
PUTTUR: ಅನಧಿಕೃತ ರಸ್ತೆ ನಿರ್ಮಾಣಕ್ಕಾಗಿ ಪಾರ್ಕ್ ಜಾಗ ಒತ್ತುವರಿ; ನಗರಸಭೆಯಿಂದ ತಡೆ
ಪುತ್ತೂರು: ಪುತ್ತೂರು ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ಲೇಔಟ್ ಹೆಗ್ಗಳಿಕೆಯನ್ನು ಹೊಂದಿರುವ ಮುಕ್ರಂಪಾಡಿಯಲ್ಲಿರುವ ಪುತ್ತೂರಾಯ ಲೇಔಟ್‍ನಲ್ಲಿ ಒಂದು ಮನೆಗಾಗಿ ನಿಯಮ ಉಲ್ಲಂಘಿಸಿ ಅನಧಿಕೃತ ರಸ್ತೆ ನಿರ್ಮಾಣ ಮಾಡುತ್ತಿರುವುದಕ್ಕೆ ತಡೆ ನೀಡಿರುವ ನಗರಸಭೆ ತಡೆಬೇಲಿ ಅಳವಡಿಸಿ ಕಡಿವಾಣ ಹಾಕಿದೆ. ಲೇಔಟ್‍ನ ಉಳಿದ ನಿವಾಸಿಗಳು ಸ್ಥಳೀಯಾಡಳಿತ ನಗರಸಭೆಗೆ ಹಲವು ಬಾರಿ ದೂರು ನೀಡಿದರೂ ಕ್ರಮಕ್ಕೆ ಮೀನಾಮೇಷ ಎಣಿಸಲಾಗುತ್ತಿರುವ ಕುರಿತು `ದಿ ನ್ಯೂಸ್ ಹವರ್' ಸುದ್ದಿ ಪ್ರಕಟಿಸಿತ್ತು. ವರದಿಯನ್ನು ಗಮನಿಸಿದ ನಗರಸಭೆ ಆಡಳಿತವು ಪೌರಾಯುಕ್ತರ ನೇತೃತ್ವದಲ್ಲಿ ತ್ವರಿತವಾಗಿ ಸ್ಪಂದಿಸಿ ತಂತಿ ಬೇಲಿ ಅಳವಡಿಸಿ ಅನಧಿಕೃತ ರಸ್ತೆ ನಿರ್ಮಾಣಕ್ಕೆ ತಡೆ ನೀಡಿದೆ.
ಘಟನೆ ವಿವರ:
ಈ ಪುತ್ತೂರಾಯ ಲೇಔಟ್‍ನಲ್ಲಿ 15 ಸೈಟ್‍ಗಳಲ್ಲಿ 6 ಮನೆಗಳಿದ್ದು, ಇವುಗಳಲ್ಲಿ ಹಿರಿಯ ನಾಗರೀಕರು ವಾಸ್ತವ್ಯ ಹೊಂದಿದ್ದಾರೆ. ಆದರೆ ಲೇಔಟ್‍ನಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಮತ್ತು ಸಿವಿಕ್ಸ್ ಎಮಿನೇಟರ್ಸ್ ಬಗ್ಗೆ ಕಾದಿರಿಸಿದ ಸ್ಥಳದಲ್ಲಿ ಅನಧಿಕೃತವಾಗಿ ರಸ್ತೆ ನಿರ್ಮಿಸಲಾಗಿತ್ತು. ಅದೂ ಒಂದು ಮನೆಯ ಅನುಕೂಲಕ್ಕಾಗಿ. ಅವರಿಗೆ ಬೇರೆ ರಸ್ತೆಯಿದ್ದರೂ ಸಾರ್ವಜನಿಕ ಉಪಯೋಗದ ಜಾಗದಲ್ಲಿ ಒತ್ತಾಯಪೂರ್ವಕವಾಗಿ ರಸ್ತೆ ನಿರ್ಮಿಸಲಾಗುತ್ತಿದೆ ಎನ್ನುವ ಆರೋಪ ಸ್ಥಳೀಯರಿಂದ ವ್ಯಕ್ತವಾಗಿತ್ತು. ಸ್ಥಳದ ಮೂಲ ಮಾಲಕರು ಕೂಡಾ ಸದರಿ ಸ್ಥಳವನ್ನು ಅದೇ ಉದ್ದೇಶಕ್ಕಾಗಿ 2009 ರ ಆ. 10 ರಂದು ಪುತ್ತೂರು ನಗರಸಭೆಯವರಿಗೆ ದಾನ ಪತ್ರದ ಮೂಲಕ ಬಿಟ್ಟುಕೊಟ್ಟಿದ್ದರು. ಆದರೂ ಖಾಸಗಿ ವ್ಯಕ್ತಿಗಳು ಸಾರ್ವಜನಿಕ ಪಾರ್ಕ್ ಸ್ಥಳದ ಮೂಲಕವಾಗಿ ಅಕ್ರಮವಾಗಿ ರಸ್ತೆಯನ್ನು ರಚಿಸಲು ತೊಡಗಿದಾಗ 2024 ಜ.16 ರಂದು ಸ್ಥಳೀಯರು 6 ಮಂದಿ ಸೇರಿ ನಗರಸಭೆಗೆ ಮನವಿ ಸಲ್ಲಿಸಿದ್ದರು. ಅಲ್ಲದೆ ಸದ್ರಿ ಸ್ಥಳದ ಮೂಲ ಮಾಲಕರಾದ ರಾಜಗೋಪಾಲ ಪುತ್ತೂರಾಯ ಎಂಬವರು ನಗರಸಭೆಗೆ ಅರ್ಜಿಯನ್ನು ಸಲ್ಲಿಸಿದ್ದರು.
ದೂರಿನ ಬಳಿಕ ಪುತ್ತೂರು ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪೌರಾಯುಕ್ತರ ಸಹಿತ ಎಲ್ಲರೂ ಭೇಟಿ ನೀಡಿ ಪರಿಶೀಲಿಸಿ ಸಾರ್ವಜನಿಕ ಜಾಗವನ್ನು ಬಳಸಿಕೊಂಡು ಅನಧಿಕೃತ ರಸ್ತೆ ನಿರ್ಮಿಸುತ್ತಿರುವುದನ್ನು ಮನಗಂಡು ಪೌರಾಯುಕ್ತರು ತಕ್ಷಣ ಕೆಲಸ ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಆದರೆ ಅನಧಿಕೃತ ರಸ್ತೆ ನಿರ್ಮಿಸುವವರು ಕ್ಯಾರೆನ್ನದೆ ಮುಂದುವರೆಸಿ ಘನ ವಾಹನಗಳ ಸಂಚಾರವೂ ಮುಂದುವರೆದಿತ್ತು.
ಖಾಸಗಿ ವ್ಯಕ್ತಿಯವರು ನಗರಸಭೆ ಪಾರ್ಕ್‍ಗೆ ಹೊಂದಿಕೊಂಡಿರುವ ಸ್ಥಳದ ರಕ್ಷಣೆಗಾಗಿ ಹಾಕಿರುವ ತಂತಿ ಬೇಲಿಯ ಪೈಕಿ ಕೆಲವು ಕಂಬಗಳನ್ನು ತೆರವುಗೊಳಿಸಿ ಪಾರ್ಕ್ ಸ್ಥಳಕ್ಕೆ ಸಂಬಂಧಿಸಿದ ಕೆಲವು ಮರಗಳನ್ನೂ ಕಡಿದಿದ್ದರು. ಅಧಿಕಾರಿಗಳ ಭೇಟಿಯ ಮಧ್ಯೆಯೇ ಎಗ್ಗಿಲ್ಲದೆ ಅನಧಿಕೃತ ಕಾರ್ಯಯೋಜನೆ ಜಾರಿಯಲ್ಲಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದರು.
