
"ನೀವು ಊರು ಬಿಟ್ರೆ, ಆರಾಮವಾಗಿರಲು ನಾನು ಬಿಡ್ತೇನಾ?": ಪ್ರತಿಭಾ ಕುಳಾಯಿ ಸವಾಲ್!
ಮಂಗಳೂರು: ಕೆಪಿಸಿಸಿ ಸಂಯೋಜಕಿ, NITK ಟೋಲ್ ಗೇಟ್ ವಿರೋಧಿ ಹೋರಾಟಗಾರ್ತಿ ಪ್ರತಿಭಾ ಕುಳಾಯಿ ವಿರುದ್ಧದ ಅಶ್ಲೀಲ ಪೋಸ್ಟ್ ವೊಂದರ ಸಂಬಂಧ ಕಹಳೆ ಸುದ್ದಿ ಸಂಸ್ಥೆಯ ಮುಖ್ಯಸ್ಥ ಶ್ಯಾಮ್ ಸುದರ್ಶನ್ ಭಟ್ ಹಾಗೂ ಇತರರ ಮೇಲೆ ಮಂಗಳೂರು ನಗರ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದಾದ ಬೆನ್ನಿಗೇ, ಆರೋಪಿ ಶ್ಯಾಮ್ ಸುದರ್ಶನ್ ಭಟ್ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದು, ತಲೆ ಮರೆಸಿಕೊಂಡಿದ್ದಾಗಿ ತಿಳಿದು ಬಂದಿದೆ.
ಈ ಕುರಿತು ಫೇಸ್ಬುಕ್ ನಲ್ಲಿ ಪ್ರತಿಭಾ ಕುಳಾಯಿ ಅವರು ವ್ಯಂಗ್ಯ ಭರಿತ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ. ತನ್ನ ಪೋಸ್ಟ್ ಮೂಲಕ ಅವರು ಶ್ಯಾಮ್ ಸುದರ್ಶನ್ ಭಟ್ ಕಾಲೆಳೆದಿದ್ದು,"ಹೋಯ್ ಭಟ್ರೇ, ಎಲ್ಲಿದ್ದೀರಿ ಮಾರೆ? ಇದೆಲ್ಲ ನಿಮಗೆ ಬೇಕಿತ್ತಾ ಭಟ್ರೇ?" ಎಂದು ಪ್ರಶ್ನಿಸಿದ್ದಾರೆ.
"ನೀವು ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಊರು ಬಿಟ್ಟರೆ, ನಾನು ನಿಮ್ಮನ್ನ ಆರಾಮವಾಗಿರಲು ಬಿಡುತ್ತೇನ ಭಟ್ರೇ?. ನಿಮಗೆ ನನ್ನ 'ಕಾಂತಾರ', 'ನಾಗವಲ್ಲಿ' ಎಲ್ಲ ನೋಡ್ಬೇಕಲ್ಲ. ನೀವೇ ಊರ್ ಬಿಟ್ಟು ನಾಪತ್ತೆ ಆದ್ರೆ ಹೇಗೆ?. ಕಮೆಂಟ್ ಮಾಡುವಾಗ ನೀವು ಊರ್ ಬಿಡುವ ಯೋಚನೆ ಮಾಡಿಲ್ಲ ಅನ್ಸುತ್ತೆ" ಎಂದು ನಗುವಿನ ಇಮೋಜಿ (emoji) ಬಳಸಿ ಪೋಸ್ಟ್ ಮಾಡಿದ್ದಾರೆ.
ಅಲ್ಲದೇ, ಶ್ಯಾಮ್ ಸುದರ್ಶನ್ ಭಟ್ ಸ್ನೇಹಿತ ಕೆಆರ್ ಶೆಟ್ಟಿಯೂ ನಾಪತ್ತೆಯಾಗಿದ್ದಾಗಿ ಪ್ರತಿಭಾ ಕುಳಾಯಿ ತಿಳಿಸಿದ್ದಾರೆ.
ತನಿಖೆ ಚುರುಕು: ಕಮೀಷನರ್
ಇನ್ನು ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿರುವ ಮಂಗಳೂರು ನಗರ ಪೊಲೀಸರು, ಎರಡು ತಂಡಗಳಾಗಿ ತನಿಖೆ ಶುರು ಮಾಡಿದ್ದಾರೆ. ಸದ್ಯ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಹುಡುಕಾಟ ಮುಂದುವರೆದಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.