.jpg)
POLITICAL: ಪುತ್ತೂರು ರಾಜಕೀಯದಲ್ಲಿ `ಟ್ಯಾಕ್ಸ್ ಕಲೆಕ್ಷನ್' ವಾರ್!!
ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಬಿಜೆಪಿಯ ಮಾಜಿ ಶಾಸಕ ಸಂಜೀವ ಮಠಂದೂರು ವಿರುದ್ಧ ಮಾಡಿರುವ 'ಟ್ಯಾಕ್ಸ್ ಕಲೆಕ್ಷನ್' ಆರೋಪ ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ನ ವಾಕ್ಸಮರಕ್ಕೆ ಕಾರಣವಾಗಿದೆ. ಶಾಸಕರ ಆರೋಪಗಳಿಗೆ ಬಿಜೆಪಿ ತಿರುಗೇಟು ನೀಡಲು ಆರಂಭಿಸಿದ್ದು, ಶಾಸಕರ ಸಾಮಾಜಿಕ ಜಾಲತಾಣದಲ್ಲಿ ಬರುವ ವಿಡಿಯೋಗಳನ್ನು ಬಳಸಿಕೊಂಡೇ ಶಾಸಕರ ವಿರುದ್ಧ ಆರೋಪಕ್ಕೆ ಮುಂದಾಗಿದ್ದರಾರೆ. ಮುಂದಿನ ದಿನಗಳಲ್ಲಿ ಇದು ತಾರಕಕ್ಕೇರುವ ಲಕ್ಷಣಗಳು ಗೋಚರಿಸುತ್ತಿದೆ.
ಹೌದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮಪಂಚಾಯತ್ ನಲ್ಲಿ ಇತ್ತೀಚೆಗೆ ನಡೆದ ಅಕ್ರಮ-ಸಕ್ರಮ ಪೂರ್ವಭಾವಿ ಸಭೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಿಂದಿನ ಶಾಸಕ ಸಂಜೀವ ಮಠಂದೂರು ವಿರುದ್ಧ ಟ್ಯಾಕ್ಸ್ ಕಲೆಕ್ಷನ್ ಮಾಡುತ್ತಾರೆ ಎನ್ನುವ ಮೂಲಕ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು. ಹಿರೇಬಂಡಾಡಿ ಗ್ರಾಮದವರೇ ಆದ ಮಾಜಿ ಶಾಸಕರು ತಮ್ಮ ಗ್ರಾಮದವರಿಗೆ ಅಕ್ರಮ-ಸಕ್ರಮ ಮಾಡಿಕೊಡಲು ಹಿಂದೆಮುಂದೆ ನೋಡುತ್ತಿದ್ದರು. ಕೆಲವರಲ್ಲಿ ಟ್ಯಾಕ್ಸ್ ಕಲೆಕ್ಷನ್ ಗೂ ಬೇಡಿಕೆ ಇಡುತ್ತಿದ್ದರು ಎಂದು ಪರೋಕ್ಷವಾಗಿ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು.
ಆದ್ರೆ ಈ ಎಲ್ಲಾ ಆರೋಪಗಳಿಗೆ ಇದೀಗ ಬಿಜೆಪಿ ತಿರುಗೇಟು ನೀಡಲು ಆರಂಭಿಸಿದೆ. ಸ್ವತಃ ಶಾಸಕರೇ ಭ್ರಷ್ಟಾಚಾರಿಗಳ ಪರ ನಿಂತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಉಪ್ಪಿನಂಗಡಿಯಲ್ಲಿ ನಡೆದ ಪ್ರಕರಣವೊಂದನ್ನು ಉಲ್ಲೇಖಿಸಿ ಬಿಜೆಪಿ ಈ ಆರೋಪ ಹೊರಿಸಿದ್ದು, ಪಂಚಾಯತ್ ಸಿಬ್ಬಂದಿಯೋರ್ವ ಅಕ್ರಮ-ಸಕ್ರಮ ಅರ್ಜಿ ವಿಲೇವಾರಿಗೆ ವ್ಯಕ್ತಿಯೋರ್ವರಿಂದ ಲಂಚ ಪಡೆದಿದ್ದರು. ಈ ವಿಚಾರವನ್ನು ಆ ವ್ಯಕ್ತಿ ಶಾಸಕರ ಮುಂದೆ ಪ್ರಸ್ತಾಪಿಸಿದ ಸಂದರ್ಭದಲ್ಲಿ ಶಾಸಕರು ಸ್ಥಳದಿಂದಲೇ ಆ ಸಿಬ್ಬಂದಿಗೆ ಕರೆ ಮಾಡಿದ್ದರು. ಸಿಬ್ಬಂದಿ ತಾನು ಶಾಸಕರ ಅಭಿಮಾನಿ ಎಂದ ತಕ್ಷಣವೇ ಆ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳದೆ ಉಪದೇಶ ಮಾಡಿ ಬಿಟ್ಟಿದ್ದರು. ತಮ್ಮ ಕಣ್ಣ ಮುಂದೆಯೇ ಭ್ರಷ್ಟಾಚಾರ ನಡೆದರೂ, ಕ್ರಮ ಕೈಗೊಳ್ಳದ ಶಾಸಕರು ಬಿಜೆಪಿಯ ಮಾಜಿ ಶಾಸಕರ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಕಿಡಿ ಕಾರಿದೆ.
ಈ ನಡುವೆ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಅಸಮಾಧಾನ ಹೊರ ಹಾಕುತ್ತಿರುವ ವಿಚಾರವನ್ನೂ ಬಿಜೆಪಿ ಇದೀಗ ಕಾಂಗ್ರೆಸ್ ವಿರುದ್ಧ ಬೀಸುತ್ತಿದ್ದು, ಈ ವಿಚಾರ ಮುಂದಿನ ದಿನಗಳಲ್ಲಿ ತಾರಕಕ್ಕೇರುವ ಲಕ್ಷಣ ಗೋಚರಿಸಿದೆ.