
ಮುಸ್ಲಿಮರ ನಡುವೆ ತಿಕ್ಕಾಟಕ್ಕೆ ಕಾರಣವಾಯ್ತು ಕಾಣಿಯೂರು ಮುಸ್ಲಿಂ ವರ್ತಕರ ಪ್ರೆಸ್ ಮೀಟ್!
ಮಂಗಳೂರು: ಕಡಬ ತಾಲೂಕಿನ ಕಾಣಿಯೂರಿನಲ್ಲಿ ಅಕ್ಟೋಬರ್ 20 ರಂದು ನಡೆದಿದ್ದ ಅನೈತಿಕ ಪೊಲೀಸ್ ಗಿರಿ ಪ್ರಕರಣ ಸಂಬಂಧ ಮುಸ್ಲಿಂ ಸಮುದಾಯ ಹಾಗೂ ರಾಜಕೀಯ ಪಕ್ಷಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಮಧ್ಯೆ ಅಕ್ಟೋಬರ್ 28 ರಂದು ಘಟನೆ ಖಂಡಿಸಿ, ಕೊಲೆ ಯತ್ನ ನಡೆಸಿದ ಎಲ್ಲ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಆ ಸಂಘಟನೆ ಮಾಡಿಕೊಳ್ಳುತ್ತಿದೆ.
ಈ ಮಧ್ಯೆ ಮುಸ್ಲಿಂ ವರ್ತಕರ ಸಂಘದ ಹೆಸರಿನಲ್ಲಿ ಆಟೋ ಚಾಲಕರು, ಅಡಿಕೆ ವ್ಯಾಪಾರಿ, ಕೋಳಿ ಅಂಗಡಿ ನಡೆಸುತ್ತಿರುವವರು, ಸ್ಕೇಲ್ ವ್ಯಾಪರಿ ಹೀಗೆ ಹಲವು ವ್ಯಾಪಾರಿಗಳು ಸೇರಿ ಪತ್ರಿಕಾಗೋಷ್ಟಿ ನಡೆಸಿದ್ದರು. ಸುದ್ದಿಗೋಷ್ಟಿಯಲ್ಲಿ ಕಾಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ ಉದನಡ್ಕ ಅವರ ಪರವಾಗಿ ಮಾತನಾಡಿದ್ದಾರೆ.
ಹಲ್ಲೆ ನಡೆದ ಸಂದರ್ಭ ಗಣೇಶ್ ಉದನಡ್ಕ ಹೆಸರು ಕೇಳಿ ಬಂದಿತ್ತು.
ಮಂಗಳವಾರ ಕಾಣಿಯೂರಿನಲ್ಲಿ ನಡೆಸಲಾದ ಈ ಸುದ್ದಿಗೋಷ್ಟಿಯಲ್ಲಿ ಮಹಿಳೆಯ ಅತ್ಯಾಚಾರ ಯತ್ನ ಹಾಗೂ ಹಲ್ಲೆ ಎರಡು ಘಟನೆಯನ್ನು ಮುಸ್ಲಿಂ ವರ್ತಕರು ಖಂಡಿಸಿದ್ದರು. ಈ ವಿಚಾರವಾಗಿ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದ್ದು, ಇದು ಶುಕ್ರವಾರದಂದು ನಡೆಯಲಿರುವ ಪ್ರತಿಭಟನೆಯ ತೀವ್ರತೆಯನ್ನು ಹತ್ತಿಕ್ಕುವ ಪ್ರಯತ್ನ ಎಂದು ಕಿಡಿಕಾರಿದ್ದಾರೆ. ಅಲ್ಲದೇ, ನಿಮ್ಮ ಈ ಸುದ್ದಿಗೋಷ್ಟಿಯು ಸಂಘಪರಿವಾರದ ಮುಂದೆ ಮಾಡಲಾದ ಶರಣಾಗತಿ ಎಂದು ಆರೋಪಿಸಲಾಗಿದೆ.
ಸುದ್ದಿಗೋಷ್ಟಿಯಲ್ಲಿ ಏನು ಹೇಳಿದ್ದರು?
ಕಾಣಿಯೂರಿನ ಸಭಾಭವನವೊಂದರಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಸುಮಾರು 15 ಮಂದಿ ವ್ಯಾಪಾರಿಗಳು ಹಾಜರಿದ್ದು ಮಾತನಾಡಿದ್ದರು.
