
ಬಂಟ್ವಾಳ: ವಿಟ್ಲ ಜುಮ್ಮಾ ಮಸೀದಿ ವಿರುದ್ಧ ಸರಕಾರಿ ಭೂಮಿ ಕಬಳಿಕೆ ಆರೋಪ; ಮಸೀದಿ ಆಡಳಿತ ಸಮಿತಿ ಹೇಳುವುದೇನು?
ಬಂಟ್ವಾಳ: ವಕ್ಫ್ ಜಮೀನು ವಿವಾದ ಈಗ ದಕ್ಷಿಣ ಕನ್ನಡ ಜಿಲ್ಲೆಗೂ ಕಾಲಿರಿಸಿದೆ. ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಜುಮ್ಮಾ ಮಸೀದಿ ವಿರುದ್ಧ ಸರಕಾರಿ ಭೂಮಿಯನ್ನು ಕಬಳಿಸಿದ ಆರೋಪವನ್ನು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ಆರ್‌ಸಿ ನಾರಾಯಣ ರೆಂಜ ಮಾಡಿದ್ದಾರೆ. ಅಲ್ಲದೇ, ಜಾಲತಾಣಗಳಲ್ಲಿ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು, ಸರಕಾರಿ ಜಮೀನನ್ನು ಉಳಿಸಿಕೊಳ್ಳಲು ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ. ವಿಟ್ಲ ಜುಮ್ಮಾ ಮಸೀದಿಗೆ 5.48 ಎಕ್ರೆ ಜಾಗವನ್ನು ವಕ್ಫ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮಸೀದಿ ಅಧ್ಯಕ್ಷರ ಪ್ರತಿಕ್ರಿಯೆ ಏನು?
5.48 ಸರಕಾರಿ ಭೂಮಿಯನ್ನು ವಿಟ್ಲ ಜುಮ್ಮಾ ಮಸೀದಿ ಕಬಳಿಸಿದೆ ಅನ್ನೋ ಆರೋಪ ಕುರಿತು ಸ್ಪಷ್ಟನೆಗಾಗಿ ವಿಟ್ಲ ಜುಮ್ಮಾ ಮಸೀದಿ ಹಾಲಿ ಅಧ್ಯಕ್ಷ ಅಶ್ರಫ್ ಮೊಹಮ್ಮದ್ ಅವರನ್ನು 'ದಿ ನ್ಯೂಸ್ ಅವರ್' ಸಂಪರ್ಕಿಸಿತು. "ಸರಕಾರಿ ಜಮೀನು ಆದರೂ 600 ವರ್ಷಗಳ ಹಿಂದಿನಿಂದಲೂ ಇಲ್ಲಿ ಮಸೀದಿ ಇದೆ. ಭಾರೀ ಹಳೆಯ ಈ ಮಸೀದಿಗೆ ಬ್ರಿಟಿಷರ ಕಾಲದಿಂದಲೂ ತಸ್ತೀಕು ಬರುತ್ತಿತ್ತು. ಈ ಭಾಗಕ್ಕೆ 'ಪಲ್ಲಿ ಬಿತ್ತ್‌ಲ್' ಅನ್ನೋ ಹೆಸರೇ ಇದೆ. ಹಾಗೆ ನೋಡಿದರೆ ಮಸೀದಿ ಆವರಣದಲ್ಲಿದ್ದ ಕೆಲವು ಎಕ್ರೆ ಜಾಗವನ್ನ ಸರಕಾರದ ಬೇರೆ ಬೇರೆ ಉದ್ದೇಶಗಳಿಗಾಗಿ ಬಿಟ್ಟು ಕೊಡಲಾಗಿದೆ. ಹಾಲಿ ಇರುವ ವಕ್ಫ್ ಮಾಡಿರುವ 5.48 ಜಾಗದಲ್ಲಿ ಮಸೀದಿ, ದಫನ ಭೂಮಿ ಇರುವುದನ್ನ ಗಮನಿಸಬಹುದಾಗಿದೆ. ಇಲ್ಲಿ ಹಿಂದೆಯೂ ದಫನ ಭೂಮಿ, ಮಸೀದಿಯಿದ್ದು 2000 ಇಸವಿ ವೇಳೆಗೆ ಇದನ್ನ ವಕ್ಫ್ ಮಾಡಲಾಗಿದೆ. 