
PUTTUR: `ತಾಕತ್ತಿದ್ದರೇ ಶಾಸಕ ಅಶೋಕ್ ರೈ ತಡೆಯಲಿ'
ಪುತ್ತೂರು: ಹಿಂದೂ ಜಾಗರಣ ವೇದಿಕೆ ಮುಖಂಡ ಅಜಿತ್ ಮಡಿಕೇರಿಗೆ ಬುದ್ಧಿ ಕಲಿಸುವ ಎಚ್ಚರಿಕೆ ನೀಡಿದ್ದ ಶಾಸಕ ಅಶೋಕ್ ಕುಮಾರ್ ರೈ ಹೇಳಿಕೆಗೆ ಮಾಜಿ ಶಾಸಕ ಸಂಜೀವ ಮಠಂದೂರು ಕೆಂಡಾಮಂಡಲರಾಗಿದ್ದಾರೆ. ಕೆಂಪುಕಲ್ಲು, ಮರಳು ಮತ್ತು ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿಯ ಜನಾಕ್ರೋಶ ಪ್ರತಿಭಟನೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಂಜೀವ ಮಠಂದೂರು, ಅಜಿತ್ ಮಡಿಕೇರಿಯನ್ನ ಪುತ್ತೂರಿನಲ್ಲಿ ಒಂದು ಗಂಟೆ ಮೆರವಣಿಗೆ ಮಾಡುತ್ತೇವೆ. ತಾಕತ್ತಿದ್ದರೆ ಶಾಸಕ ಅಶೋಕ್ ರೈ ತಡೆಯಲಿ ಎಂದು ವಾಗ್ದಾಳಿ ನಡೆಸಿದ್ರು. ಬಿಜೆಪಿ ಕಾರ್ಯಕರ್ತರು ಬಳೆಯಿಟ್ಟು ರಾಜಕೀಯ ಮಾಡಿದವರಲ್ಲ. ನಾವು ಸ್ವಾಭಿಮಾನಿಗಳು. ಹಣ, ಆಮಿಷಗಳಿಗೆ ಮರುಳಾಗುವವರು ಬಿಜೆಪಿಗರಲ್ಲ ಎಂದರು.
ಇನ್ನು ಇಂದು ಯಾವೂದಾದರು ಕೆಲಸಕ್ಕೆ ಯಾರಾದರೂ ಶಾಸಕ ಅಶೋಕ್ ರೈ ಬಳಿ ಹೋದಲ್ಲಿ ಅವರಿಗೆ ಕಾಂಗ್ರೆಸ್ ಶಾಲು, ಧ್ವಜ ನೀಡಲಾಗುತ್ತಿದೆ. ಸರ್ಕಾರಿ ಕೆಲಸ ಮಾಡಿಸಲು ಮನವಿ ನೀಡಲು ಹೋದಲ್ಲೂ ಅದೇ ಪರಿಸ್ಥಿತಿ. ಪುತ್ತೂರು ಶಾಸಕರು ಎಲ್ಲಾ ಕಡೆಗಳಲ್ಲೂ ಇದನ್ನೇ ಮಾಡುತ್ತಿದ್ದಾರೆ. ನಾನೂ ಕೂಡ ಶಾಸಕನಾಗಿದ್ದವ. ನನ್ನ ಬಳಿಯೂ ಕಾಂಗ್ರೆಸ್ ನವರು, ಬೇರೆ ಪಕ್ಷದವರು ಬರುತ್ತಿದ್ದರು. ನಾನು ಯಾವತ್ತಿಗೂ ಅವರಿಗೆ ಬಿಜೆಪಿ ಶಾಲು ಹಾಕಿ ಧ್ವಜ ಕೊಟ್ಟಿಲ್ಲ. ಅವರ ಕೆಲಸಗಳನ್ನೂ ಮಾಡಿಕೊಟ್ಟಿದ್ದೇನೆ ಎಂದರು.
ಶಾಸಕ ಅಶೋಕ್ ರೈ ಅವರ ಗೋಮುಖ ಮಾತ್ರ ನೀವು ನೋಡಿದ್ದೀರಿ. ವ್ಯಾಘ್ರ ಮುಖವನ್ನ ನೀವು ನೋಡಿಲ್ಲ. ಪಿಸ್ತೂಲು ತೋರಿಸಿ ಭಯಪಡಿಸಿದವರು ಅಶೋಕ್ ರೈ. ಇದೇ ಮುಖವನ್ನು ಇಂದು ಜನರಿಗೆ ತೋರಿಸುವ ಪ್ರಯತ್ನದಲ್ಲಿ ಶಾಸಕರಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.
ಹಿಂಜಾವೇ ಮುಖಂಡನಿಗೆ ಶಾಸಕರು ನೀಡಿದ್ದ ಎಚ್ಚರಿಕೆ ಏನು?
ಇನ್ನು ಇತ್ತೀಚೆಗೆ ಪುತ್ತೂರಿನ ಹಿಂದೂ ಜಾಗರಣ ವೇದಿಕೆಯ ಪ್ರತಿಭಟನೆಯಲ್ಲಿ ಶಾಸಕ ಅಶೋಕ್ ರೈಯನ್ನ ಅಯೋಗ್ಯ ಎಂಬ ಪದ ಬಳಸಿ ಅಜಿತ್ ಮಡಿಕೇರಿ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಸುಳ್ಯದಲ್ಲಿ ಶಾಸಕ ಅಶೋಕ್ ರೈ ಯಾವನೋ ಒಬ್ಬ ಮುಟ್ಟಾಳ ಎಲ್ಲಿಂದಲೋ ಬಂದು ಮಾತನಾಡುತ್ತಾನೆ. ಅವನು ಸ್ವಲ್ಪ ಹೊತ್ತು ಪುತ್ತೂರಿನಲ್ಲಿ ಇರಬೇಕಿತ್ತು. ಅವನಿಗೆ ಬುದ್ಧಿ ಕಲಿಸುವ ಕೆಲಸ ಮಾಡುತ್ತಿದ್ದೆ. ಎಲ್ಲಾ ಕಡೆಯಿಂದಲೂ ಬುದ್ಧಿ ಕಲಿಸಲು ಗೊತ್ತಿದೆ. ಕಾನೂನು, ನ್ಯಾಯ, ಮಸಲ್ ಪವರ್ ಉಪಯೋಗಿಸಿ ಬುದ್ಧಿ ಕಲಿಸುತ್ತೇವೆ ಎಂದು ಎಚ್ಚರಿಕೆಯ ಮಾತಗಳನ್ನಾಡಿದ್ದರು.