Ayyana Mane Web Series: ಒಟಿಟಿಯಲ್ಲಿ ಸಂಚಲನ ಸೃಷ್ಟಿಸಿದ 'ಅಯ್ಯನ ಮನೆ'; ಇದು ನಿಗೂಢ ಸಾವಿನ ಕಹಾನಿ!
Sunday, April 27, 2025
'ಅಯ್ಯನ ಮನೆ' ವೆಬ್ ಸೀರೀಸ್ ವಿಮರ್ಶೆ
ರೇಟಿಂಗ್ಸ್: 4/5
Zee 5 ನಲ್ಲಿ ಬಿಡುಗಡೆ ಕಂಡ ಕನ್ನಡದ ಮೊದಲ ವೆಬ್ ಸೀರೀಸ್ 'ಅಯ್ಯನ ಮನೆ' ಹೊಸ ಸಂಚಲನ ಸೃಷ್ಟಿಸಿದೆ. ಮಲೆನಾಡಿನ ಪ್ರಕೃತಿ ಸೊಬಗಿನ ನಡುವೆ ಇರುವ 'ಅಯ್ಯನ ಮನೆ' ಸುತ್ತ ನಡೆಯುವ ಮರ್ಡರ್ ಕಹಾನಿಯ ನಿಗೂಢತೆಯೇ ಈ ಸೀರೀಸ್‌ನ ಒನ್ ಲೈನ್ ಸ್ಟೋರಿ. 6 ಎಪಿಸೋಡ್‌ನಲ್ಲಿ ಮೂಡಿಬಂದಿರುವ ಈ ಸೀರೀಸ್, ಹೆಚ್ಚೆಂದರೆ ಒಂದೊಂದು ಎಪಿಸೋಡ್ 20 ನಿಮಿಷಗಳಿವೆ. ಕೊನೆಯ 2 ಎಪಿಸೋಡ್ ಕುತೂಹಲ ಹೆಚ್ಚಿಸುತ್ತೆ. ಕೊಂಡಯ್ಯ ದೈವ ನೆಲೆಯಾಗಿದ್ದಕ್ಕೆ ಇಲ್ಲಿಗೆ ಅಯ್ಯನ ಮನೆ ಅನ್ನೋ ಹೆಸರು. ಒಂದೊಮ್ಮೆ ಈ ಮನೆಯಲ್ಲಿ ಆಗುವ ಸಾಲು ಸಾಲು ಅಸಹಜ ಸಾವಿಗೆ ದೈವದ ಮುನಿಸು, ದೆವ್ವದ ಕಾಟ, ಯಾರದ್ದೋ ಕಾಲ್ಗುಣ, ಇನ್ಯಾವುದೋ ಕಾಯಿಲೆ ಹೀಗೆ ಹಲವು ಆ್ಯಂಗಲ್‌ನಲ್ಲಿ ನೋಡುಗರನ್ನು ಕುತೂಹಲದ ಒರೆಗೆ ಹಚ್ಚುತ್ತದೆ. ಕೊನೆಗೆ, ಕೊಲೆಗೆ ಕಾರಣ ಏನು? ದೈವದ ಪಾತ್ರವೇನು? ಕೊಲೆಯೋ ಅಥವಾ ಆಕಸ್ಮಿಕ ಸಾವೋ? ಆತ್ಮಹತ್ಯೆಯೋ? ಹೀಗೆ ಎಲ್ಲ ಪ್ರಶ್ನೆಗೆ 'ಅಯ್ಯನ ಮನೆ' ವೆಬ್ ಸೀರೀಸ್ ನೋಡಲೇಬೇಕು.
ಕನ್ನಡದ ಜೊತೆಗೆ ವೆಬ್ ಸೀರೀಸ್ ಹಿಂದಿ ಭಾಷೆಯಲ್ಲೂ ಲಭ್ಯವಿದೆ. ರಮೇಶ್ ಇಂದಿರಾ ನಿರ್ದೇಶನದ ಈ ಸೀರೀಸ್‌ನಲ್ಲಿ ಹೆಚ್ಚು ಹಿತವೆನಿಸುವುದು ಪಾತ್ರಗಳ ಆಯ್ಕೆ. ಹೌದು, ಪಾತ್ರಕ್ಕೆ ತಕ್ಕುದಾದ ಕಲಾವಿದರನ್ನ ಆಯ್ಕೆ ಮಾಡಿರೋದು ಈ ಸಿನೆಮಾದ ಪ್ಲಸ್ ಪಾಯಿಂಟ್. ಆದರೆ, 'ಕಾಂತಾರ' ಖ್ಯಾತಿಯ ಮಾನಸಿ ಸುಧೀರ್ (ನಾಗಲಾಂಬಿಕೆ) ಅವರದ್ದು ಪ್ರಮುಖ ಪಾತ್ರವೆನಿಸಿದರೂ, ಹೆಚ್ಚೇನೂ ತ್ರಾಸದಾಯಕವಲ್ಲದ ನಟನೆ, ಆ ಪಾತ್ರಕ್ಕೆ ಅವರು ಇನ್ನಷ್ಟು ಪರಕಾಯ ಪ್ರವೇಶ ಮಾಡಬೇಕಿತ್ತೇನೋ ಅನ್ನೋ ಭಾವನೆ ಮೂಡಿಸುತ್ತೆ.
