆಸದಂತೆ ಆದೇಶಿಸಲಾಗಿದೆ.
ಏನಂತಾರೆ ಹೋರಾಟಗಾರರು?
ನಿಷೇಧಾಜ್ಞೆ ಆದೇಶ ಕುರಿತು ಪ್ರತಿಕ್ರಿಯಿಸಿರುವ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಪೊಲೀಸರು ನಮಗೆ ಅನುಮತಿ ನೀಡಿದ್ದಾರೆ. ಅಲ್ಲದೇ, ನಮ್ಮ ಧರಣಿ ಸ್ಥಳವು ಅವರ ಮಿತಿಯಿಂದ ಹೊರಗಿದೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 28 ರಂದು ಬೆಳಿಗ್ಗೆ 10.30 ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ಹೋರಾಟಗಾರರು ಸುರತ್ಕಲ್ ಟೋಲ್ ಗೇಟ್ ಶಾಶ್ವತ ತೆರವಿಗೆ ಆಗ್ರಹಿಸಲಿದ್ದಾರೆ.