.jpg)
ಮಂಗಳೂರು: ನಿಧನ ಹೊಂದಿದ ವ್ಯಕ್ತಿ ಹೆಸರಿನಲ್ಲಿ ಸಾಲ ಮಂಜೂರು; ಭಗವತೀ ಸಹಕಾರಿ ಬ್ಯಾಂಕ್ನಲ್ಲಿ ಗೋಲ್ಮಾಲ್ ಹೇ ಸಬ್ ಗೋಲ್ಮಾಲ್!
ಮಂಗಳೂರು: ನಿಧನ ಹೊಂದಿದ ವ್ಯಕ್ತಿಯ ಹೆಸರಿನಲ್ಲಿ ಭಾರೀ ಮೊತ್ತದ ಸಾಲ
ಪಡೆದು ದೊಡ್ಡ ಅಕ್ರಮ ಎಸಗಿದ ಹಗರಣವೊಂದು ಇದೀಗ ಬಯಲಾಗಿದೆ. ಜೆಪ್ಪಿನಮೊಗರು ಮೋರ್ಗನ್ಸ್ಗೇಟ್ನಲ್ಲಿ
ಭಗವತೀ ಸಹಕಾರಿ ಬ್ಯಾಂಕ್ ಇಂತಹದ್ದೊಂದು ಸ್ಕ್ಯಾಮ್ ನಡೆಸಿ ಇದೀಗ ತಗಲಾಕಿಕೊಂಡಿದೆ. ಈ ರೀತಿಯ ಅವ್ಯವಹಾರದ
ವಿರುದ್ಧ ಖುದ್ದು ಬ್ಯಾಂಕಿನ ಮಾಜಿ ನಿರ್ದೇಶಕರೂ ಆಗಿರುವ ಹರೀಶ್ ಇರಾ ಎಂಬವರೇ ಪಾಂಡೇಶ್ವರ ಠಾಣೆಯಲ್ಲಿ
ಬ್ಯಾಂಕ್ ಅಧ್ಯಕ್ಷ ಮಾಧವ ಎಂ.ಬಿ., ಜನರಲ್ ಮ್ಯಾನೇಜರ್ ಸುಷ್ಮಾ ಮತ್ತು ಶಾಖಾ ಮ್ಯಾನೇಜರ್ ರಾಘವ
ಉಚ್ಚಿಲ್ ಎಂಬವರ ವಿರುದ್ಧ ದೂರು ದಾಖಲಾಗಿದೆ.
ಘಟನೆ ವಿವರ:
ವಿಟ್ಲ ಸಮೀಪದ ಸಾಲೆತ್ತೂರು ನಿವಾಸಿ ವಿಠಲ್ ಶೆಟ್ಟಿ ಎಂಬವರು
2010ರ ಆಗಸ್ಟ್ 31ರಂದು ತನ್ನ ಜಾಗ ಅಡವಿಟ್ಟು 15 ಲಕ್ಷ ಸಾಲ ಮಾಡಿದ್ದರು. ಆದರೆ ಸಾಲ ಮರುಪಾವತಿ ಮಾಡದೇ
ಇದ್ದುದರಿಂದ ವಿಠಲ ಶೆಟ್ಟಿ ದಿವಾಳಿಗಾರ ಎಂದು ಘೋಷಿಸಲ್ಪಟ್ಟು ಸದ್ರಿ ಜಾಗವನ್ನು ಬ್ಯಾಂಕಿನಿಂದ ಜಪ್ತಿ
ಮಾಡಲಾಗಿತ್ತು. ಇದರಂತೆ, 2022ರ ಜನವರಿ 24ರಂದು ಸಾಲದ ಖಾತೆಯನ್ನು ಕ್ಲೋಸ್ ಮಾಡಲಾಗಿತ್ತು. ದಿವಾಳಿಯಾದ
ವ್ಯಕ್ತಿಗೆ ಸಾಲದ ಖಾತೆ ಕೊನೆಗೊಂಡ ಆರು ತಿಂಗಳ ಕಾಲ ಮತ್ತೆ ಸಾಲ ನೀಡುವಂತಿಲ್ಲ ಎಂದು ಆರ್ ಬಿಐ ಮತ್ತು
ಸಹಕಾರಿ ಸಂಘದ ನಿಯಮ ಇದ್ದರೂ, ಅದನ್ನು ಉಲ್ಲಂಘಿಸಿ ಮರುದಿನವೇ ಅಂದರೆ, 2022ರ ಜನವರಿ 25ರಂದು ವಿಠಲ
ಶೆಟ್ಟಿ ಹೆಸರಲ್ಲಿ ಮತ್ತೆ 25 ಲಕ್ಷ ಸಾಲ ಮಂಜೂರು ಮಾಡಲಾಗಿತ್ತು. ಈ ಸಾಲವನ್ನು ಅದೇ ವರ್ಷದ ಸೆಪ್ಟೆಂಬರ್
ತಿಂಗಳಲ್ಲಿ ಕ್ಲೋಸ್ ಮಾಡಿದಂತೆ ತೋರಿಸಿ, ಅದೇ ತಿಂಗಳ 15ರಂದು ಮತ್ತೆ 35 ಲಕ್ಷ ಸಾಲವನ್ನು ವಿಠಲ ಶೆಟ್ಟಿ
ಹೆಸರಲ್ಲಿ ನೀಡಲಾಗಿತ್ತು.
