Uchila | ದಸರಾದಲ್ಲಿ ಮುಸ್ಲಿಂ ವಾಗ್ಮಿಯ ಉಪನ್ಯಾಸ; ಜೋರಾದ ಪರ-ವಿರೋಧದ ಚರ್ಚೆ!
Monday, October 14, 2024
ಉಡುಪಿ: 3ನೇ ವರ್ಷದ ಉಚ್ಚಿಲ ದಸರಾ ಮಹೋತ್ಸವವು ಭಾರೀ ವಿಜೃಂಭಣೆಯಿಂದ ಸಂಪನ್ನಗೊಂಡಿದೆ. ಇದಾಗುತ್ತಲೇ ಉಚ್ಚಿಲ ದಸರಾದಲ್ಲಿ ಮುಸ್ಲಿಂ ವ್ಯಕ್ತಿಯೋರ್ವರಿಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕೆ ಹಿಂದೂ ಸಂಘಟನೆಯ ಕೆಲವು ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಉಚ್ಚಿಲ ದಸರಾದ ಧಾರ್ಮಿಕ ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷಕ ಹಾಗೂ ವಾಗ್ಮಿಯೂ ಆಗಿರುವ ರಕೀಬ್ ಕನ್ನಂಗಾರ್ ಅವರ ಉಪನ್ಯಾಸ ಆಯೋಜಿಸಲಾಗಿತ್ತು. ಜೊತೆಗೆ ಅವರನ್ನು ದಸರಾ ಸಮಿತಿಯ ಪದಾಧಿಕಾರಿಗಳು ಸನ್ಮಾನಿಸಿ ಬೀಳ್ಕೊಟ್ಟಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಧಾರ್ಮಿಕ ಭಾವನೆಗೆ ಇದು ಚ್ಯುತಿ ತರುವ ಕೆಲಸ. ವ್ರತ ಪಾಲಿಸುವ ಲಕ್ಷಾಂತರ ಭಕ್ತರು ಸೇರುವ ಕಾರ್ಯಕ್ರಮಕ್ಕೆ ಮಾಂಸಹಾರ ಸೇವಿಸುವ ವ್ಯಕ್ತಿಯ ಅಗತ್ಯವಿತ್ತೇ ಎಂದು ಪ್ರಶ್ನಿಸಿದ್ದಾರೆ. ಜಾಲತಾಣದಲ್ಲಿ ಈ ಕುರಿತಂತೆ ಹಲವು ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ.