-->
ಕುಲ್ಕುಂದದ ಜಾನುವಾರು ಜಾತ್ರೆಯ ಒಂದು ನೆನೆಪು..! ಗೋ ರಕ್ಷಣೆಯ ಹೆಸರಿನಲ್ಲಿ ನಿಂತ ಗೋವಿನ ಜಾತ್ರೆ..!

ಕುಲ್ಕುಂದದ ಜಾನುವಾರು ಜಾತ್ರೆಯ ಒಂದು ನೆನೆಪು..! ಗೋ ರಕ್ಷಣೆಯ ಹೆಸರಿನಲ್ಲಿ ನಿಂತ ಗೋವಿನ ಜಾತ್ರೆ..!


ಅದೊಂದು ಪೌರಾಣಿಕ ಹಿನ್ನಲೆ ಇದ್ದ ಜಾತ್ರೆ ಹಿಂದೂ ಸಂಘಟನೆಗಳಿಂದಲೇ ನಿಂತು ಹೋಯ್ತು ಅಂತ ಬಹುತೇಕ ಜನರಿಗೆ ಗೊತ್ತಿಲ್ಲ. ಕೇವಲ ಜಿಲ್ಲೆಯ ಜನ ಮಾತ್ರವಲ್ಲದೆ ಹೊರ ಜಿಲ್ಲೆಯ ಹೊರ ರಾಜ್ಯದ ಜನರೂ ಕೂಡ ಜಾತ್ರೆಯಲ್ಲಿ ಭಾಗವಹಿಸ್ತಾ ಇದ್ರು. ಜಾತ್ರೆ ಅದೆಷ್ಟು ಫೇಮಸ್ ಆಗಿತ್ತು ಅಂದ್ರೆ ಜಾತ್ರೆಯಲ್ಲಿ ಖರೀದಿ ಮಾಡುವ ಜೋಡಿ ಅದು ಬೇರೆಲ್ಲೂ ಸಿಗಲಾರದು ಅನ್ನೋ ಮಾತು ಕೂಡ ಇತ್ತು. ಆದರೆ ಅದೊಂದು ಕಾರಣ ಮುಂದಿಟ್ಟುಕೊಂಡು ಹೋರಾಟ ನಡೆಸಿದ ಹಿಂದೂ ಸಂಘಟನೆಗಳು ಜಾತ್ರೆಯೇ ನಿಂತು ಹೋಗಲು ಕಾರಣವಾಯ್ತು ಎಂಬುವುದನ್ನು ಅಲ್ಲಗಳೆಯುವಂತಿಲ್ಲ.


90 ದಶಕದವರೆಗೂ ನಿರಾತಂಕವಾಗಿ ನಡೆದಿದ್ದ ಐತಿಹಾಸಿಕ ಜಾತ್ರೆ

ಇದು ಸರಿ ಸುಮಾರು 40 ವರ್ಷಗಳ ಹಿಂದಿನ ಕಥೆಯಾಗಿದ್ದು, ನಾನಾಗ ಪ್ರೈಮರಿ ಓದುತ್ತಿದ್ದ ಕಾಲ. ಸುಳ್ಯ ತಾಲೂಕಿನ ಗುತ್ತಿಗಾರು ಎಂಬ ಪುಟ್ಟ ಊರು ಮರೆಯಲಾರದ ಸಾಕಷ್ಟು ಸಿಹಿ ನೆನಪುಗಳನ್ನು ಕೊಟ್ಟಿದೆ. ರೇಡಿಯೋ ಒಂದು ಬಿಟ್ಟರೆ ಹೊರಜಗತ್ತಿನ ಸಂಪರ್ಕಕ್ಕೆ ಇದ್ದಿದ್ದು ಎರಡು ಸಲ ಬರುತ್ತಿದ್ದ ಒಂದು ಬಸ್‌. ಬಸ್ ಹೊರತಾಗಿ ಊರಲ್ಲಿ ಓಡಾಡುತ್ತಿದ್ದ ವಾಹನ ಅಂದ್ರೆ ಅದು ಕಾಡಿನ ಮರಗಳನ್ನು ಹಾಗೂ ಬಿದಿರುಗಳನ್ನು ಸಾಗಾಟ ಮಾಡುತ್ತಿದ್ದ ಮಹಾಬಲೇಶ್ವರ ಲಾರಿ.  ಹಾಗಂತ ಊರಿನ ಶ್ರೀಮಂತರೊಬ್ಬರ ಬಳಿ ಒಂದು ಕಾರು ಹಾಗೂ ಮತ್ತೊಂದಿಬ್ಬರಲ್ಲಿ ಜಾವಾ ಬೈಕ್ ಇತ್ತಾದ್ರೂ ಅದು ಅವರಿಗಷ್ಟೇ ಸೀಮಿತವಾಗಿತ್ತು. ಇಂತಹ ಕಾಲದಲ್ಲಿ ಕಾರ್ತಿಕ ಹುಣ್ಣಿಮೆ ಬಂದ್ರೆ ಅದೊಂದು ರೀತಿಯಲ್ಲಿ ಮನಸ್ಸಿಗೆ ಮುದ ನೀಡುವ ಕಾಲ. ಅದಕ್ಕೆ ಕಾರಣ ಸುಬ್ರಹ್ಮಣ್ಯದಲ್ಲಿ ನಡಿತಾ ಇದ್ದ ಜಾತ್ರೆ ಹಾಗೂ ಜಾತ್ರೆಯಲ್ಲಿ ಜನ ಖರೀದಿ ಮಾಡಿ ತೆಗೆದುಕೊಂಡು ಹೋಗುತ್ತಿದ್ದ ಜಾನುವಾರುಗಳು .

