.jpeg)
PUTTUR: ಕೊಡೆಯಡಿ ಮಲಗಿದ್ದ ಕಂದಮ್ಮನ ಸಂಕಷ್ಟಕ್ಕೆ ಮರುಗಿದ ಮನ!!
ಪುತ್ತೂರು: ಬಿಸಿಲ ಬೇಗೆಯಿಂದ ರಕ್ಷಣೆ ನೀಡಲು ಕೊಡೆಯ ಬಿಡಿಸಿ ಅದರಡಿ ಮಲಗಿಸಿದ ಕಂದಮ್ಮ, ಬಣ್ಣ ಕಳೆದುಕೊಂಡು ಬಿರುಕು ಬಿಟ್ಟ ಗೋಡೆಗಳು, ಕುಸಿದ ಛಾವಣಿ, ವಿದ್ಯುತ್ ಇಲ್ಲದೆ ಚಿಮಿಣಿ ದೀಪದಲ್ಲಿ ರಾತ್ರಿ ಕಳೆಯುವ ದುಃಸ್ಥಿತಿ, ಒಪ್ಪೊತ್ತಿನ ಊಟಕ್ಕೆ ಕಣ್ಣೀರಾಗುವ ಮನೆ ಮಂದಿ... ಇದು ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಇರ್ವತ್ತೂರು ಗ್ರಾಮದ ಎಡ್ತೂರು ಕಲಾಬಾಗಿಲು ನಿವಾಸಿ ಪರಿಶಿಷ್ಟ ಜಾತಿಯ ದಿ. ವಿಶ್ವನಾಥ ಅವರ ಪತ್ನಿಯ ವಾಸದ ಮನೆಯ ಮನ ಮಿಡಿಯುವ ದೃಶ್ಯ.
ದುಸ್ತರವಾದ ಬದುಕು:
ಎಡ್ತೂರು ಕಲಾಬಾಗಿಲು ನಿವಾಸಿ ಪರಿಶಿಷ್ಟ ಜಾತಿಯ ವಿಶ್ವನಾಥ ಇರ್ವತ್ತೂರು ಗ್ರಾಮ ಪಂಚಾಯತ್‍ನಲ್ಲಿ ವಾಟರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಕೆಲವ ವರ್ಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ನಿಧನ ಹೊಂದಿದ್ದರು. ದಿ. ವಿಶ್ವನಾಥ ಹರಿಜನ ಅವರ ಪತ್ನಿ ಜಾನಕಿಯವರು ಎರಡು ಮಕ್ಕಳ ತಾಯಿ. ಒಂದು ಗಂಡು, ಒಂದು ಹೆಣ್ಣು. ಈರ್ವರಿಗೂ ಮದುವೆ ಆಗಿದೆ. ಜಾನಕಿ ಮತ್ತು ಮಗ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಾರೆ. ಮಗನ ಅನಾರೋಗ್ಯಕರ ಹವ್ಯಾಸಗಳಿಂದ ಇಡೀ ಕುಟುಂಬದ ನಿರ್ವಹಣೆಯ ಜವಾಬ್ದಾರಿ ಜಾನಕಿಯ ಮೇಲಿದೆ. ಅವರ ವಾಸದ ಮನೆ ಸೂಕ್ತ ನಿರ್ವಹಣೆ ಇಲ್ಲದೆ ಇನ್ನೇನು ಬೀಳುವ ಸ್ಥಿತಿಯಲ್ಲಿದ್ದು, ಮಕ್ಕಳ ಜೀವನವು ತುಂಬಾ ಸಂಕಷ್ಟಕ್ಕೊಳಗಾಗುವಂತಾಗಿತ್ತು.
ಕೊಡೆಯಡಿ ಕಂದಮ್ಮ:
ಜಾನಕಿಯವರ ಹಳೆಯ ಮನೆಯ ಛಾವಣಿ ಅಲ್ಲಲ್ಲಿ ಕುಸಿದು ಅದರೊಳಗೆ ಪ್ರವೇಶಿಸುವುದೂ ಅಪಾಯಕಾರಿಯಾಗಿತ್ತು. ಜತೆಗೆ, ಮನೆಯ ವಿದ್ಯುತ್ ಸ್ವಿಚ್, ವಯರ್‍ಗಳೆಲ್ಲಾ ಕಿತ್ತು ಹೋಗಿ ಕರೆಂಟಿಲ್ಲದೆ ಅಂಧಕಾರದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನಲೆಯಲ್ಲಿ ಮಗನ ಪುಟ್ಟ ಮಗುವನ್ನು ಬಿಸಿಲಿನಿಂದ ರಕ್ಷಿಸಲು ಜಾನಕಿಯವರು ಕೊಡೆಯನ್ನು ಬಿಡಿಸಿ ಅದರಡಿಯಲ್ಲಿ ಮಲಗಿಸಿದ್ದರು. ಇದೇ ಸಂದರ್ಭ ಈ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಮಾಜಿ ಸದಸ್ಯ, ಬಿಜೆಪಿ ನಾಯಕ ಮೂರ್ಜೆಯ ತುಂಗಪ್ಪ ಬಂಗೇರ ಅವರ ಕಣ್ಣಿಗೆ ಬಿತ್ತು. ಇದನ್ನು ಕಂಡ ತುಂಗಪ್ಪ ಅವರು ಜಾನಕಿಯವರ ಮನೆಯ ದುಃಸ್ಥಿಗೆ ಕಣ್ಣೀರಾದರು. ಜಾನಕಿಯವರ ಸಂಕಷ್ಟಕ್ಕೆ ಸ್ಪಂದಿಸಿದ ಅವರು ತಡ ಮಾಡದೆ ಅವರಿಗೆ ಹೊಸ ಬದುಕನ್ನು ನೀಡಲು ನಿರ್ಧರಿಸಿದರು.