ಉಳಿದಂತೆ ನಾಯಕನಾಗಿ ಗುರುತಿಸಿಕೊಂಡಿರುವ, ಈ ಹಿಂದೆ ಹಲವು ಕಿರಿತೆರೆಯಲ್ಲಿ ಪಾತ್ರ ನಿರ್ವಹಿಸಿರುವ ಅಕ್ಷಯ್ ನಾಯಕ್ (ದುಷ್ಯಂತ), ನಾಯಕಿ ಖುಷಿ ರವಿ (ಜಾಜಿ) ನಟನೆ ಬಲು ಇಷ್ಟವಾಗುತ್ತದೆ. ಶೋಭರಾಜ್ ಪಾವೂರು (ಮಹೇಶ), ಅರ್ಚನಾ ಕೊಟ್ಟಿಗೆ (ಚಾರುಲತಾ) ಅವರ ಪಾತ್ರಗಳಂತೂ ಅದ್ಭುತ ಎನಿಸುತ್ತದೆ. ಉಳಿದಂತೆ ಸಣ್ಣ ಪಾತ್ರದಲ್ಲಿ ರಮೇಶ್ ಇಂದಿರಾ ಅವರ ಎಂಟ್ರಿನೂ ಕಾಣಸಿಗುತ್ತೆ. ಅಯ್ಯನ ಮನೆಯ ಆಳು, ಕಾರು ಡ್ರೈವರು, ಉಳಿದ ಸೊಸೆಯಂದಿರು, ಪೊಲೀಸ್ ಅಧಿಕಾರಿಯ ಹೀಗೆ ಎಲ್ಲಾ ಪಾತ್ರಗಳು ಅಚ್ಚುಕಟ್ಟಾಗಿವೆ. ಹಿನ್ನೆಲೆ ಸಂಗೀತದಲ್ಲಿ ಒಂದೊಮ್ಮೆ ಹಿತವೆನಿಸುವ ಟ್ಯೂನ್‌ಗಳು ಕೆಲವು ಸೆಕೆಂಡ್‌ಗಳಷ್ಟೇ ಮೂಡಿ ಬಂದಿದ್ದು, ಖುಷಿ ಎನಿಸುತ್ತದೆ. ಕ್ಲೈಮ್ಯಾಕ್ಸ್‌ಗೆ ಹೆಚ್ಚು ಒತ್ತು ನೀಡಿ, ಕಥೆಯನ್ನು ಇನ್ನೂ ಸ್ವಲ್ಪ ದೀರ್ಘಗೊಳಿಸಿದ್ದರೆ ಮತ್ತೊಂದಿಷ್ಟು ಪರಿಣಾಮಕಾರಿಯಾಗಿ ಸೀರೀಸ್‌ನ ಮುಂದಿಡಬಹುದಿತ್ತು ಅನ್ನೋ ಭಾವನೆ ಮೂಡಿಸುತ್ತೆ.
ಅದೆಲ್ಲರ ಹೊರತಾಗಿಯೂ, ಕನ್ನಡದಲ್ಲೊಂದು ಅದ್ಭುತ ವೆಬ್ ಸೀರೀಸ್ ಅಂದ್ರೆ ತಪ್ಪಾಗದು. ದಶಕಗಳ ಹಿಂದಿನ ಕಥೆಯಾದರೂ, ಎಲ್ಲೂ ಅನಗತ್ಯ ಮೂಢನಂಬಿಕೆಯನ್ನು ಪ್ರೋತ್ಸಾಹಿಸಿಲ್ಲ. ಇಂತಹದ್ದೇ ಕಥೆಯನ್ನ ಆಧರಿಸಿ ಹಲವು ಸಿನೆಮಾಗಳು ಬಂದಿವೆಯಾದರೂ, ಅಂತಹದ್ದರಲ್ಲಿ ಈ 'ಅಯ್ಯನ ಮನೆ' ಕೊಂಚ ಭಿನ್ನ ಎನಿಸಿಕೊಳ್ಳುತ್ತೆ. ಮೊದಲಿನಿಂದ ಕೊನೆಯ ಎಪಿಸೋಡ್‌ವರೆಗೂ ಈ ಸೀರೀಸ್ ನೋಡಿಸಿಕೊಂಡು ಹೋಗಿಸುತ್ತೆ. ಕ್ಷಣಕ್ಷಣದ ಟ್ವಿಸ್ಟ್ ಅಂತಹ ಆಸಕ್ತಿ ಮೂಡಿಸುವುದೇ ಈ ವೆಬ್ ಸೀರೀಸ್‌ನ ಪ್ಲಸ್ ಪಾಯಿಂಟ್.