 

ಇಂತಹ ಜೋಡಿ ಕಲ್ಕುಂದದಲ್ಲೂ ಸಿಗಲಾರದು!

ಹೌದು, "ಇಂತಹ ಜೋಡಿ ಕಲ್ಕುಂದದಲ್ಲಿ ಹುಡುಕಿದ್ರೂ ಸಿಗಲಾರದು" ಇದು ಅಂದಿನ ಕಾಲದಲ್ಲಿ ತುಂಬಾ ಅನ್ಯೋನ್ಯವಾಗಿದ್ದ ಸ್ನೇಹಿತರಿಗೆ ಹೇಳುತ್ತಿದ್ದ ಮಾತು. ಹೌದು ಕುಲ್ಕುಂದದ ಜಾನುವಾರು ಜಾತ್ರೆಗೆ ಹೋದ್ರೆ ಅಲ್ಲಿರುವ ಸಾವಿರಾರು ಎತ್ತುಗಳ ನಡುವೆ ಎರಡು ಅತ್ಯುತ್ತಮ ಜೋಡಿ ಎತ್ತುಗಳನ್ನು ರೈತರು ಖರೀದಿ ಮಾಡ್ತಾ ಇದ್ರು. ಕರ್ನಾಟಕದ ಹಲವು ಜಿಲ್ಲೆಗಳಿಂದ, ಕೇರಳದಿಂದ ಬಂದ ಸಾವಿರಾರು ಎತ್ತು, ಹಸುಗಳಲ್ಲಿ ಜನರು ತಮಗಿಷ್ಟವಾದ ಜಾನುವಾರುಗಳನ್ನು ಖರೀದಿ ಮಾಡ್ತಾ ಇದ್ರು. ಇದು ಅಂದಿನ ಕಾಲದಲ್ಲಿ ರೈತರಿಗೆ ಸಾಕಷ್ಟು ಅನುಕೂಲವಾಗಿದ್ದ ಜಾತ್ರೆಯಾಗಿತ್ತು ಅನ್ನೋದು ಸುಳ್ಳಲ್ಲ.

 

ಜಾತ್ರೆಯ ಹಿಂದಿದೆ ಕ್ಷೇತ್ರ ಪುರಾಣದ ಹಿನ್ನೆಲೆ:

ಕುಲ್ಕುಂದ ಗ್ರಾಮ ಕುಕ್ಕೆ ಸುಬ್ರಹ್ಮಣ್ಯದಿಂದ ನಾಲ್ಕೈದು ಕಿಲೋ ಮೀಟರ್ ದೂರದಲ್ಲಿದ್ದು ಸದ್ಯ ಇಲ್ಲೊಂದು ಬಸವೇಶ್ವರ ದೇವಸ್ಥಾನ ನಿರ್ಮಾಣವಾಗಿದೆ. ಈಗ ಕಾರ್ತಿಕ ಹುಣ್ಣಿಮೆಯ ಸಮಯದಲ್ಲಿ ದೇವಸ್ಥಾನದ ಒಳಗೆ ಗೋವಿಗೆ ವಿಶೇಷ ಪೂಜೆ ಮಾಡಿ ಜಾತ್ರೆ ಸಂಪನ್ನವಾಗುತ್ತಿದೆ. ಆದ್ರೆ ಪೌರಾಣಿಕ ಹಿನ್ನಲೆಯ ಪ್ರಕಾರ ಸುಬ್ರಹ್ಮಣ್ಯ ವಧೆ ಮಾಡಿದ ತಾರಕಾಸುರನ ರಕ್ತ ಕಲ್ಕುಂದದ ಜಾಗದಲ್ಲಿ ಹರಿದಿದ್ದು, ಅದು ಶುದ್ಧಿ ಮಾಡಲು ಜಾಗದಲ್ಲಿ ಜಾನುವಾರುಗಳನ್ನು ಕಟ್ಟಲಾಗಿತ್ತು. ಜಾನುವಾರುಗಳನ್ನು ಕಟ್ಟಿದ ಬಳಿಕ ಅವುಗಳ ಸಗಣಿ ಹಾಗೂ ಗೋಮೂತ್ರದಿಂದ ಜಾಗ ಶುದ್ಧವಾಯಿತು ಎಂಬ ಪೌರಾಣಿಕ ಕಥೆ ಇದೆ. ಇನ್ನು ವರ್ಣಾರ ಪಂಜುರ್ಲಿಯ ಪಾಡ್ದನದಲ್ಲಿ ಜಾನುವಾರು ಜಾತ್ರೆಯ ಬಗ್ಗೆ ಉಲ್ಲೇಖ ಕೂಡ ಇದೆ.

