.jpg)
ಪುತ್ತೂರು: ಸಾವರ್ಕರ್ ಸಭಾಭವನ ಉದ್ಘಾಟನೆಯಿಂದ ದೂರವುಳಿದ ಅಶೋಕ್ ರೈ; ವಿಹೆಚ್‌ಪಿ ಕಾರ್ಯಕ್ರಮದ ಬಳಿಕ ಶಾಸಕರ ಜಾಣ ನಡೆ!?
Sunday, December 15, 2024
ಪುತ್ತೂರು: ವಿನಾಯಕ ದಾಮೋದರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಎನ್ನುವುದನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಆಕ್ಷೇಪಿಸುತ್ತಲೇ ಬಂದಿದ್ದು, ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಾವರ್ಕರ್ ಹೆಸರಿನಲ್ಲಿ ನೂತನವಾಗಿ ನಿರ್ಮಿಸಲಾದ `ಸಾವರ್ಕರ್ ಸಭಾಭವನ'ದ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಸಂಘ ಪರಿವಾರದವರಾದ ಕಾಲೇಜಿನ ಆಡಳಿತ ಮಂಡಳಿಯವರು ಶಾಸಕ ಅಶೋಕ್‍ಕುಮಾರ್ ರೈ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಮೂಲಕ ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಾರಿಕೆ ನಡಸಿದ್ದಾರೆ ಎನ್ನಲಾಗಿತ್ತು. ಆದರೆ ಅಶೋಕ್ ಕುಮಾರ್ ರೈ ಗೈರುಹಾಜರಾಗುವ ಮೂಲಕ ಅಚ್ಚರಿಯ ನಡೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಪುತ್ತೂರು ನಗರದ ಪಂಚವಟಿಯಲ್ಲಿ ನಡೆದಿದ್ದ ವಿಶ್ವಹಿಂದೂ ಪರಿಷತ್ ಪುತ್ತೂರು ಪ್ರಖಂಡದ ನೂತನ ಕಾರ್ಯಾಲಯದ ಶಿಲಾನ್ಯಾಸ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಪಕ್ಷದವರಾದ ಶಾಸಕ ಅಶೋಕ್‍ಕುಮಾರ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರಿಗೆ ಸಂಘ ಪರಿವಾರದ ಪ್ರಮುಖರೊಬ್ಬರು ಸ್ವತಃ ಆಹ್ವಾನ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಅಶೋಕ್‍ಕುಮಾರ್ ರೈ ಮತ್ತು ಶಕುಂತಳಾ ಶೆಟ್ಟಿ ಅವರು ಪಾಲ್ಗೊಂಡು ಅಚ್ಚರಿ ಮೂಡಿಸಿದ್ದರು. ಈ ವಿದ್ಯಮಾನ ಕಾಂಗ್ರೆಸ್ ವಲಯದ ಮುಸ್ಲಿಂ ಸಮುದಾಯದಲ್ಲಿ ಭಾರೀ ಸಂಚಲನ ಸೃಷ್ಠಿಸಿತ್ತು. ಅಲ್ಪಸಂಖ್ಯಾತ ಸಮುದಾಯದ ಕೆಲವು ಮಂದಿಯಿಂದ ಶಾಸಕರ ನಡೆಗೆ ಆಕ್ಷೇಪಗಳೂ ವ್ಯಕ್ತವಾಗಿತ್ತು.
ಈ ವಿದ್ಯಾಮಾನ ತಣ್ಣಗಾದ ಬೆನ್ನಲ್ಲೇ ಸಾರ್ವಕರ್ ಸಭಾಭವನದ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಶಾಸಕ ಅಶೋಕ್‍ಕುಮಾರ್ ರೈ ಅವರನ್ನು ಮುಖ್ಯ ಅತಿಥಿಯಾಗಿ ಆಮಂತ್ರಿಸಲಾಗಿದ್ದು, ಆಮಂತ್ರಣ ಪತ್ರಿಕೆಯಲ್ಲಿ ಅಶೋಕ್‍ಕುಮಾರ್ ರೈ ಅವರನ್ನು ಮುಖ್ಯ ಅತಿಥಿ ಎಂದು ಉಲ್ಲೇಖಿಸಲಾಗಿತ್ತು. ಇದು ಶಾಸಕ ಅಶೋಕ್‍ಕುಮಾರ್ ರೈ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ ಎಂಬ ಮಾತುಗಳು ಕೇಳಿ ಬರಲಾರಂಭಿಸಿತ್ತು. ಸಾವರ್ಕರ್ ಸಭಾಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದು ಶಾಸಕರು ಏನು ಮಾತನಾಡುತ್ತಾರೆ ಎಂಬ ಕುತೂಹಲ ಹೆಚ್ಚಿನ ಮಂದಿಯಲ್ಲಿತ್ತು.
ಆದರೆ ಶನಿವಾರ ಬೆಳಿಗ್ಗೆ ಪುತ್ತೂರಿನ ಹಾರಾಡಿ ಸರ್ಕಾರಿ ಶಾಲೆಯಲ್ಲಿ ನಡೆದಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಾಸಕರು ಬಳಿಕ ಸಾವರ್ಕರ್ ಸಭಾಭವನ ಲೋಕಾರ್ಪಣಾ ಕಾರ್ಯಕ್ರಮಕ್ಕೆ ತೆರಳದೆ ನೇರವಾಗಿ ಮಂಗಳೂರಿನ ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳಿರುವುದಾಗಿ ತಿಳಿದು ಬಂದಿದೆ. ಸಾವರ್ಕರ್ ಸಭಾಭವನದ ಲೋಕಾರ್ಪಣಾ ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ ಶಾಸಕ ಅಶೋಕ್‍ಕುಮಾರ್ ರೈ ಅವರನ್ನು ಮುಖ್ಯ ಅತಿಥಿ ಎಂದು ನಮೂದಿಸಲಾಗಿದ್ದರೂ ಕಾರ್ಯಕ್ರಮದ ಕುರಿತು ಪುತ್ತೂರಿನಲ್ಲಿ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಸಾವರ್ಕರ್ ಸಭಾಭವನವನ್ನು ಶಾಸಕ ಅಶೋಕ್‍ಕುಮಾರ್ ರೈ ಅವರು ಉದ್ಘಾಟಿಸಲಿದ್ದಾರೆ ಎಂದು ಕಾಲೇಜಿನ ಆಡಳಿತ ಸಮಿತಿಯವರು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡಿದ್ದರು.