
ಪ್ರತಿಭಾ ವಿರುದ್ಧದ ಪೋಸ್ಟ್ ಸಮರ್ಥಿಸಿಕೊಂಡ ಶ್ಯಾಮ್ ಸುಂದರ್; ಹೆಚ್ಚಿದ ಆಕ್ರೋಶ!
ಮಂಗಳೂರು: ಟೋಲ್ ಗೇಟ್ ವಿರೋಧಿ ಹೋರಾಟಗಾರ್ತಿ, ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ವಿರುದ್ಧ ಮಾಡಲಾದ ಅಶ್ಲೀಲ ಕಾಮೆಂಟ್ ಅನ್ನು ಕಹಳೆ ನ್ಯೂಸ್ ಮುಖ್ಯಸ್ಥ ಶ್ಯಾಮ್ ಸುದರ್ಶನ್ ಭಟ್ ಸಮರ್ಥಿಸಿಕೊಂಡಿದ್ದಾರೆ.
ಫೇಸ್ಬುಕ್ ನಲ್ಲಿ ವೀಡಿಯೋ ಸಂದೇಶ ಮೂಲಕ ತನ್ನ ಪೋಸ್ಟ್ ಗೆ ಸಮರ್ಥನೆ ನೀಡಿರುವ ಅವರು, "ಟೋಲ್ ವಿರೋಧಿ ಸಂದರ್ಭದಲ್ಲಿ ಪ್ರತಿಭಾ ಕುಳಾಯಿ ಅವರು ಓವರ್ ರಿಯಾಕ್ಟ್ ಮಾಡಿದ್ದರು. ಇದರ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದಕ್ಕೆ ಪೂರಕವಾಗಿ ನಾನು ಕಾಮೆಂಟ್ ಮಾಡಿದ್ದೆ. ಆದರೆ ಅವರು ಗ್ರಹಿಸಿದ ರೀತಿಯಲ್ಲಿ ಕಾಮೆಂಟ್ ಮಾಡಿಲ್ಲ. ಹೆಣ್ಣು ಮಗುವಿಗೆ ಗೌರವ ನೀಡುವುದು ನನಗೂ ಗೊತ್ತಿದೆ" ಎಂದು ಹೇಳಿದ್ದಾರೆ.
"ನನ್ನ ಮೇಲೂ ಸೋಶಿಯಲ್ ಮೀಡಿಯಾದಲ್ಲಿ ಆಕ್ರಮಣಗಳು ನಡೆಯುತ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಭಾವಿಸುತ್ತೇನೆ. ಕಾನೂನು ಹೋರಾಟ ನಡೆಸಿದರೆ ಅದನ್ನು ಎದುರಿಸಲು ನಾನು ಸಿದ್ಧನಿದ್ದೇನೆ. ನಾನು ಸತ್ಯ, ನ್ಯಾಯ, ಧರ್ಮದ ಪರ" ಎಂದು ತಮ್ಮ ಪೋಸ್ಟ್ ಕುರಿತು ಸಮರ್ಥಿಸಿಕೊಂಡಿದ್ದಾರೆ.
ಬಂಧನಕ್ಕೆ ಹೆಚ್ಚಿದ ಒತ್ತಾಯ
ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ವಿರುದ್ಧ ಮಾಡಲಾದ ಅಶ್ಲೀಲ ಪೋಸ್ಟ್ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ಸೈಬರ್ ಠಾಣೆಯಲ್ಲಿ ಈಗಾಗಲೇ ಪ್ರತಿಭಾ ಕುಳಾಯಿ ಅವರು ದೂರು ನೀಡಿದ್ದಾರೆ. ಇನ್ನೊಂದೆಡೆ, ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಪದಾಧಿಕಾರಿಗಳು ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಕ್ರಮಕ್ಕೆ ಒತ್ತಾಯಿಸಿದೆ.
ಡಿಸಿಪಿ ಭೇಟಿಯಾದ ಮಹಿಳಾ ಸಂಘಟನೆ
ಪ್ರತಿಭಾ ಕುಳಾಯಿ ಅವರನ್ನು ಲೈಂಗಿಕ ದೌರ್ಜನ್ಯ ಭಾಷೆಯಲ್ಲಿ ತೇಜೋವಧೆ ಮಾಡಿರುವ ಶ್ಯಾಮ ಸುದರ್ಶನ್ ಭಟ್ ನನ್ನು ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಬಂಧಿಸಲು ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಪೊಲೀಸ್ ಉಪ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.
ನಿಯೋಗದಲ್ಲಿ ಸಾಮಾಜಿಕ ಮುಖಂಡರಾದ ಮಂಜುಳಾ ನಾಯಕ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಭಾರತೀ ಬೋಳಾರ, ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜಾ ಪ್ರಮೀಳಾ ದೇವಾಡಿಗ, ಡಿವೈಎಫ್ಐ ಯುವತಿಯರ ಉಪ ಸಮಿತಿ ಮುಖಂಡರಾದ ಆಶಾ ಬೋಳೂರು, ದೀಕ್ಷಿತಾ ಜಲ್ಲಿಗುಡ್ಡೆ, ಸೌಮ್ಯ ಪಂಜಿಮೊಗರು ಮುಂತಾದವರು ಉಪಸ್ಥಿತರಿದ್ದರು.
ಶೀಘ್ರ ಆರೋಪಿಗಳ ಬಂಧನ: ಕಮೀಷನರ್
ಇನ್ನು ಪ್ರತಿಭಾ ಕುಳಾಯಿ ದೂರು ಆಧರಿಸಿ ಮಹಿಳಾ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾಗಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಎರಡು ತಂಡ ರಚಿಸಿದ್ದಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಶ್ಯಾಮ್ ಸುದರ್ಶನ್ ಭಟ್ ಸ್ಪಷ್ಟನೆ ವೀಡಿಯೋ