
PUTTUR: ಕಿಶೋರ್ ಹಿಂದುತ್ವಕ್ಕಾಗಿ ಶ್ರಮಿಸಿದವರು!!
ಪುತ್ತೂರು: ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ನೀಡಿದೆ. ತ್ಯಾಗ, ಬಲಿದಾನದಿಂದ ಹುಟ್ಟಿದ ಪಕ್ಷ ನಮ್ಮದು. ನಾವು ಹುದ್ದೆಗಾಗಿ ಕೆಲಸ ಮಾಡುವುದಿಲ್ಲ. ವ್ಯಕ್ತಿಗಿಂತ ಪಕ್ಷ ಮುಖ್ಯ ಎನ್ನುವುದು ನಮ್ಮ ಧ್ಯೇಯ. ಹಿಂದುತ್ವ, ಭವ್ಯ ಭಾರತಕ್ಕಾಗಿ ಕೆಲಸ ಮಾಡಲು ಸಿದ್ಧ ಎಂದು ದ.ಕ., ಉಡುಪಿ ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರ ಕ್ಷೇತ್ರ ವಿಧಾನ ಪರಿಷತ್ ಉಪ ಚುನಾವಣಾ ಬಿಜೆಪಿ ಅಭ್ಯರ್ಥಿ ಕಿಶೋರ್ ಬೋಟ್ಯಾಡಿ ಹೇಳಿದರು.
ಪುತ್ತೂರು ಬಿಜೆಪಿ ವತಿಯಿಂದ ಭಾನುವಾರ ಸಂಜೆ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಯಡಿಯೂರಪ್ಪ ಸರಕಾರ ಪಂಚಾಯತ್ ನ 8 ಸಾವಿರ ಹುದ್ದೆ ಭರ್ತಿ ಮಾಡಿದ್ದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಶ್ರೇಯೋಭಿವೃದ್ಧಿ, ಸ್ಥಳೀಯ ಸರಕಾರದ ಪ್ರಗತಿಗಾಗಿ ನಿರಂತರ ಕೆಲಸ ಮಾಡಲು ಕಟಿ ಬದ್ಧನಾಗಿದ್ದೇನೆ ಎಂದರು.
ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಈ ಚುನಾವಣೆಯಲ್ಲಿ ಕಾರ್ಯಕರ್ತರೇ ಮತದಾರರು. ಕಾರ್ಯಕರ್ತರಿಂದ ಕಾರ್ಯಕರ್ತರ ಆಯ್ಕೆ ಆಗುತ್ತದೆ. ಕಾರ್ಯಕರ್ತರು ಎಲ್ಲಾ ಚುನಾವಣೆ ಎದುರಿಸುವವರು. ಚುನಾಯಿತರು ನಮ್ಮ ಪ್ರತಿನಿಧಿಯವರನ್ನು ಆಯ್ಕೆ ಮಾಡುವವರು. ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸಲು ಬಿಜೆಪಿ ನಿರಂತರ ಶ್ರಮಿಸಿದೆ. ಪುತ್ತೂರಿನ ಯುವ ಕಾರ್ಯಕರ್ತನಿಗೆ ಮೊದಲ ಬಾರಿಗೆ ಪರಿಷತ್ ಅವಕಾಶ ಸಿಕ್ಕಿದೆ. ಕಿಶೋರ್ ಅವರನ್ನು ಆಯ್ಕೆ ಮಾಡುವ ಸೌಭಾಗ್ಯ ನಮಗೆ ಒದಗಿದೆ ಎಂದರು.
ಬಿಜೆಪಿ ವಿಭಿನ್ನ ಪಕ್ಷ ಎನ್ನುವುದನ್ನು ವಿರೋಧಿಗಳೇ ಒಪ್ಪಿಕೊಳ್ಳುತ್ತಿದ್ದಾರೆ. ಯುವ ಸಮುದಾಯಕ್ಕೆ ಪಕ್ಷ ಅವಕಾಶ ನೀಡುತ್ತಿದೆ. ಕಿಶೋರ್ ಹಿಂದುತ್ವಕ್ಕಾಗಿ ಶ್ರಮಿಸಿಕೊಂಡು ಬಂದವರು. ಕಾಶ್ಮೀರದಲ್ಲಿ ರಾಷ್ಟ್ರ ಧ್ವಜ ಹಾರಿಸಿದ ಸಾಹಸಿ. ಹಿಂದುತ್ವ, ರಾಷ್ಟ್ರದ ಪರವಾಗಿರುವವರು ಕಿಶೋರ್ ಅವರಿಗೆ ಅ.21 ರಂದು ಮತ ನೀಡಬೇಕು ಎಂದು ಹೇಳಿದರು.