ಈ ನಡುವೆ, ವಿಠಲ ಶೆಟ್ಟಿ ಅನಾರೋಗ್ಯದಲ್ಲಿದ್ದರೂ ಅವರ ಹೆಸರಲ್ಲಿದ್ದ
35 ಲಕ್ಷ ಸಾಲವನ್ನು 06-06-2024ರಂದು ಬ್ಯಾಂಕಿನಲ್ಲಿ ಕ್ಲೋಸ್ ಮಾಡಿದ್ದಾಗಿ ತೋರಿಸಿ 07-06-
2024ರಂದು ಮತ್ತೆ 40 ಲಕ್ಷ ಸಾಲವನ್ನು ಮಂಜೂರು ಮಾಡಿದ್ದಾರೆ. ಇದರ ಬೆನ್ನಲ್ಲೇ 2024ರ ಸೆಪ್ಟೆಂಬರ್
3ರಂದು ವಿಠಲ್ ಶೆಟ್ಟಿ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಸೆಪ್ಟಂಬರ್ 9ರಂದು
ಸಾವಿಗೀಡಾಗಿದ್ದಾರೆ. ಇದರ ಮರುದಿನವೇ ಭಗವತಿ ಸಹಕಾರಿ ಬ್ಯಾಂಕಿನ ಮೋರ್ಗನ್ಸ್ ಗೇಟ್ ಶಾಖೆಯಿಂದ ಮತ್ತೆ
20 ಲಕ್ಷ ಸಾಲವನ್ನು ವಿಠಲ್ ಶೆಟ್ಟಿ ಹೆಸರಲ್ಲಿ ಮಂಜೂರು ಮಾಡಿದ್ದು, ಬ್ಯಾಂಕಿನ ಆಸ್ತಿಯನ್ನು ಲೂಟಿ
ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರು ದಾಖಲಿಸಲು ವಿಳಂಬ!
ಹರೀಶ್ ಇರಾ ಅವರು ಮಂಗಳೂರಿನ 2ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಈ
ಕುರಿತಂತೆ ದಾವೆ ಹೂಡಿದ್ದರು. ಪ್ರಕರಣದ ಗಂಭೀರತೆ ಅರಿತ ನ್ಯಾಯಾಲಯವು ಡಿಸೆಂಬರ್ ಆರಂಭದಲ್ಲಿಯೇ ದೂರು
ದಾಖಲಿಸುವಂತೆ ಪಾಂಡೇಶ್ವರ ಪೊಲೀಸರಿಗೆ ಸೂಚಿಸಿತ್ತು. ಅದಾಗ್ಯೂ, 20 ದಿನಗಳಾದರೂ ಎಫ್ಐಆರ್ ದಾಖಲಿಸಲು
ಪಾಂಡೇಶ್ವರ ಪೊಲೀಸರು ಮೀನಮೇಷ ಎಣಿಸಿದ್ದರು. ಇದಾದ ಬಳಿಕ ಹರೀಶ್ ಅವರು ಪೊಲೀಸ್ ಕಮೀಷನರ್ ಭೇಟಿಯಾಗಿದ್ದು,
ಇದೀಗ ನಿನ್ನೆ ದಿವಸ ಪಾಂಡೇಶ್ವರ ಠಾಣೆಯಲ್ಲಿ ವಂಚನೆ ಕುರಿತಂತೆ ಎಫ್ಐಆರ್ ದಾಖಲಿಸಲಾಗಿದೆ.