ಉಸ್ತುವಾರಿಯಲ್ಲಿ ಕೆಲಸ:
ತುಂಗಪ್ಪ ಬಂಗೇರ ಅವರು ಜಾನಕಿಯವರ ಮನೆಯ ಅಂಗಳದಲ್ಲೇ ನಿಂತು ಮನೆಯ ಛಾವಣಿಯ ದುರಸ್ತಿ, ವಿದ್ಯುತ್ ಸಂಪರ್ಕದ ದುರಸ್ತಿ ಕಾರ್ಯಗಳನ್ನು ನಡೆಸಿದರು. ಅವರ ಉಸ್ತುವಾರಿಯಲ್ಲೇ ಜಾನಕಿಯವರ ಮನೆ ನಿಶ್ಚಿಂತೆಯಿಂದ ವಾಸ ಮಾಡಲು ಯೋಗ್ಯವನ್ನಾಗಿ ಮಾಡಿ ಕೊಟ್ಟರು. ಇದಕ್ಕೆ ತಗುಲಿದ ಸಂಪೂರ್ಣ ಖರ್ಚು ವೆಚ್ಚಗಳನ್ನು ತುಂಗಪ್ಪ ಅವರು ತನ್ನ ಕೈಯಿಂದಲೇ ಭರಿಸಿದರು. ಜಾನಕಿಯವರ ಮಗನಿಗೆ ದುಶ್ಚಟಗಳನ್ನು ಬಿಟ್ಟು ಉತ್ತಮ ಬದುಕು ನಡೆಸುವ ಪಾಠವನ್ನೂ ಹೇಳಿದ್ದಾರೆ. ಬಡವರ ಸಂಕಷ್ಟಕ್ಕೆ ಸ್ಪಂದಿಸುವ ತುಂಗಪ್ಪ ಬಂಗೇರ ಅವರ ಈ ಕಾರ್ಯ ಸರ್ವತ್ರ ಶ್ಲಾಘನೆಗೆ ಒಳಗಾಗಿದೆ. ಅವರ ಸೇವಾ ಕಾರ್ಯಕ್ಕೆ ಗ್ರಾಮಸ್ಥರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ನನ್ನ ಕರ್ತವ್ಯವೆಂಬ ಭಾವನೆ:
ಜಾನಕಿಯವರು ಮನೆ ದುರಸ್ಥಿಗೆ ಒಂದಿಷ್ಟು ಸಹಾಯವನ್ನು ಕೇಳಿದ್ದರು. ನಾನು ಅವರ ಮನೆಗೆ ಹೋಗಿ ನೋಡುವಾಗ ಮನ ಕಲಕುವ ದೃಶ್ಯ ಕಂಡು ಬಂದಿತ್ತು. ಬಡ ವರ್ಗದವರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಅವರ ಮನೆಯನ್ನು ವಾಸ ಯೋಗ್ಯವನ್ನಾಗಿ ಮಾಡಿ ಕೊಟ್ಟಿದ್ದೇನೆ. ಇದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ಪಂಚಾಯತ್‍ನಿಂದ ಇದಕ್ಕೆ ಯಾವುದೇ ಅನುದಾನ ಇಲ್ಲದ ಕಾರಣ ನಾನೇ ಸಂಪೂರ್ಣ ಖರ್ಚು ವೆಚ್ಚಗಳನ್ನು ಭರಿಸಿದ್ದೇನೆ.
- ತುಂಗಪ್ಪ ಬಂಗೇರ, ಮಾಜಿ ಸದಸ್ಯರು, ದ.ಕ. ಜಿಲ್ಲಾ ಪಂಚಾಯತ್
ಶ್ಲಾಘನೀಯ ಕಾರ್ಯ:
ತೀರಾ ಬಡತನದಲ್ಲಿರುವ ಜಾನಕಿಯವರ ಕಷ್ಟಕ್ಕೆ ಸ್ಪಂದಿಸಿರುವ ತುಂಗಪ್ಪ ಬಂಗೇರ ಅವರು ಇತರರಿಗೆ ಮಾದರಿಯಾಗಿದ್ದಾರೆ. ಜಾನಕಿಯವರ ಮನೆಯನ್ನು ದುರಸ್ಥಿ ಮಾಡಲು ಯಾರೊಬ್ಬರೂ ಸಹಾಯ ಮಾಡಿರಲಿಲ್ಲ. ಇದೀಗ ಜಾನಕಿಯವರು ನೆಮ್ಮದಿಯ ಬದುಕನ್ನು ನಡೆಸುವಂತಾಗಿದೆ.
- ರವಿಶಂಕರ್ ಹೊಳ್ಳ, ಉಪಾಧ್ಯಕ್ಷರು, ಪಿಲಾತ್ತಬೆಟ್ಟು ವ್ಯ.ಸೇ.ಸ.ಬ್ಯಾಂಕ್