ನಗರಸಭೆಯಿಂದ ತ್ವರಿತ ಕ್ರಮ:
`ದಿ ನ್ಯೂಸ್ ಹವರ್' ವೆಬ್ ಸೈಟ್ ನಲ್ಲಿ ವರದಿ ಪ್ರಕಟಗೊಂಡ ಬಳಿಕ ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್ ನೇತೃತ್ವದ ತಂಡ ಫೆ.3 ರಂದು ಸ್ಥಳಕ್ಕೆ ಭೇಟಿ ನೀಡಿತ್ತು. ಫೆ.4 ರಂದು ಒತ್ತುವರಿಗೆ ತಡೆ ನೀಡುವ ಸಲುವಾಗಿ ಬೇಲಿ ಅಳವಡಿಸುವ ಕಾರ್ಯ ಆರಂಭಿಸಿದಾಗ ಒತ್ತುವರಿದಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಫೆ.5 ರಂದು ಪೊಲೀಸ್ ಸಿಬಂದಿ ಸಹಿತ ನಗರಸಭೆ ಅಧಿಕಾರಿಗಳಾದ ಕೃಷ್ಣ ಶೆಟ್ಟಿ, ರಾಜೇಶ್ ನೇತೃತ್ವದಲ್ಲಿ ಆಗಮಿಸಿ ತಂತಿ ಬೇಲಿ ಅಳವಡಿಸಲಾಗಿದೆ.
ಪಾರ್ಕನ್ನು ಅಭಿವೃದ್ಧಿಪಡಿಸಿ:
ಲೇಔಟ್ ಒಳಗಡೆ ಸಾರ್ವಜನಿಕ ಪಾರ್ಕ್ ನಿರ್ಮಾಣಕ್ಕೆ 75 ಸೆಂಟ್ಸ್ ಜಾಗ ಅಳತೆ ಮಾಡಿ ಗುರುತಿಸಿ ಹಲವು ವರ್ಷಗಳು ಕಳೆದಿವೆ. ಆದರೆ ನಗರಸಭೆಯಿಂದ ಒಂದೆರಡು ಬಾರಿ ಸಂಬಂಧಿಸಿದವರು ಭೇಟಿ ನೀಡಿರುವುದು ಬಿಟ್ಟರೆ ಪಾರ್ಕ್ ನಿರ್ಮಾಣ ಕಾರ್ಯ ಆಗಿಲ್ಲ. ಇನ್ನಷ್ಟು ಸಮಯ ಕಳೆದರೆ ಈ ಜಾಗ ಸ್ವಲ್ಪ ಸ್ವಲ್ಪವೇ ಪರರ ಪಾಲಾಗುವುದು ಖಚಿತ. ಅದ್ದರಿಂದ ಪಾರ್ಕ್ ನಿರ್ಮಾಣಕ್ಕೆ ತ್ವರಿತ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹ.
ಸರಕಾರಕ್ಕೆ ಬಿಟ್ಟ ಜಾಗದಲ್ಲಿ ತಂತಿ ಬೇಲಿ ತೆಗೆದು ಮಾರ್ಗ ವಿಸ್ತರಣೆ ಮಾಡಲಾಗುತ್ತಿರುವ ಕುರಿತು ನಾವು ನಗರಸಭೆಗೆ ದೂರು ನೀಡಿದ್ದೆವು. ನಕ್ಷೆಯಲ್ಲಿ ಇಲ್ಲದ ಜಾಗದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾರ್ಯದ ವಿರುದ್ಧ ತಕ್ಷಣ ನಗರಸಭೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದೆವು. ಪತ್ರಿಕೆಯಲ್ಲಿ ವರದಿ ಬಂದ ಬಳಿಕ ತ್ವರಿತವಾಗಿ ನಗರಸಭೆ ಅಧಿಕಾರಿಗಳು ಸ್ಪಂದಿಸಿ ತಡೆಬೇಲಿ ಅಳವಡಿಸಿದ್ದಾರೆ. ಪೂರಕ ಸ್ಪಂದನೆಗೆ ನಗರಸಭೆ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ.
-ಎನ್. ಶೀನಪ್ಪ ಪೂಜಾರಿ ಹಾಗೂ ಬಿ.ಕೆ. ಮೋಹನ್, ಸ್ಥಳೀಯ ನಿವಾಸಿಗಳು