Pili Politics | 'ಪಿಲಿ ನಲಿಕೆ'ಯಲ್ಲಿ ಬಹಿರಂಗವಾಯಿತು ಬಿಜೆಪಿಯ ಬಣ ರಾಜಕೀಯ!
Monday, October 14, 2024
ಮಂಗಳೂರು: ತುಳುನಾಡ ಸಂಸ್ಕೃತಿಯ ಪ್ರತೀಕ ಹುಲಿವೇಷ ಕುಣಿತದ ವೇದಿಕೆಯೂ ಈಗ ರಾಜಕೀಯ ಬಣಗಳ ಬಡಿದಾಟಕ್ಕೆ ವೇದಿಕೆಯಾಗಿದೆ. ಇದುವರೆಗೂ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರ 'ಪಿಲಿ ನಲಿಕೆ' ಕಾರ್ಯಕ್ರಮದಿಂದ ನೇರವಾಗಿ ಅಂತರ ಕಾಯ್ದುಕೊಂಡಿದ್ದ ಬಿಜೆಪಿ ಮುಖಂಡರು, ಈ ಬಾರಿ ಬಹಿರಂಗವಾಗಿ ಗುರುತಿಸಿಕೊಳ್ಳುವ ಮೂಲಕ ಹೊಸ ಇತಿಹಾಸದ ಜೊತೆಗೆ ವಿವಾದಕ್ಕೂ ಕಾರಣರಾಗಿದ್ದಾರೆ.
ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಯುವ ಮೋರ್ಚಾ ಮುಖಂಡ ನಂದನ್ ಮಲ್ಯ ಭಾಗಿಯಾಗಿದ್ದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾರ್ಯಕರ್ತರ ವಲಯದಲ್ಲಿ ಈ ಬೆಳವಣಿಗೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ನಳಿನ್ ಬಣಕ್ಕೆ ಟಕ್ಕರ್!?
'ಪಿಲಿ ನಲಿಕೆ' ವೇದಿಕೆಯು ಜಿಲ್ಲೆಯಲ್ಲಿನ ಬಿಜೆಪಿಯ 2 ಬಣಗಳ ನಡುವಿನ ವೈಮನಸ್ಸು ಬಹಿರಂಗಗೊಂಡಿದೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಬ್ರಿಜೇಶ್ ಚೌಟ ಬಣಗಳ ನಡುವಿನ ತಿಕ್ಕಾಟಕ್ಕೆ ವೇದಿಕೆಯಾಗಿದೆ. ಮಿಥುನ್ ರೈ ಈ ಹಿಂದೆ ಉ.ಪ್ರ. ಸಿಎಂ ಆದಿತ್ಯನಾಥ್ ಹಾಗೂ ಸಂಘ ಪರಿವಾರ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಪ್ರತಿಭಟನೆ ಸಮಯದಲ್ಲಿ ನಿಂದಿಸಿದ್ದರು. ಅಂತಹ ನಾಯಕನ ಜೊತೆಗೆ ಗುರುತಿಸಿಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.