ಚುನಾವಣಾ ನಿರ್ವಹಣಾ ಸಮಿತಿ ಜಿಲ್ಲಾ ಸಂಚಾಲಕ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ, ಈ ದೇಶದಲ್ಲಿ ಬದಲಾವಣೆಯ ಅಪೇಕ್ಷೆ ಹಲವು ವರ್ಷಗಳ ಬಳಿಕ ಬಿಜೆಪಿಯಂತಾ ಪಕ್ಷಕ್ಕೆ ಅವಕಾಶ ನೀಡಿದೆ ಎನ್ನುವುದನ್ನು ಪ್ರಧಾನಿ ಮೋದಿ ಹೇಳಿದ್ದರು. ನಮ್ಮ ಜವಾಬ್ದಾರಿ ಏನು ಎಂಬುದನ್ನು ಅರಿಯಬೇಕು. ಕಳೆದ ಅವಧಿಯ 1593 ಕ್ಕಿಂತ ಹೆಚ್ಚಿನ ಮತ ನೀಡುವ ಮೂಲಕ ಕೆಟ್ಟ ಆಡಳಿತದ ರಾಜ್ಯ ಸರಕಾರಕ್ಕೆ ಸಂದೇಶ ನೀಡಬೇಕು ಎಂದರು. ಇದು ಮುಂದಿನ ತಾ.ಪಂ., ಜಿ.ಪಂ. ಚುನಾವಣೆಗೆ ದೀಕ್ಸೂಚಿ. ಗ್ರಾಮ ಪಂಚಾಯತ್ ಬಲಪಡಿಸಿದ ಕೆಲಸ ಮಾಡಿದ್ದರೆ ಅದು ಬಿಜೆಪಿ. ಆದ್ದರಿಂದ ಲಘುವಾಗಿ ಪರಿಗಣಿಸಬೇಡಿ. ಗ್ರಾಮ, ಬೂತ್ ಮಟ್ಟದಲ್ಲಿ ಕ್ರಿಯಾಶೀಲತೆ ತೋರಬೇಕು. ನಾನು ಪಕ್ಷಕ್ಕಾಗಿ 1 ಮತವನ್ನಾದರೂ ಹೆಚ್ಚು ಮಾಡಿಸ್ತೇನೆ ಎಂಬ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಸಹ ಸಂಚಾಲಕ ರಾಕೇಶ್ ಕೆಡೆಂಜಿ ಚುನಾವಣಾ ಪ್ರಕ್ರಿಯೆಯ ಮಾಹಿತಿ ನೀಡಿದರು. ಪ್ರತಿ ಗ್ರಾಪಂ., ನಗರಸಭೆಯಲ್ಲಿ ಚುನಾವಣೆ ನಡೆಯಲಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಸಂಜೀವ ಮಠಂದೂರು, ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಆರ್.ಸಿ. ನಾರಾಯಣ, ನಗರಸಭಾ ಅಧ್ಯಕ್ಷೆ ಲೀಲಾವತಿ ನಾಯ್ಕ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಶಾಂತ್ ಮಾರ್ತ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ಬಿಜೆಪಿ ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ, ಬಿಜೆಪಿ, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರು, ಪದಾಧಿಕಾರಿಗಳಾದ ಸಂತೋಷ್ ಕೈಕಾರ, ಗ್ರಾಮಾಂತರ ಕಾರ್ಯದರ್ಶಿ ಉಮೇಶ್ ಕೊಡಿಬೈಲ್, ಅನಿಲ್ ತೆಂಕಿಲ, ನಾಗೇಶ್ ಪ್ರಭು, ಪ್ರಶಾಂತ್ ನೆಕ್ಕಿಲಾಡಿ ಉಪಸ್ಥಿತರಿದ್ದರು.
ಪುತ್ತೂರು ಚುನಾವಣಾ ಸಂಚಾಲಕ ನಿತೀಶ್ ಶಾಂತಿವನ ಸ್ವಾಗತಿಸಿ, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ವಂದಿಸಿದರು. ಸುನಿಲ್ ದಡ್ಡು ಕಾರ್ಯಕ್ರಮ ನಿರ್ವಹಿಸಿದರು.