ಮಕ್ಕಾದಲ್ಲಿ ಅರಳಿದ ಕನ್ನಡದ ಧ್ವಜ; ಅಭಿಮಾನ ಮೆರೆದ ಪುತ್ತೂರಿನ ಯುವಕ!
Saturday, November 9, 2024
ಪುತ್ತೂರು: ಸೌದಿ ಅರೇಬಿಯಾದಲ್ಲಿರುವ ಮುಸ್ಲಿಮರ ಪವಿತ್ರ ಪುಣ್ಯಕ್ಷೇತ್ರ ಮಕ್ಕಾದಲ್ಲಿ ಪುತ್ತೂರಿನ ವ್ಯಕ್ತಿಯೋರ್ವರು ಕನ್ನಡ ಡಿಂಡಿಮವನ್ನು ಮೊಳಗಿಸಿದ್ದಾರೆ. ಪವಿತ್ರ ಉಮ್ರಾ ಯಾತ್ರೆಗೆ ತೆರಳಿದ್ದ ಆತೂರಿನ ರಾಝಿಕ್ ಅವರು ಮಕ್ಕಾದ ಕಅಬಾ ಭವನದ ಮುಂದೆ ಕನ್ನಡದ ಹಳದಿ, ಕೆಂಪು ಧ್ವಜವನ್ನು ಪ್ರದರ್ಶಿಸಿ ಕನ್ನಡಾಭಿಮಾನ ಮೆರೆದಿದ್ದಾರೆ.
ನವೆಂಬರ್ 1 ರಂದು ಕರ್ನಾಟಕ ರಾಜ್ಯವು ತನ್ನ 68ನೇ ಕನ್ನಡ ರಾಜ್ಯೋತ್ಸವವನ್ನು ಭಾರೀ ವಿಜೃಂಭಣೆಯಿಂದ ಆಚರಿಸಿತ್ತು. ನವೆಂಬರ್ ಅನ್ನೋದು ಕನ್ನಡದ ತಿಂಗಳು ಅನ್ನೋದಾಗಿಯೇ ಗುರುತಿಸಲ್ಪಟ್ಟಿದೆ. ಇದೇ ತಿಂಗಳಲ್ಲಿ ಉಮ್ರಾ ಯಾತ್ರೆ ನಿರ್ವಹಿಸಿದ ರಾಝಿಕ್ ಆತೂರು ಅವರು ಮಕ್ಕಾ ಭೂಮಿಯಲ್ಲಿ ತನ್ನ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸುವುದರ ಜೊತೆಗೆ ಕನ್ನಡದ ಮೇಲಿನ ಅಭಿಮಾನ ಮೆರೆದಿದ್ದಾರೆ.
'ಸಮೃದ್ಧಿ ಕರ್ನಾಟಕ' ಎಂದು ಬರೆದಿರುವ ಕನ್ನಡದ ಧ್ವಜವನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ತನ್ನ ಉಮ್ರಾ ಯಾತ್ರೆಯನ್ನು ಅವಿಸ್ಮರಣೀಯವನ್ನಾಗಿಸಿಕೊಂಡಿದ್ದಾರೆ. ಈ ಕುರಿತ ಪೋಸ್ಟ್ ಅನ್ನ ಟ್ವಿಟ್ಟರ್‌ನಲ್ಲಿ ಪ್ರಖ್ಯಾತ ಪುತ್ತೂರು ಎಂಬವರು ಹಂಚಿಕೊಂಡಿದ್ದಾರೆ.