
BJP: ಬಿಜೆಪಿ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನಿಗೆ ಅಭಿನಂದನೆ!!
ಪುತ್ತೂರು: ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯೊಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತನಿಗೆ ಅಭಿನಂದಿಸಿದ ಪ್ರಸಂಗವೊಂದು ನಡೆದಿದೆ. ಇದೇನೂ ಅಪ್ಪಿತಪ್ಪಿ ನಡೆದದ್ದಲ್ಲ. ಬದಲಾಗಿ ಶಾಸಕ ಅಶೋಕ್ ಕುಮಾರ್ ರೈ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡು ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಎಂಬವರು ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಹಾಗಾಗಿ ಇಂದು ಪುತ್ತೂರು ಬಿಜೆಪಿ, ಬಡವರಿಗೆ ಸಿಗಬೇಕಾದ ಕೆಲ ಯೋಜನೆಯ ಸಹಾಯಧನದ ವಿಳಂಬ ನೀತಿಯನ್ನ ವಿರೋಧಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದರು. ಈ ಸಂದರ್ಭ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಹಕೀಂ ಕೂರ್ನಡ್ಕ ಅವರ ಆಡಿಯೋ ಸಾರಾಂಶವನ್ನ ಪ್ರಸ್ತಾಪಿಸುತ್ತಾ, ಅಶೋಕ್ ರೈ ಅವರು ಎಷ್ಟು ಕೆಲಸ ಮಾಡಿದ್ದಾರೆ. ಅವರು ಪುತ್ತೂರಿನ ಅಭಿವೃದ್ಧಿಗೆ ಏನೇನೂ ಮಾಡಿದ್ದಾರೆ ಎಂಬುದನ್ನ ಓರ್ವ ನೈಜ ಕಾಂಗ್ರೆಸ್ ಕಾರ್ಯಕರ್ತನೇ ಅಸಮಾಧಾನಗೊಂಡು ಹೇಳಿರುವುದು ಎಲ್ಲರಿಗೂ ತಿಳಿದಿದೆ.
ಅಶೋಕ್ ರೈ ಅವರು ಅನುದಾನ ಬಂದಿದೆ ಅಂತ ಹೇಳ್ತಾರೆ. ಪುತ್ತೂರು ಅಭಿವೃದ್ಧಿಯ ಪಥದಲ್ಲಿದೆ ಅಂತಾರೆ. ಆದ್ರೆ ಪುತ್ತೂರು ಶಾಸಕ ಸಂಜೀವ ಮಠಂದೂರು ಇದ್ದ ಅವಧಿಯಲ್ಲಿ ಆದಷ್ಟು ಅಭಿವೃದ್ಧಿ ಕಂಡಿಲ್ಲ. ಬಿಜೆಪಿಯ ಸಂಜೀವ ಮಠಂದೂರು ಅವರು ಅಭಿವೃದ್ಧಿ ಮಾಡಿ ತೋರಿಸಿದ್ದಾರೆ. ಆದ್ರೆ ಅಶೋಕ್ ರೈ ಅವರನ್ನ ಗೆಲ್ಲಿಸಿದ್ದಕ್ಕೆ ನಮಗೆ ಬೇಜಾರಾಗ್ತಿದೆ. ನಮ್ಮ ತಲೆ ನಾವೇ ಹೊಡೆಯುಂತಾಗಿದೆ. ಪಾರ್ಟ್ ಟೈಂ ರಾಜಕಾರಣಿಯಾದರೆ ಇದೇ ಅವಸ್ಥೆ. ಪಕ್ಷದ ಕಾರ್ಯಕರ್ತರು ಅವರ ಜೊತೆಗಿಲ್ಲ. ಯಾರನ್ನೋ ಜೊತೆಗಿಟ್ಟುಕೊಂಡು ತಿರುಗಾಡುತ್ತಿದ್ದಾರೆ ಎಂಬಿತ್ಯಾದಿ ಸತ್ಯಾಂಶವನ್ನ ಓರ್ವ ನೈಜ ಕಾಂಗ್ರೆಸ್ ಕಾರ್ಯಕರ್ತ ಅಸಮಾಧಾನ ಹೊರ ಹಾಕಿದ್ದಾನೆ. ಹೀಗಿರುವಾಗ ಸ್ವತಃ ಕಾಂಗ್ರೆಸ್ಸಿಗರಿಗೇ ಗೊತ್ತಾಗಿದೆ ಪುತ್ತೂರು ಅಭಿವೃದ್ಧಿ ಆಗ್ತಿಲ್ಲ. ಅನುದಾನ ಬರ್ತಾ ಇಲ್ಲ ಎಂಬುದು. ಹಾಗಾಗಿ ಹಕೀಂ ಕೂರ್ನಡ್ಕ ಅವರನ್ನ ಬಿಜೆಪಿ ಅಭಿನಂದಿಸುತ್ತದೆ ಎಂದರು. ಇನ್ನು ಪುತ್ತೂರಿನ ಶಾಸಕರು ಹಾಗೂ ಅಭಿವೃದ್ಧಿಯ ಅಸಮಾಧಾನ ಹೊರಹಾಕಿದ ಹಕೀಂ ಕೂರ್ನಡ್ಕ ಅವರಿಗೆ ಧನ್ಯವಾದ ಎಂದು ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಹೇಳಿರುವುದು ವಿಶೇಷವಾಗಿತ್ತು.