.jpg)
Mangaluru | ಜಿಲ್ಲಾ ಪ್ರಶಸ್ತಿ ಸ್ವೀಕಾರಕ್ಕೆ ಹೋದ ಅಕ್ಷಯ ಚಾರಿಟೇಬಲ್ ಟ್ರಸ್ಟ್‌ಗೆ ಜಿಲ್ಲಾಡಳಿತದಿಂದ ಅವಮಾನ!
ಮಂಗಳೂರು: ದಕ್ಷಿಣ
ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಈ ಬಾರಿ ಹಲವು ಆಯಾಮಗಳ ಚರ್ಚೆಗೆ
ಕಾರಣವಾಗಿದೆ. ಶುಕ್ರವಾರ ನಡೆದ ಜಿಲ್ಲಾ ರಾಜ್ಯೋತ್ಸವ ಸಂಭ್ರಮವು ಮಂಗಳೂರು ನಗರದ ನೆಹರೂ ಮೈದಾನದಲ್ಲಿ
ನಡೆಯಿತು. ಇದೇ ವೇಳೆ 55 ಮಂದಿ ಸಾಧಕರು ಹಾಗೂ 20 ಸಂಘ ಸಂಸ್ಥೆಗಳನ್ನು ಗುರುತಿಸಿ ಅವರಿಗೆ ಜಿಲ್ಲಾ
ಪ್ರಶಸ್ತಿ ಪ್ರದಾನ ನಡೆಯಿತು.
ಆದರೆ, ಸಂಘ ಸಂಸ್ಥೆಗಳ
ಪಟ್ಟಿಯಲ್ಲಿ ಹೆಸರು ಪಡೆದಿದ್ದ ಅಕ್ಷಯ ಚಾರಿಟೇಬಲ್ ಟ್ರಸ್ಟ್ (ರಿ.) ಕೊಳ್ನಾಡು ಈ ಸಂಸ್ಥೆಯ ಪದಾಧಿಕಾರಿಗಳ
ಹೆಸರನ್ನು ಕರೆದು ಬಳಿಕ ವೇದಿಕೆಯಿಂದಲೇ ವಾಪಸ್ ಕಳಿಸಿ ಅವಮಾನಿಸಿರುವ ಘಟನೆ ನಡೆದಿದೆ. ಇದು ಜಿಲ್ಲಾಡಳಿತದ
ಅವ್ಯವಸ್ಥೆಗೆ ಸಾಕ್ಷಿ ಎನ್ನುವಂತಿದೆ. ಸಮಾಜಸೇವೆ ವಿಭಾಗದಲ್ಲಿ ಅಕ್ಷಯ ಚಾರಿಟೇಬಲ್ ಟ್ರಸ್ಟ್ (ರಿ.)
ಬಂಟ್ವಾಳ ತಾಲೂಕಿನಿಂದ ಆಯ್ಕೆಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರ ಹೆಸರನ್ನ ಕೈಬಿಟ್ಟಿದ್ದು
ಮಾತ್ರವಲ್ಲದೇ, ವೇದಿಕೆ ಹತ್ತಿದ್ದ ಟ್ರಸ್ಟ್‌ನ ಪದಾಧಿಕಾರಿಗಳಿಗೆ “ನಿಮಗೆ ಪ್ರಶಸ್ತಿ ಇಲ್ಲ. ನಿಮ್ಮ
ಹೆಸರನ್ನು ಕೈ ಬಿಡಲಾಗಿದೆ” ಎಂದು ಹೇಳಿದ್ದಾರೆ. ಇದರಿಂದ ಅವಮಾನಿತರಾದ ಟ್ರಸ್ಟ್‌ನ ಪದಾಧಿಕಾರಿಗಳು
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಬಳಿಗೆ ತೆರಳಿ ತಮ್ಮ ಅಸಮಾಧಾನ
ವ್ಯಕ್ತಪಡಿಸಿದ್ದಾರೆ.
ಬೆಳಿಗ್ಗೆಯಷ್ಟೇ
ಕರೆ ಬಂದಿತ್ತು!
