
PUTTUR: ನೆಲ್ಯಾಡಿ ಸರ್ಕಾರಿ ಶಾಲೆ ಬಗ್ಗೆ `ಅಪಪ್ರಚಾರ'
ಪುತ್ತೂರು: ನೆಲ್ಯಾಡಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಲ್ಲಿನ ಕರ್ತವ್ಯ ನಿರತ ಶಿಕ್ಷಕರೊಬ್ಬರ ಕುರಿತು ಖಾಸಗಿ ವಾಹಿನಿಯೊಂದು ಇಲ್ಲ-ಸಲ್ಲದ ಆರೋಪ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಮೂಲಕ ಶಾಲೆಯ ಹೆಸರಿಗೆ ಧಕ್ಕೆ ತಂದಿರುವ ಘಟನೆ ಖಂಡನೀಯ ಎಂದು ನೆಲ್ಯಾಡಿ ಹಿರಿಯ ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಮತ್ತು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಬಿನೋಜ್ ವಿ.ವಿ ಅವರು ಹೇಳಿದ್ದಾರೆ.
ಶನಿವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಇಂದಿನ ದಿನಗಳಲ್ಲಿ ಮಕ್ಕಳು ಬರುವುದೇ ಕಷ್ಟ. ಅಂತಹ ಸಂದರ್ಭದಲ್ಲಿಯೂ 425 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ನೆಲ್ಯಾಡಿಯಲ್ಲಿ ಮೂರು ಖಾಸಗಿ ಶಾಲೆಗಳಿದ್ದರೂ ಮಕ್ಕಳನ್ನು ಸೆಳೆಯುವಲ್ಲಿ ನಮ್ಮ ಸರ್ಕಾರಿ ಯಶಸ್ವಿಯಾಗಿದೆ. ಇದೀಗ ನಮ್ಮ ಶಾಲೆಯ ಶಿಕ್ಷಕರೊಬ್ಬರ ಮೇಲೆ ಈ ಶಾಲೆಗೆ ಸಂಬಂಧ ಪಡದ ವ್ಯಕ್ತಿಯೊಬ್ಬ ಹೇಳಿದ ಮಾತುಗಳನ್ನು ಕೇಳಿಕೊಂಡು ಶಾಲೆಯ ಘನತೆಗೆ ಕುಂದುಂಟು ಮಾಡುವ ಕೆಲಸ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಕಳೆದ 15 ವರ್ಷಗಳಿಂದ ಈ ಸರ್ಕಾರಿ ಶಾಲೆ ಪ್ರಗತಿಪಥದಲ್ಲಿ ಸಾಗುತ್ತಿದ್ದು, ಇಲ್ಲಿ ಮಕ್ಕಳಿಗೆ ಬೇಕಾದ ಮೂಲಭೂತ ಸೌಕರ್ಯ, ಗ್ರಂಥಾಲಯ, ಪ್ರಯೋಗಶಾಲೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಶಿಕ್ಷಕ ವಿಮಲ್ ಕುಮಾರ್ ಅವರ ದೊಡ್ಡ ಪಾತ್ರವಿದೆ. ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡ `ಗುಬ್ಬಚ್ಚಿ ಸ್ಪೀಕಿಂಗ್' ಎಂಬ ವಿಭಿನ್ನ ಕಾರ್ಯಕ್ರಮ ಜಿಲ್ಲೆಯಲ್ಲಿ ಮೊದಲು ಅನುಷ್ಠಾನಗೊಂಡಿರುವುದು ನೆಲ್ಯಾಡಿಯ ನಮ್ಮ ಶಾಲೆಯಲ್ಲಿ. ಕೇವಲ ಫೇಸ್‍ಬುಕ್ ಮೂಲಕ ರೂ. 1ಲಕ್ಷ ಮೌಲ್ಯದ ಪುಸ್ತಕ ಸಂಗ್ರಹಿಸಿದ ಈ ಶಿಕ್ಷಕರು ಶಾಲಾಭಿವೃದ್ಧಿಯಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಓರ್ವ ಕ್ರೀಯಾಶೀಲ ಶಿಕ್ಷಕ ವಿಮಲ್ ಕುಮಾರ್ ಮೇಲೆ ದುರುದ್ದೇಶಪೂರಿತವಾಗಿ ತೇಜೋವಧೆ ಮಾಡಿರುವ ಖಾಸಗಿ ವಾಹಿನಿಯ ಕೃತ್ಯ ನಮಗೆಲ್ಲಾ ನೋವುಂಟು ಮಾಡಿದೆ ಎಂದು ಅವರು ಹೇಳಿದರು.