 

ಜಾನುವಾರು ಜಾತ್ರೆಗೆ ವಿಘ್ನ ತಂದ ಗೋ ರಕ್ಷಣೆ ಹೋರಾಟ..!

90 ದಶಕದ ತನಕವೂ ನಿರಾತಂಕವಾಗಿ ನಡೆಯುತ್ತಿದ್ದ ಜಾನುವಾರು ಜಾತ್ರೆಗೆ ಗೋ ರಕ್ಷಣೆಯ ಹೆಸರಿನಲ್ಲಿ ನಡೆದ ಹೋರಾಟ ವಿಘ್ನ ತಂದಿದ್ದು ಸುಳ್ಳಲ್ಲ. 70 ದಶಕದಲ್ಲಿ ವಾಹನ ಸೌಕರ್ಯ ಇಲ್ಲದೆ ರೈತರು ಜಾನುವಾರುಗಳ ಜೊತೆಗೆ ನಡೆದುಕೊಂಡೆ ತಮ್ಮ ಊರು ಸೇರುತ್ತಿದ್ದರು. 80 ದಶಕದಲ್ಲಿ ಲಾರಿಯಲ್ಲಿ ಹತ್ತಾರು ಜಾನುವಾರುಗಳನ್ನು ತೆಗೆದುಕೊಂಡು ಹೋಗುವ ಪರಿಪಾಠ ಆರಂಭವಾಗಿತ್ತು. ಆದ್ರೆ ಕೃಷಿಯನ್ನು ನಂಬಿದ್ದ ಹಾಗೂ ಹೈನುಗಾರಿಕೆಯನ್ನು ನೆಚ್ಚಿಕೊಂಡಿದ್ದ ಅನೇಕ ರೈತರ ಕಾರಣದಿಂದ ಜಾನುವಾರು ಜಾತ್ರೆಗೆ ಯಾವುದೇ ಹಿನ್ನಡೆ ಆಗಿರಲಿಲ್ಲ. ಆದರೆ ಯಾವಾಗ ಗೋವುಗಳನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ಹಿಂದೂ ಸಂಘಟನೆಗಳು ಹೋರಾಟ ಆರಂಭಿಸಿತ್ತೋ ಅಂದಿನಿಂದ ಜಾತ್ರೆಗೆ ಒಂದಿಲ್ಲ ಒಂದು ವಿಘ್ನಗಳು ಆರಂಭವಾಗಿತ್ತು. ಒತ್ತಡಕ್ಕೆ ಸಿಲುಕಿದ್ದ ಕುಲ್ಕುಂದ ಪಂಚಾಯತ್ ಕೂಡ ಜಾತ್ರೆಗೆ ಒಂದಿಷ್ಟು ಕಾನೂನು ಜಾರಿ ಮಾಡಿತ್ತು. ಅತ್ತ ಜಾತ್ರೆ ನಿಲ್ಲಿಸಲೂ ಬಾರದು ಎಂದು ಪಟ್ಟು ಹಿಡಿದಿದ್ದ ಹಿಂದೂ ಸಂಘಟನೆಗಳು ಇಲ್ಲಿಂದ ಗೋವುಗಳು ಕಸಾಯಿಖಾನೆಗೆ ಹೋದರೆ ತಡೆಯುವುದಾಗಿಯೂ ಎಚ್ಚರಿಕೆ ನೀಡಿತ್ತು.

 

ಗೋರಕ್ಷಕರ ಕಿರುಕುಳದಿಂದ ನಿಂತೇ ಹೋದ ಕೃಷಿ ಸಂಸ್ಕೃತಿಯ ಜಾತ್ರೆ..!