ಜಿಲ್ಲಾ ರಾಜ್ಯೋತ್ಸವ
ಪ್ರಶಸ್ತಿಗೆ ಸಂಘ ಸಂಸ್ಥೆಗಳ ಪಟ್ಟಿಯಲ್ಲಿ ಬಂಟ್ವಾಳ ತಾಲೂಕಿನ ಕೊಳ್ನಾಡುವಿನ ಅಕ್ಷಯ ಚಾರಿಟೇಬಲ್
ಟ್ರಸ್ಟ್ (ರಿ.) ಕೂಡಾ ಅರ್ಜಿ ಸಲ್ಲಿಸಿತ್ತು. ಆದರೆ, ನಿನ್ನೆ ರಾತ್ರಿ ಬಿಡುಗಡೆಯಾಗಿದ್ದ ಪಟ್ಟಿಯಲ್ಲಿ
ಹೆಸರು ಇಲ್ಲದೇ ಹೋದ್ದರಿಂದ ಪದಾಧಿಕಾರಿಗಳು ಇಂದು ಬೆಳಿಗ್ಗೆ ಎದ್ದವರೇ ತಮ್ಮ ಕಾರ್ಯ ಚಟುವಟಿಕೆಯತ್ತ
ಗಮನ ಹರಿಸಿದ್ದರು. ಇದೇ ವೇಳೆ ಕೊಳ್ನಾಡು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಮನೋಹರ್ ಹಾಗೂ ಬಂಟ್ವಾಳ
ತಾಲೂಕು ಕಚೇರಿಯಿಂದಲೂ ಟ್ರಸ್ಟ್‌ನ ಅಧ್ಯಕ್ಷ ಝಕರಿಯಾ ಹಾಗೂ ಕಾರ್ಯದರ್ಶಿ ಬಿಎಂ ಸಿದ್ದೀಕ್ ಅವರಿಗೆ
ಕರೆ ಬಂದಿದ್ದು, ಬೆಳಿಗ್ಗೆ 10 ಗಂಟೆ ಸಮಯಕ್ಕೆ ನೆಹರೂ ಮೈದಾನಕ್ಕೆ ಬರುವಂತೆ ಸೂಚಿಸಿದ್ದಾರೆ. ಅದರಂತೆ
ಅಧ್ಯಕ್ಷ, ಕಾರ್ಯದರ್ಶಿ ಸಂಘದ ವಿವಿಧ ಪದಾಧಿಕಾರಿಗಳ ಜೊತೆಗೆ ಪ್ರಶಸ್ತಿ ಸ್ವೀಕರಿಸಲೆಂದು ಮೈದಾನಕ್ಕೆ
ಆಗಮಿಸಿದ್ದರು.
ವೈಯಕ್ತಿಕ ವಿಭಾಗದ
55 ಮಂದಿಯ ಪ್ರಶಸ್ತಿ ಪ್ರದಾನ ಸಮಾರಂಭ ಮುಗಿದ ಬಳಿಕ ಸಂಘ ಸಂಸ್ಥೆಗಳ ಪಟ್ಟಿಯಲ್ಲಿ ಎರಡನೆಯದ್ದಾಗಿ
ಅಕ್ಷಯ ಚಾರಿಟೇಬಲ್ ಟ್ರಸ್ಟ್ ಹೆಸರು ಕರೆಯಲಾಗಿದೆ. ಅದರಂತೆ ಪದಾಧಿಕಾರಿಗಳು ವೇದಿಕೆಯತ್ತ ಬಂದಿದ್ದಾರೆ.
ಈ ಸಂದರ್ಭ ತಮ್ಮ ಹೆಸರು ಕೈ ಬಿಡಲಾಗಿದ್ದು, ಪ್ರಶಸ್ತಿ ನೀಡಲಾಗುತ್ತಿಲ್ಲ ಎಂದು ವೇದಿಕೆಯಿಂದಲೇ ವಾಪಸ್
ಕಳಿಸಿದ್ದಾರೆ. ಈ ಅವ್ಯವಸ್ಥೆ ಇದೀಗ ದಕ್ಷಿಣ ಕನ್ನಡ ಜಿಲ್ಲಾಡಳಿತ ಅದ್ಯಾವ ಮಟ್ಟಿಗಿನ ಪೂರ್ವ ತಯಾರಿ
ನಡೆಸಿತ್ತು ಅನ್ನೋದಕ್ಕೆ ಕೈಗನ್ನಡಿ ಹಿಡಿದಂತಿದೆ. ಎಲ್ಲ ಪರಿಶೀಲನೆ ಬಳಿಕವೇ ಪ್ರಶಸ್ತಿ ಪ್ರದಾನ ಮಾಡುವ
ಶಿಷ್ಟಾಚಾರ ಪಾಲಿಸಬೇಕಿದ್ದ ಜಿಲ್ಲಾಡಳಿತ, ಅಷ್ಟೊಂದು ಜನರ ಮಧ್ಯೆ ಈ ಗೊಂದಲ ಮಾಡಿಕೊಂಡಿದ್ದೇಕೆ ಅನ್ನೋದು
ಗೊತ್ತಾಗಿಲ್ಲ. ಈ ಬಾರಿ ಜಿಲ್ಲಾ ಪ್ರಶಸ್ತಿಗೆ ಹಲವು ಮಂದಿ ಭಾರೀ ಪ್ರಭಾವ ಬೀರಿದ್ದು, ಅದೆಷ್ಟೋ ಸಾಧಕರಿದ್ದರೂ
ಅವರೆಲ್ಲರನ್ನ ಮರೆತು ಸಣ್ಣಪುಟ್ಟ ಸಾಧಕರಿಗೆ ಮಣೆ ಹಾಕಿದೆ ಅನ್ನೋ ಚರ್ಚೆಯೂ ನಡೆಯುತ್ತಿದೆ.
