.jpeg)
PUTTUR: ಪುತ್ತೂರಿನಲ್ಲಿ ಅಶೋಕ ಜನ-ಮನ; ಕನಕಪುರ ಬಂಡೆ ಗುಣಗಾನ
ಪುತ್ತೂರು: ಅಶೋಕ್ ಕುಮಾರ್ ರೈ ಅವರು ಅವಕಾಶಗಳನ್ನು ಸೃಷ್ಟಿಸಿಕೊಂಡು ಧರ್ಮ ಕಾರ್ಯದ ಮೂಲಕ ಸಮಾಜದ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಜನತೆಯ ಮೇಲೆ ನಂಬಿಕೆಯಿಟ್ಟು ಡೊಡ್ಡ ಮಟ್ಟದಲ್ಲಿ ಜನಸೇವೆ ಮಾಡುತ್ತಿದ್ದಾರೆ. ಅವರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಜನತೆ ಉಳಿಸುವ ಕೆಲಸ ಮಾಡಬೇಕು ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಪುತ್ತೂರಿನ ಕೊಂಬೆಟ್ಟು ತಾಲ್ಲೂಕು ಕ್ರೀಡಾಂಗಣದಲ್ಲಿ ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ, ಟ್ರಸ್ಟ್‍ನ ಪ್ರವರ್ತಕರಾದ ಶಾಸಕ ಅಶೋಕ್‍ಕುಮಾರ್ ರೈ ಅವರ ಸಾರಥ್ಯದಲ್ಲಿ ದೀಪಾವಳಿ ಪ್ರಯುಕ್ತ ಶನಿವಾರ ನಡೆದ `ಅಶೋಕ ಜನ-ಮನ' ವಸ್ತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಶೋಕ್‍ಕುಮಾರ್ ರೈ ಅವರು ಆಗಾಗ ಮುಖ್ಯಮಂತ್ರಿಗಳ ಬಳಿಗೆ ಬಂದು ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಅನುದಾನಕ್ಕಾಗಿ ಜಗಳವಾಡುತ್ತಿದ್ದಾರೆ. ಸರ್ಕಾರ ಅವರ ಭಾವನೆಗಳನ್ನು ಅರಿತುಕೊಂಡಿದೆ. ಅವರು ಕೇಳಿರುವ ಕೆಲಸಗಳನ್ನು ಹಂತ ಹಂತವಾಗಿ ಮಾಡಿಕೊಡಲು ಸರ್ಕಾರ ಬದ್ಧವಾಗಿದೆ ಎಂದ ಅವರು, ಜಾತ್ಯಾತೀತ ನೆಲೆಯಲ್ಲಿ ಧರ್ಮದಲ್ಲಿ ಒಗ್ಗಟ್ಟು ತರುವ ಕೆಲಸ ಆಗಬೇಕು. ನೀವು ಕೂಡ ಪಕ್ಷಾತೀತವಾಗಿ ಅಶೋಕ್ ರೈ ಅವರ ಪರ ನಿಲ್ಲಬೇಕು ಎಂದು ಜತೆಗೆ ಕರೆಯಿತ್ತರು.
ಕೇವಲ ಮಾತಿನಿಂದ ಸೆಳೆಯುವವ ನಾನಲ್ಲ, ನಾನು ಕೆಲಸ ಮಾಡಿ ಜನರನ್ನು ಸೆಳೆಯುವವ. ಅದರಂತೆ ಅಶೋಕ್ ರೈ ಅವರು ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಜನ ಅವರನ್ನ ನಿರಂತರವಾಗಿ ಬೆಂಬಲಿಸಬೇಕು ಎಂದು ಗುಣಗಾನ ಮಾಡಿದರು.