2018 ರಲ್ಲಿ ಎಸಿ ಕೋರ್ಟ್‌ನಲ್ಲಿಯೂ ಮಸೀದಿ ಪರವೇ ಆದೇಶ ಬಂದಿದ್ದು, ವಕ್ಫ್ ಹೆಸರಿಗೆ ಆರ್‌ಟಿಸಿ ಮಾಡಲಾಗಿದೆ. ನಮ್ಮ ಬಳಿ ಎಲ್ಲ ದಾಖಲೆಗಳು ಇದ್ದು, ಸ್ಥಳೀಯವಾಗಿ ಮಸೀದಿ ಜಾಗದಿಂದ ಯಾರಿಗೂ ಅನ್ಯಾಯವಾಗಿಲ್ಲ. ದಾಖಲೆಗಳನ್ನು ಕೇಳಿದರೆ ಅಧಿಕಾರಿಗಳಿಗೆ ನೀಡಲು ನಾವು ಸಿದ್ಧರಿದ್ದೇವೆ. ಯಾರೇ ಬಂದರೂ ಅಂತಹವರಿಗೆ ಮಸೀದಿಯ ಜಮೀನಿಗೆ ಸಂಬಂಧಿಸಿದ ದಾಖಲೆ ತೋರಿಸಲು ನಾವು ತಯಾರಿದ್ದೇವೆ" ಎಂದು ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.
ಸದ್ಯ ಪಹಣಿ ಪತ್ರವನ್ನು ಪರಿಶೀಲಿಸಿದ್ದಲ್ಲಿ ವಿಟ್ಲ ಜುಮ್ಮಾ ಮಸೀದಿಗೆ ಸೇರಿದ ಜಾಗ ಎಂದು 5.48 ಎಕ್ರೆ ಭೂಮಿಯನ್ನು ನಮೂದಿಸಲಾಗಿದೆ. ವಕ್ಫ್ ಮಾಡುವ ಮುನ್ನವೇ ಈ ಸರ್ವೇ ಸಂಖ್ಯೆಯಲ್ಲಿ ಮಸೀದಿ ಹಾಗೂ ದಫನ ಭೂಮಿ ಇದೆ ಎಂದು ಉಲ್ಲೇಖಿತವಾಗಿದೆ. KTW REG 16DKD 99/2000/12-6-2000 ನಂತೆ ವಕ್ಫ್ ಕಾಯ್ದೆ ಮೂಲಕವೇ ಜಾಗ ಮೀಸಲಿರಿಸಲಾಗಿದೆ. ವಕ್ಫ್ ಕಾಯ್ದೆ, 1995 ರ (2013 ರಲ್ಲಿ ತಿದ್ದುಪಡಿ 27/2013) ಸೆಕ್ಷನ್ 5 (2) ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಬಳಸಿ, ಕರ್ನಾಟಕ ರಾಜ್ಯಪತ್ರದಲ್ಲೂ ಅಧಿಕೃತವಾಗಿ ವಕ್ಳ್ ಆಸ್ತಿಯೆಂದು ಪ್ರಕಟಿಸಲಾಗಿದೆ. ಇದಾಗ್ಯೂ, ಭಾರತೀಯ ಜನತಾ ಪಕ್ಷದ ಮುಖಂಡರು, 5.48 ಎಕ್ರೆ ಸರಕಾರಿ ಜಾಗವನ್ನು ಮಸೀದಿಗೆ ಸಂಬಂಧಪಟ್ಟವರು ಕಬಳಿಸಿದ್ದಾಗಿ ಆರೋಪಿಸಿದ್ದು, ಮುಂದೆ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಅನ್ನೋದನ್ನ ಕಾದು ನೋಡಬೇಕಿದೆ.