
"ಭಾರತ ಎಲ್ಲ ಮುಸ್ಲಿಮರಿಗೂ ಮುಕ್ತವಾಗಿದೆ": ವೈರಲ್ ಆಯ್ತು IAS ಅಧಿಕಾರಿ ಟ್ವೀಟ್
ದೆಹಲಿ: ಟ್ವಿಟರ್ನಲ್ಲಿ ನಿನ್ನೆ ದಿನ ಮುಸ್ಲಿಂ ಪ್ರಧಾನಿಯಾಗಬೇಕೆಂಬ "Muslim PM" ಟ್ರೆಂಡ್ ಬಳಿಕ ಕಾಶ್ಮೀರಿ ಐಎಎಸ್ ಷಾ ಫೈಸಲ್ ಅವರ ಟ್ವೀಟ್ ಭಾರೀ ವೈರಲ್ ಆಗುತ್ತಿದೆ.
ಷಾ ಫೈಸಲ್ ತಮ್ಮ ಟ್ವೀಟ್ ಮೂಲಕ ಇಸ್ಲಾಮಿಕ್ ದೇಶಗಳನ್ನು ಗುರಿಯಾಗಿಸಿದ್ದಾರೆ. ಇದರೊಂದಿಗೆ ಭಾರತದ ಪ್ರಜಾಸತ್ತಾತ್ಮಕ ಸೌಂದರ್ಯವನ್ನೂ ಶ್ಲಾಘಿಸಲಾಗಿದೆ. ಷಾ ಫೈಸಲ್ ಸರಣಿ ಟ್ವೀಟ್ ಮಾಡಿ ಇಂತಹ ಬೇಡಿಕೆ ಇಟ್ಟವರಿಗೆ ಮಾತಿನ ಪೆಟ್ಟು ನೀಡಿದ್ದಾರೆ. ಇನ್ನು ಅವರು ತಮ್ಮ ಟ್ವೀಟ್ನಲ್ಲಿ 'ಕಾಶ್ಮೀರದ ಮುಸ್ಲಿಂ ಯುವಕ ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆಯಲು ಭಾರತದಲ್ಲಿ ಮಾತ್ರ ಸಾಧ್ಯ. ಈ ಮೂಲಕ ಸರ್ಕಾರದ ಉನ್ನತ ಇಲಾಖೆಗಳನ್ನು ತಲುಪಬಹುದು. ಸರ್ಕಾರದ ವಿರುದ್ಧ ಮಾತನಾಡಬಹುದು. ಬಳಿಕ ಅದೇ ಸರ್ಕಾರ ಅವನನ್ನು ರಕ್ಷಿಸುತ್ತದೆ ಹಾಗೂ ತನ್ನದಾಗಿಸಿಕೊಳ್ಳುತ್ತದೆ ಎಂದಿದ್ದಾರೆ.
ಇದಲ್ಲದೆ, ಐಎಎಸ್ ಷಾ ಫೈಸಲ್ ಟ್ವೀಟ್ ಮಾಡಿ 'ರಿಷಿ ಸುನಕ್ ಅವರು ಬ್ರಿಟನ್ನ ಪ್ರಧಾನಿಯಾಗುವುದು ಖಂಡಿತವಾಗಿಯೂ ನಮ್ಮ ನೆರೆಹೊರೆಯವರಲ್ಲಿ ಅಚ್ಚರಿ ಮೂಡಿಸಬಹುದು, ಅಲ್ಲಿನ ಸಂವಿಧಾನವು ಮುಸ್ಲಿಮೇತರರು ಸರ್ಕಾರದ ಮುಖ್ಯ ಇಲಾಖೆಗಳನ್ನು ಪ್ರವೇಶಿಸುವುದನ್ನು ತಡೆಯುತ್ತದೆ. ಆದರೆ ಭಾರತೀಯ ಸಂವಿಧಾನವು ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಎಂದಿಗೂ ತಾರತಮ್ಯ ಮಾಡಿಲ್ಲ. ಇಸ್ಲಾಮಿಕ್ ದೇಶಗಳು ಊಹಿಸಲೂ ಸಾಧ್ಯವಾಗದಷ್ಟು ಸ್ವಾತಂತ್ರ್ಯದೊಂದಿಗೆ ಭಾರತೀಯ ಮುಸ್ಲಿಮರು ಸಮಾನ ನಾಗರಿಕರಾಗಿ ಬದುಕುತ್ತಿದ್ದಾರೆ' ಎಂದಿದ್ದಾರೆ.
ಇದು ನನ್ನ ಭಾರತ
ಅಲ್ಲದೇ ಇದು ನನ್ನ ಭಾರತ. ಮೌಲಾನಾ ಆಜಾದ್ನಿಂದ ಡಾ. ಮನಮೋಹನ್ ಸಿಂಗ್ ಮತ್ತು ಡಾ. ಜಾಕಿರ್ ಹುಸೇನ್ನಿಂದ ರಾಷ್ಟ್ರಪತಿ ದ್ರೌಪದಿ ಮುರ್ಮುವರೆಗೆ ಭಾರತವು ಯಾವಾಗಲೂ ಎಲ್ಲರಿಗೂ ಸಮಾನ ಅವಕಾಶ ನೀಡುವ ದೇಶವಾಗಿದೆ ಎಂದು ಷಾ ಫೈಸಲ್ ಟ್ವೀಟ್ ಮಾಡಿದ್ದಾರೆ. ಈಗಲೂ ಉನ್ನತ ಹಂತಕ್ಕೇರುವ ತಲುಪುವ ದಾರಿ ಎಲ್ಲರಿಗೂ ಮುಕ್ತವಾಗಿದೆ. ನಾನೇ ಎಲ್ಲವನ್ನೂ ಖುದ್ದು ಅನುಭವಿಸಿ ಈ ಮಾತುಗಳನ್ನು ಹೇಳುತ್ತಿದ್ದೇನೆ. ಹೀಗಾಗಿ ಇದು ತಪ್ಪಾಗಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಷಾ ಫೈಸಲ್ ಟ್ವೀಟ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.