ಅಶೋಕ್ ರೈ ಅವರು ಬೇರೆ ಪಕ್ಷದಿಂದ ಬಂದರೂ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರು ಬೆಂಗಳೂರಿಗೆ ಬಂದಾಗ ಮುಖ್ಯಮಂತ್ರಿ ಅವರ ಜೊತೆ ನಿರಂತರವಾಗಿ ಅಭಿವೃದ್ಧಿ ವಿಚಾರದಲ್ಲಿ ಜಗಳವಾಡುತ್ತಾ ಪುತ್ತೂರು ತಾಲೂಕಿಗೆ ಬೇಕಾದ ಯೋಜನೆಗಳನ್ನ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ನಾನು ಅಶೋಕ್ ರೈಗಳಿಗೆ ಬುದ್ಧಿ ಹೇಳುತ್ತಿದ್ದೆ. ಸ್ವಲ್ಪ ನಿಧಾನವಾಗಿ ರಾಜಕೀಯದಲ್ಲಿ ಇರಬೇಕು. ವರ್ಷಕ್ಕೊಂದು ಯೋಜನೆಗಳ ಕೆಲಸವನ್ನ ಮಾಡು ಎಂದಿದ್ದೇನೆ ಎಂದರು.
ಇನ್ನು ನಾನು ಕಳೆದ ಹಲವು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಕೆಲವರು ಭಾವನೆಯ ಮೇಲೆ ರಾಜಕಾರಣ ಮಾಡುತ್ತಾರೆ. ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಹಾಗಾಗಿ ಐದು ಗ್ಯಾರಂಟಿಗಳ ಮೂಲಕ ನಾವು ಜನರ ಪರವಾಗಿ ಕೆಲಸ ಮಾಡಿ ಹತ್ತಿರವಾಗಿದ್ದೇವೆ. ಬೆಲೆ ಏರಿಕೆ ಗಗನಕ್ಕೆ, ಆದಾಯ ಪಾತಾಳಕ್ಕೇರಿದ ದಿನಗಳಲ್ಲಿ ಈ ಗ್ಯಾರಂಟಿ ಯೋಜನೆಗಳನ್ನ ಘೋಷಿಸಿ ಯಶಸ್ಸು ಕಂಡಿದ್ದೇವೆ ಎಂದರು.
ಇನ್ನು ಮಂಗಳೂರು 6 ಗಂಟೆಯ ನಂತರ ಡ್ರೈ ನಗರ ಆಗ್ತಾ ಇದೆ. ರಸ್ತೆಯ ವ್ಯವಸ್ಥೆಗಳು ಸರಿಯಿಲ್ಲ. ಹೆದ್ದಾರಿಗಳಲ್ಲಿ ಧೂಳ್ ನಿಂದಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಕರಾವಳಿಯ ರಾಷ್ಟ್ರೀಕೃತ ಬ್ಯಾಂಕುಗಳು, ವಿದ್ಯಾಸಂಸ್ಥೆಗಳೆಲ್ಲ ಮಾಯವಾಗುತ್ತಿವೆ. ಕೋಮುಗಲಭೆಯಿಂದಾಗಿ ಜನ ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಇಲ್ಲಿನ ಮಂದಿ ವಿದೇಶಕ್ಕೆ ಕೆಲಸಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ವಿವಿಧ ಕ್ಷೇತ್ರಗಳನ್ನೊಳಗೊಂಡಿದೆ. ರಾಜ್ಯದಲ್ಲಿ 300 ಕಿ.ಮೀ ಕರಾವಳಿ ಪ್ರದೇಶವಿದೆ. ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಪ್ರವಾಸೋದ್ಯಮ ಯೋಜನೆ ಮತ್ತು ಕರಾವಳಿ ಪ್ರದೇಶಕ್ಕೆ ಪ್ರತ್ಯೇಕ ಉದ್ಯೋಗ ನೀತಿ ಸೃಷ್ಠಿಸಿ ಯುವಕರಿಗೆ ಉದ್ಯೋಗ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಮುಂದಿನ ಮೂರು ವರ್ಷ ರಾಜ್ಯದಲ್ಲಿ ನಿಮ್ಮ ಸೇವೆಯನ್ನು ಮಾಡುವ ಶಕ್ತಿಯನ್ನ ದೇವರು ನೀಡಿದ್ದಾರೆ. ಬಳಿಕ 2028ರಲ್ಲೂ ನಮ್ಮದೇ ಸರ್ಕಾರ ರಾಜ್ಯದಲ್ಲಿ ಬರಲಿದೆ ಎಂದು ವಿರೋಧ ಪಕ್ಷಕ್ಕೆ ಸವಾಲು ಹಾಕಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್‍ಕುಮಾರ್ ರೈ ಅವರು ಮಾತನಾಡಿ, ಇದು 12ನೇ ವರ್ಷದ ವಸ್ತ್ರ ವಿತರಣಾ ಕಾರ್ಯಕ್ರಮವಾಗಿದ್ದು, ಕಳೆದ ವರ್ಷ 63500 ಮಂದಿಗೆ ವಸ್ತ್ರ ವಿತರಣೆ ಮಾಡಲಾಗಿತ್ತು. ಈ ಬಾರಿ ಸುಮಾರು ರೂ.3.5 ಕೋಟಿ ವೆಚ್ಚದಲ್ಲಿ 75 ಸಾವಿರ ಮಂದಿಗೆ ವಸ್ತ್ರ ವಿತರಣೆ ಮಾಡಲಾಗುತ್ತಿದೆ. ದೇವರು ಶಕ್ತಿ ಕೊಡುವ ತನಕ ಮತ್ತು ಜನತೆಯ ಆಶೀರ್ವಾದ ಇರುವ ತನಕ ಜಾತ್ಯಾತೀತ ನೆಲೆಯಲ್ಲಿ ಈ ಕಾರ್ಯಕ್ರಮ ಮುಂದುವರಿಯಲಿದ್ದು, ಮುಂದಿನ ದಿನಗಳಲ್ಲಿ 1 ಲಕ್ಷ ಮಂದಿಗೆ ವಸ್ತ್ರ ವಿತರಿಸುವ ಪರಿಕಲ್ಪನೆ ಇದೆ ಎಂದರು.
ಭ್ರಷ್ಟಾಚಾರ ರಹಿತವಾಗಿ ಅಕ್ರಮ ಸಕ್ರಮ, 94ಸಿ, 94 ಸಿಸಿ ಕಡತಗಳ ವಿಲೇವಾರಿ ಸೇರಿದಂತೆ ಜನರ ಕೆಲಸ ಕಾರ್ಯಗಳನ್ನು ಮಾಡುತ್ತೇನೆ. ಶುದ್ಧ ಕುಡಿಯುವ ನೀರಿನ ಯೋಜನೆಗೆ ಈಗಾಗಲೇ ರೂ.400 ಕೋಟಿ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆದಿದೆ. ಕೆಎಂಎಫ್ ಘಟಕ ಸ್ಥಾಪನೆಗೆ 15 ಎಕ್ರೆ, ಕ್ರಿಕೇಟ್ ಕ್ರೀಡಾಂಗಣಕ್ಕೆ 25 ಎಕ್ರೆ ಜಾಗ ಕೊಡುವ ಕೆಲಸ ಆಗಿದೆ. ಒಳ್ಳೆಯ ಕ್ರೀಡಾಂಗಣ ನಿರ್ಮಾಣಕ್ಕಾಗಿ 20ಎಕ್ರೆ ಜಾಗ ಕಾದಿರಿಸಲಾಗಿದ್ದು, ರೂ.8ಕೋಟಿ ಮಂಜೂರಾಗಿದೆ. ಪುತ್ತೂರಿಗೆ ರೂ.15 ಕೋಟಿಯ ಆಯುಷ್ ಮೆಡಿಕಲ್ ಕಾಲೇಜು ಮಂಜೂರಾಗಿದೆ. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ 40 ಎಕ್ರೆ ಜಾಗ ಕಾದಿರಿಸಲಾಗಿದ್ದು, ಮುಂದಿನ ಬಜೆಟ್‍ಗಳಲ್ಲಿ ರೂ.150 ಕೋಟಿಯಂತೆ ಹಂತ ಹಂತವಾಗಿ ಅನುದಾನ ಮಂಜೂರು ಮಾಡಬೇಕೆನ್ನುವುದು ನಮ್ಮ ಬೇಡಿಕೆಯಾಗಿದೆ ಎಂದರು.
ಮಾಯಿದೆ ದೇವುಸ್ ಚರ್ಚ್‍ನ ಪ್ರಧಾನ ಧರ್ಮಗುರು ಫಾ.ಲೋರೆನ್ಸ್ ಮಸ್ಕರೇನ್ಹಸ್ ಅವರು ಮಾತನಾಡಿ, ಪರರಿಗಾಗಿ ಬದುಕಿದಾಗ ಮತ್ತು ಒಳಿತಿನ ಕೆಲಸ ಕಾರ್ಯಗಳಿಂದ ಮಾತ್ರ ನಮಗೆ ನೆಮ್ಮದಿ, ತೃಪ್ತಿ, ಸಂತೋಷ ಸಿಗಲು ಸಾಧ್ಯ. ಎಲ್ಲರೂ ನೆಮ್ಮದಿಯಿಂದ ಬದುಕಬೇಕೆನ್ನುವ ಬಡವರ ಪರ ಕಾಳಜಿಯೊಂದಿಗೆ ಅಶೋಕ್ ರೈ ಅವರು ಮಾಡುತ್ತಿರುವ ವಸ್ತ್ರದಾನ, ನೊಂದವರಿಗೆ ಸಹಾಯ, ಸೂರು ಕೊಡುವ ಕೆಲಸ ದೇವರು ಮೆಚ್ಚುವ ಕಾರ್ಯವಾಗಿದೆ ಎಂದರು.
ಮುಸ್ಲಿಂ ಸಮುದಾಯದ ಧರ್ಮಗುರು ಎಸ್.ಬಿ.ದಾರಿಮಿ ಅವರು ಮಾತನಾಡಿ, ಅಶೋಕ್ ರೈ ಅವರು ಹಿಂದೂ ಧರ್ಮವನ್ನು, ಭಾರತೀಯ ಧರ್ಮವನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಮುಂದಿನ 25 ವರ್ಷಗಳ ಕಾಲ ಪುತ್ತೂರಿನಲ್ಲಿ ಅಶೋಕ ಸಾಮ್ರಾಜ್ಯ ಇರಲಿದೆ. ಆಡಳಿತ ಮಾಡುವವರು ಎಲ್ಲಾ ಧರ್ಮದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋದಲ್ಲಿ ಮಾತ್ರ ಭಾರತಕ್ಕೆ ಭವಿಷ್ಯವಿದೆ. ಇಲ್ಲದಿದ್ದರೆ ಭಾರತ ಮತ್ತೊಂದು ಪಾಕಿಸ್ಥಾನ, ಅಪ್ಘಾನಿಸ್ಥಾನ ಆಗಬಹುದು ಎಂದರು.
ಅಶೋಕ್‍ಕುಮಾರ್ ರೈ ಅವರ ಪತ್ನಿ ಸುಮಾ ಆಶೋಕ್‍ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್ ಆರ್.ಪೂಜಾರಿ, ಮಿಥುನ್ ರೈ, ರಕ್ಷಿತ್ ಶಿವರಾಂ, ಇನಾಯತ್ ಅಲಿ, ಎಂ.ಎಸ್.ಮಹಮ್ಮದ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಕೃಷ್ಣಪ್ರಸಾದ್ ಆಳ್ವ, ಕಾವು ಹೇಮನಾಥ ಶೆಟ್ಟಿ, ಡಾ.ರಘು ಬೆಳ್ಳಿಪ್ಪಾಡಿ, ಕೃಷ್ಣಪ್ಪ ಸುಳ್ಯ, ಅಶೋಕ್‍ಕುಮಾರ್ ರೈ ಅವರ ಪತ್ನಿ ಸುಮಾ ಆಶೋಕ್ ರೈ, ತಾಯಿ ಗಿರಿಜಾ ಎಸ್ ರೈ, ರೈ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಪುಡಾ ಸದಸ್ಯ ನಿಹಾಲ್ ಶೆಟ್ಟಿ ಮತ್ತಿತರರು ಇದ್ದರು. ಇನ್ನು ಇದೇ 12 ಮಂದಿ ಗ್ರಾಮೀಣ ಸಾಧಕರಿಗೆ ಸನ್ಮಾನ ಮಾಡಲಾಯಿತು.