ಡಿವೈಎಫ್‌ಐ ವ್ಯಂಗ್ಯ!
ಇನ್ನು ನಿನ್ನೆ
ಪ್ರಶಸ್ತಿ ಪಟ್ಟಿ ಬಿಡುಗಡೆಯಾಗುತ್ತಲೇ ಡಿವೈಎಫ್‌ಐ ಮುಖಂಡ ಬಿಕೆ ಇಮ್ತಿಯಾಝ್ ಜಿಲ್ಲಾ ಪ್ರಶಸ್ತಿ
ಪಟ್ಟಿಯ ಕುರಿತು ವ್ಯಂಗ್ಯವಾಡಿದ್ದರು. “ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆಯುವ ಅರ್ಹತೆ ಇದ್ದರೂ
ಜಿಲ್ಲಾ ಪ್ರಶಸ್ತಿ ನೀಡುವ ಯೋಗ್ಯತೆ ಇಲ್ಲದ ಜಿಲ್ಲಾಡಳಿತ. ರಾತ್ರಿ ಶಾಲೆಯ ತೆರೆದು ಅಕ್ಷರ ಕಲಿಸಿದ
60 ವರ್ಷದ ನಿರಂತರ ಸಾಮಾಜಿಕ ಸೇವಾ ಚಟುವಟಿಕೆಯಲ್ಲಿರುವ ಜಪ್ಪಿನಮೊಗರು ಗ್ರಾಮ ಯುವಕ ಮಂಡಲಕ್ಕೆ ಜಿಲ್ಲಾ
ಪ್ರಶಸ್ತಿ ನೀಡದೆ ಜಿಲ್ಲಾ ಪ್ರಶಸ್ತಿಯ ಗೌರವಕ್ಕೆ ಚ್ಯುತಿ ತಂದಿದ್ದಾರೆ. ಒಲೈಕೆಗಾಗಿ ನಿನ್ನೇ ಮೊನ್ನೆ
ಹುಟ್ಟಿದ ಕೂಸುಗಳಿಗೆ ಪ್ರಶಸ್ತಿ ನೀಡಿದ ಜಿಲ್ಲಾಡಳಿತದ ಪ್ರಶಸ್ತಿ ನೀಡುವ ಮಾನದಂಡವೇನು? ಮಸೀದಿ ಕಾರ್ಯದರ್ಶಿ
ಆಗಿದ್ದವನಿಗೆ, ಟೂರ್ನಮೆಂಟ್ ಮಾಡಿಸಿದವನಿಗೆ ಪ್ರಶಸ್ತಿ ಸಿಗುವುದಾದರೆ ಜಿಲ್ಲಾ ರಾಜ್ಯ ಪ್ರಶಸ್ತಿಗಳು
ರಾಜಕೀಯ ಪುಢಾರಿಗಳ ಹಿಂಬಾಲಕರಿಗೆ ಮಾತ್ರ ಎಂದು ಜಿಲ್ಲಾಡಳಿತ ಘೋಷಣೆ ಮಾಡಿ ಬಿಡುವುದು ಒಳಿತು” ಎಂದು
ಬಿಕೆ ಇಮ್ತಿಯಾಝ್ ಹೇಳಿಕೆ ನೀಡಿದ್ದರು.