"ಬಟ್ಟೆ ವ್ಯಾಪಾರಿಗಳು ಮಾರ್ವಾಡಿಗಳೆಂದು ಭಾವಿಸಿ ಹಲ್ಲೆ ನಡೆಸಲಾಗಿದೆ. ಉತ್ತರ ಪ್ರದೇಶದ ಮಾದರಿಯ ಗೂಂಡಾ ಕೃತ್ಯ ಇದಲ್ಲ. ಹಲ್ಲೆಯಾದ ಬಳಿಕವೂ ಅವರನ್ನು ಆಸ್ಪತ್ರೆಗೆ ದಾಖಲಿಸಲು ಹಿಂದೂಗಳು ನೆರವಾಗಿದ್ದರು. ಕಾಣಿಯೂರಿನಲ್ಲಿ ಇಂತಹ ಘಟನೆ ಇದುವರೆಗೂ ನಡೆದಿಲ್ಲ. ಹಿಂದೂ-ಮುಸ್ಲಿಮರು ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದಾರೆ" ಎಂದು ಘಟನೆ ಕುರಿತು ಸಮರ್ಥಿಸಿಕೊಂಡಿದ್ದರು. ಮಾತ್ರವಲ್ಲದೇ ಮಾತನಾಡಿದ ಪ್ರತಿಯೊಬ್ಬ ವ್ಯಾಪಾರಿ ಅನೈತಿಕ ಪೊಲೀಸ್ ಗಿರಿಯ ವೀಡಿಯೋದಲ್ಲಿ ಭಾಗಿಯಾಗಿದ್ದಾರೆನ್ನಲಾದ ಕಾಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಪರವಹಿಸಿ ಹೇಳಿಕೆ ನೀಡಿದ್ದರು.
ಮುಸ್ಲಿಮರ ತಗಾದೆ ಏನು?
ಸುದ್ದಿಗೋಷ್ಟಿ ನಡೆಸಿ ಅನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿದ್ದು ಮುಸ್ಲಿಮರ ಒಂದು ವರ್ಗದ ಆಕ್ರೋಶಕ್ಕೆ ಕಾರಣವಾಗಿದೆ. ಹೀಗೆ ಖಂಡಿಸಿದವರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ಕೂಡಾ ಸೇರಿದ್ದಾರೆ. "ಆರೋಪಿಗಳನ್ನು ರಕ್ಷಿಸುವ ಹುನ್ನಾರದಿಂದ ಇಂತಹ ವ್ಯತ್ಯಸ್ಥ ಹೇಳಿಕೆಯನ್ನು ಕೊಡಲಾಗ್ತಿದೆ. ಹಲ್ಲೆಗೊಳಗಾದವರು ಮುಸ್ಲಿಮರೋ, ಮಾರ್ವಾಡಿಗಳೋ ಅನ್ನೋದು ಮುಖ್ಯವಲ್ಲ. ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲು ಇದ್ಯಾವುದೂ ಸಮರ್ಥನೀಯವಲ್ಲ. ಹಲ್ಲೆಕೋರರು ಸ್ವಚ್ಛಂದವಾಗಿ ವಿಹರಿಸುವಾಗ ಅದನ್ನು ಖಂಡಿಸಲಾಗದವರು, ನಿಮ್ಮ ಪ್ರಬುದ್ಧತೆಯನ್ನು ಯಾರಲ್ಲಾದರೂ ಅಡವಿಡುವುದು ಸೂಕ್ತ" ಎಂದು ತಮ್ಮ ಪತ್ರಿಕಾ ಪ್ರಕಟಣೆ ಮೂಲಕ ಕಿಡಿಕಾರಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ 'ಮುನಾಫಿಕ್' ಪಟ್ಟ
ಸೋಶಿಯಲ್ ಮೀಡಿಯಾದಲ್ಲಂತೂ ಕಾಣಿಯೂರಿನ ಮುಸ್ಲಿಂ ವರ್ತಕರ ಸುದ್ದಿಗೋಷ್ಟಿ ಮುಸ್ಲಿಮರ ನಡುವೆ ಕಿಡಿ ಹೊತ್ತಿಸಿದೆ. ವಾಟ್ಸಾಪ್ ಗ್ರೂಪ್ ಗಳಲ್ಲಿ ಸುದ್ದಿಗೋಷ್ಟಿ ನಡೆಸಿದವರನ್ನು 'ಮುನಾಫಿಕ್' (ಧರ್ಮ ಭ್ರಷ್ಟರು ಅನ್ನೋ ಅರ್ಥದಲ್ಲಿ) ಎಂದು ಕರೆದಿದ್ದಾರೆ. ಸಂಘ ಪರಿವಾರದ ಮುಂದೆ ನಿಮ್ಮದು ಪುಕ್ಕಲುತನ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಜನಾ ಮಂದಿರಲ್ಲಿ ಸುದ್ದಿಗೋಷ್ಟಿ ನಡೆಸಲಾಗಿದೆ ಎಂದು ಕೂಡಾ ಆರೋಪಿಸಲಾಗಿದೆ.
ಒಟ್ಟಿನಲ್ಲಿ ಮುಸ್ಲಿಂ ವರ್ತಕರ ಸಂಘದ ಹೆಸರಿನಲ್ಲಿ ನಡೆದ ಸುದ್ದಿಗೋಷ್ಟಿ ಈಗ ಮುಸ್ಲಿಂ ಸಮುದಾಯದ ನಡುವೆಯೇ ಕಿಡಿ ಹಚ್ಚಿದೆ. ಮುಂದೆ ಈ ವಿಚಾರ ಅದೆಲ್ಲಿಗೆ ತಲುಪುತ್ತೆ ಅನ್ನೋದು ಸದ್ಯ ಪ್ರಶ್ನೆಯಾಗಿ ಉಳಿದಿದೆ.