-->
ಪುತ್ತೂರು: ಎಂಎಲ್‌ಸಿ ಕಿಶೋರ್‌ ಕುಮಾರ್‌ 'ಹೊಡಿಬಡಿ' ಹೇಳಿಕೆ; ಕಾಂಗ್ರೆಸ್‌ಗೆ ಬಿಜೆಪಿ ನಾಯಕರ ಟಕ್ಕರ್!

ಪುತ್ತೂರು: ಎಂಎಲ್‌ಸಿ ಕಿಶೋರ್‌ ಕುಮಾರ್‌ 'ಹೊಡಿಬಡಿ' ಹೇಳಿಕೆ; ಕಾಂಗ್ರೆಸ್‌ಗೆ ಬಿಜೆಪಿ ನಾಯಕರ ಟಕ್ಕರ್!

 


ಪುತ್ತೂರು: ಪುತ್ತೂರಿನಲ್ಲಿ ಬಿಜೆಪಿ ವರ್ಸಸ್‌ ಕಾಂಗ್ರೆಸ್‌ ನಾಯಕರ ವಾಕ್ಸಮರ ಮುಂದುವರೆದಿದೆ. ಅದ್ದು ಪಡೀಲ್‌ ವಿರುದ್ಧ ಹೇಳಿಕೆ ನೀಡುವ ಸಂದರ್ಭ ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಪುತ್ತೂರು, “ಅದ್ದು ಪಡೀಲ್‌ ಕೈಕಾಲು ಮುರಿಯೋದಕ್ಕೆ ಬಿಜೆಪಿ ಕಾರ್ಯಕರ್ತರಿಗೆ ಗೊತ್ತಿದೆ” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣಪ್ರಸಾದ್‌ ಆಳ್ವ, ವಿಧಾನ ಪರಿಷತ್‌ ಸದಸ್ಯರ ಹೊಡಿಬಡಿ ಸಂಸ್ಕಾರವನ್ನು ಒಪ್ಪುವುದಿಲ್ಲ. ಸಾಂವಿಧಾನಿಕ ಸ್ಥಾನದಲ್ಲಿರುವವರ ಇಂತಹ ಹೇಳಿಕೆ ಒಪ್ಪಲಾಗದು ಎಂದಿದ್ದರು.

ಇದೀಗ ಕಾಂಗ್ರೆಸ್‌ ಪಕ್ಷದ ಹೇಳಿಕೆ ವಿರುದ್ಧ ಬಿಜೆಪಿ ನಾಯಕರು ಪ್ರತಿ ಹೇಳಿಕೆ ನೀಡಿದ್ದಾರೆ. ಎಂಎಲ್‌ಸಿ ಕಿಶೋರ್‌ ಕುಮಾರ್‌ ಅವರು ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಹಾಗೂ ನಗರ ಮಂಡಲ ಅಧ್ಯಕ್ಷ ಶಿವಕುಮಾರ್‌ ಪಿ.ಬಿ. ತಮ್ಮ ನಾಯಕರ ಹೇಳಿಕೆಯನ್ನು ಸಮರ್ಥಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

“ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ರವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಗರಡಿಯಲ್ಲಿ ಪಳಗಿ ಬಂದವರು. ಯಾರಿಗೆ ಯಾವ ರೀತಿ ಗೌರವ ನೀಡಬೇಕು , ಯಾರೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು ಎಂಬುವುದನ್ನು ಎಳವೆಯಿಂದಲೇ ಕರಗತ ಮಾಡಿಕೊಂಡು ಬಂದಿದ್ದಾರೆ. ಹಾಗಾಗಿ ಹೊಡೆಬಡಿ ಸಂಸ್ಕೃತಿ ಯಾರದ್ದು ಎಂಬುದಕ್ಕೆ ಜಿಲ್ಲಾ ಕಾಂಗ್ರೆಸ್ ಕಛೇರಿಯೇ ಸಾಕ್ಷಿಯಾಗಿದೆ. ರಿವಾಲ್ವ್ ರ್ ಹಿಡಿದು ಬೆದರಿಕೆ ಒಡ್ಡುವ ಸಂಸ್ಕೃತಿ, ನಮ್ಮ ಕಾರ್ಯಕರ್ತರ ಮನೆಗೆ ಹೋಗಿ ಗೂಂಡಾಗಿರಿ ನಡೆಸಿದ್ದ ಪ್ರವೃತ್ತಿ ಯಾರದ್ದು? ಕಾಂಗ್ರೆಸ್ ಪಕ್ಷದ ನಾಯಕರಿಂದ ಈ ಬೋಧನೆ ಭೂತದ ಬಾಯಿಯಿಂದ ಭಗವದ್ಗೀತೆ ಕೇಳಿದಂತಾಗುತ್ತದೆ. ಹಿಂದಿನ ಕಾಲದಿಂದಲೂ ಪುತ್ತೂರಿನ ಜನತೆ ಕಾಂಗ್ರೆಸ್ ಸಂಸ್ಕೃತಿ ಏನೂ ಎಂಬುದನ್ನು ಅರಿತುಕೊಂಡಿದ್ದಾರೆ ಅದಕ್ಕೆ ಉತ್ತರವನ್ನು ಕೊಡುತ್ತಾರೆ. ನಿಮಗೆ ತಾಕತ್ತಿದ್ದರೆ, ನಿಮಗೆ ನಿಜವಾಗಿಯೂ ಮಹಿಳೆಯರ ಬಗ್ಗೆ, ದಲಿತರ ಬಗ್ಗೆ ಕಾಳಜಿ ಇರುವುದೇ ಆಗಿದ್ದರೆ ನೀವಾಗಲೀ, ನಿಮ್ಮ ಶಾಸಕರಾಗಲೀ ಅದ್ದು ಪಡೀಲ್ ಮಾಡಿರುವ ಕೃತ್ಯವನ್ನು ಬಹಿರಂಗವಾಗಿ ಖಂಡಿಸಬೇಕಿತ್ತು. ಅದನ್ನು ಬಿಟ್ಟು ವಿಧಾನಪರಿಷತ್ ಸದಸ್ಯರ ಹೇಳಿಕೆಯನ್ನು ಖಂಡಿಸಿರುವುದು ಮತಾಂಧ ಶಕ್ತಿಗಳ ಮೇಲಿರುವ ಪ್ರೀತಿಯ ದ್ಯೋತಕವಾಗಿದೆ. ಈ ನಡೆ ಕಾಂಗ್ರೆಸ್ ಗೆ ಮಹಿಳೆಯರ ಮೇಲೆ ಇರುವ ನಿಜವಾದ ಕಾಳಜಿ ಏನೂ ಎಂಬುದನ್ನು ತೋರಿಸುತ್ತದೆ. ಭಾರತೀಯ ಜನತಾ ಪಾರ್ಟಿಯ ಪ್ರಮುಖರಿಗೆ ಭೋದನೆ ಮಾಡುವ ಮೊದಲು ಕಾಂಗ್ರೆಸ್ ನಾಯಕರು ನಾಲಿಗೆಯನ್ನು ಹಿಡಿತದಲ್ಲಿರಿಸುವಂತೆ ನೋಡಿಕೊಳ್ಳಲಿ. ಕೆಣಕಿದರೆ ಬಿಡುವ ಮಾತೇ ಇಲ್ಲ, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬುದನ್ನು ಕಲಿತುಕೊಂಡು ಬಂದಿದ್ದೇವೆ. ಇದನ್ನು ಕಾಂಗ್ರೆಸ್ಸಿಗರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸುವುದಾಗಿ ದಯಾನಂದ ಶೆಟ್ಟಿ ಉಜಿರೆಮಾರು ತಿಳಿಸಿದ್ದಾರೆ.

ನಗರ ಮಂಡಲ ಅಧ್ಯಕ್ಷ ಶಿವಕುಮಾರ್‌ ಪಿ.ಬಿ. ಅವರು ಕೂಡಾ ವಿಧಾನ ಪರಿಷತ್‌ ಸದಸ್ಯರು ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. “ಕಿಶೋರ್‌ ಕುಮಾರ್‌ ಅವರ ಹೇಳಿಕೆ ಖಂಡಿಸುವ ಮೊದಲು ಕಾಂಗ್ರೆಸ್‌ ತಮ್ಮ ಪಕ್ಷದ ಕಾರ್ಯಕರ್ತ ಅದ್ದು ಪಡೀಲ್‌ ವಿರುದ್ಧ ಕ್ರಮ ಕೈಗೊಳ್ಳಲಿ. ಆತ ನೀಡಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸುವ ಸೌಜನ್ಯವನ್ನು ಕಾಂಗ್ರೆಸ್‌ ನಾಯಕರು ಹೊಂದಿಲ್ಲ. ಪಕ್ಷದ ಚಿಹ್ನೆಗೆ ಅವಮಾನ ಮಾಡಿದ್ದಕ್ಕಾಗಿ ಕಾರ್ಯಕರ್ತರು ಆತನಿಗೆ ಧರ್ಮದೇಟು ನೀಡಿದರೆ ನಾವು ಹೊಣೆಗಾರರಲ್ಲ ಎಂದಿರುವುದು ದೈಹಿಕ ಹಲ್ಲೆಯ ಕುರಿತಲ್ಲ, ಬದಲಾಗಿ ಭೌತಿಕವಾಗಿ ಈ ಹೇಳಿಕೆಯನ್ನು ನೀಡಿದ್ದಾರೆ” ಎಂದು ಸಮರ್ಥಿಸಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article