ಜಾನುವಾರು ಜಾತ್ರೆಗೆ ಜಾನುವಾರುಗಳನ್ನು ಲಾರಿಯಲ್ಲಿ ತರುತ್ತಿದ್ದವರ ವಿಚಾರಣೆ ಹಾಗೂ ತೆಗೆದುಕೊಂಡು ಹೋಗುತ್ತಿದ್ದವರನ್ನು ಅಡ್ಡ ಹಾಕಿ ವಿಚಾರಣೆ, ಪಂಚಾಯತ್ ನೀಡಿದ ದಾಖಲೆ ಇದ್ರೂ ಲೆಕ್ಕಕ್ಕಿಂತ ಜಾಸ್ತಿ ಜಾನುವಾರು ತುಂಬಿಸಿದಕ್ಕೆ ತರಾಟೆ, ಹೀಗೆ ಹತ್ತಾರು ಸಮಸ್ಯೆಗೆ ಸಿಕ್ಕ ವ್ಯಾಪಾರಿಗಳು ಹಾಗೂ ಖರೀದಿಸುವ ರೈತರು ಕೊನೆಗೂ ಕುಲ್ಕುಂದಕ್ಕೆ ಬರುವುದೇ ನಿಲ್ಲಿಸಿದ್ರು. ಅದರೊಂದಿಗೆ ಪೌರಾಣಿಕ ಹಿನ್ನಲೆ ಇದ್ದ ಜಾತ್ರೆಯೊಂದು ಇತಿಹಾಸದ ಪುಟ ಸೇರಿ ಹೋಯಿತು. ಅದರೊಂದಿಗೆ ಜಾನುವಾರುಗಳನ್ನು ಕಟ್ಟಿ ಹಾಕುತ್ತಿದ್ದ ಜಾಗದಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿ ನಿಂತು ಕುಕ್ಕೆ ಕ್ಷೇತ್ರಕ್ಕೆ ಬರುವ ಭಕ್ತರ ಮೂಲಕ ವ್ಯಾವಹಾರಿಕ ತಾಣವಾಗಿ ಬದಲಾಯ್ತು. ಕೃಷಿ ಸಂಸ್ಕೃತಿಯ ಭಾಗವಾಗಿದ್ದ ಜಾನುವಾರು ಜಾತ್ರೆಯ ಅಳಿವಿನೊಂದಿಗೆ ಭತ್ತದ ಕೃಷಿಯಿಂದ ರೈತರು ಹಿಂದೆ ಸರಿಯಲು ಕೂಡ ಕಾರಣವಾಗಿತ್ತು ಎಂಬ ವಿಚಾರ ಅಲ್ಲಗಳೆಯುವಂತಿಲ್ಲ.

ಜಾತ್ರೆ ನಿಲ್ಲಬಾರದು... ಗೋ ಸಾಗಾಟ ಆಗಬಾರದು..!

ಹದಿನೈದು ದಿನ ನಡಿತಾ ಇದ್ದ ಜಾತ್ರೆ ಇದೇ ಗಲಾಟೆಯ ಕಾರಣದಿಂದ ಮೂರು ದಿನಕ್ಕೆ ಸೀಮಿತ ಮಾಡಲಾಗಿತ್ತು. ಒಂದು ಹಂತದಲ್ಲಿ ಪಂಚಾಯತ್ ಗಲಾಟೆಯ ಉಸಾಬರಿಯೇ ಬೇಡ ಅಂತ ಜಾತ್ರೆ ನಿಲ್ಲಿಸಲು ಮುಂದಾಗಿತ್ತು. ವೇಳೆ ಹಿಂದೂ ಸಂಘಟನೆಗಳ ಕಾರಣದಿಂದ ಜಾತ್ರೆ ನಿಲ್ಲಿಸಲಾಗುತ್ತಿದೆ ಎಂಬ ಆರೋಪ ಜೋರಾಗಿ ಕೇಳಿ ಬಂದಿತ್ತು. ಆದ್ರೆ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಹಿಂದೂ ಸಂಘಟನೆಗಳು, “ನಾವು ಜಾತ್ರೆ ನಿಲ್ಲಿಸಲು ಹೇಳಿಲ್ಲ. ಆದ್ರೆ, ಇಲ್ಲಿಂದ ಕಸಾಯಿಖಾನೆಗೆ ಜಾನುವಾರು ಸಾಗಾಟ ಆಗಬಾರದು ಅನ್ನೋದಷ್ಟೇ ನಮ್ಮ ಉದ್ದೇಶ” ಎಂದಿದ್ದರು. ಮೂಲಕ ಜಾತ್ರೆ ನಿಲ್ಲಲು ನಾವು ಕಾರಣರಲ್ಲ ಎಂದಿದ್ದರಾದ್ರೂ ಕಾರಣ ಏನು ಎಂಬುದು ಸೂರ್ಯಚಂದ್ರರಷ್ಟೇ ಸತ್ಯವಾಗಿತ್ತು.


(ಲೇಖನ: ರಾಜೇಶ್‌ ರಾವ್‌ ಪುತ್ತೂರು, ಹಿರಿಯ ಪತ್ರಕರ್ತರು)

Ads on article

Advertise in articles 1

advertising articles 2

Advertise under the article