ನಮ್ಮ ಪೋಷಕರಲ್ಲಿಯೇ ಕೇಳಬಹುದಿತ್ತು..
ಖಾಸಗಿ ವಾಹಿನಿಯವರು ನಮ್ಮ ಶಾಲೆಯ ವ್ಯವಸ್ಥೆಗಳ ಬಗ್ಗೆ, ಶಿಕ್ಷಕರ ಬಗ್ಗೆ ನಮ್ಮ ಶಾಲಾ ಪೋಷಕರಲ್ಲಿಯೇ ಕೇಳಬಹುದಿತ್ತು. ಎಸ್‍ಡಿಎಂಸಿ ಸದಸ್ಯರಲ್ಲಿ ತಿಳಿದುಕೊಳ್ಳಬಹುದಿತ್ತು. ಆದರೆ ಅದೇನನ್ನೂ ಮಾಡದೆ ಈ ಶಾಲೆಗೆ ಸಂಬಂಧಪಡದ ಸ್ವಯಂಘೋಷಿತ ಎಸ್‍ಡಿಎಂಸಿ ಒಕ್ಕೂಟ ಎಂದು ಹೇಳಿಕೊಂಡು ತಿರುಗುವ, ದೂರದ ಬಂಟ್ವಾಳದಲ್ಲಿರುವ ವ್ಯಕ್ತಿ ಹೇಳುವುದನ್ನು ನಂಬಿ ಈ ಅಪಪ್ರಚಾರ ನಡೆಸಲಾಗಿದೆ. ಇದು ಶಿಕ್ಷಕರ ನೈತಿಕ ಧೈರ್ಯ ಹಾಗೂ ಆಸಕ್ತಿಯನ್ನು ಕುಗ್ಗಿಸುವ ಕೆಲಸವಾಗಿದೆ. ಇದರ ಜತೆಗೆ ಶಾಲೆಯ ಘನತೆಗೆ ಹಾನಿ ಉಂಟು ಮಾಡುವ ಕೃತ್ಯವಾಗಿದೆ. ಶಿಕ್ಷಕರ ಆತ್ಮಸ್ಥೈರ್ಯಕ್ಕೆ ಪೆಟ್ಟುಕೊಡುವ ಮೂಲಕ ಶಾಲೆಯ ಪ್ರಗತಿಗೆ ಕೊಡಲಿ ಏಟು ಹಾಕುವ ಕೆಲಸವಾಗಿದೆ. ಕೇವಲ ಶಾಲಾ ಹಾಜರಾತಿಯ ದಾಖಲೆಯನ್ನು ಇಟ್ಟುಕೊಂಡು ಸರ್ಕಾರಿ ಶಾಲೆಗೆ ಮುಂದೆ ಮಕ್ಕಳು ಬರದಂತೆ ಮಾಡುವ ಹುನ್ನಾರ ನಡೆಸಲಾಗಿದೆ. ಈ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳುವಲ್ಲಿ ಇಲ್ಲಿನ ಪೋಷಕರು, ಸಮಿತಿ, ಶಿಕ್ಷಕರು ಒಂದಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಅಧೋಗತಿಯತ್ತ ಸಾಗುತ್ತಿರುವ ಸಂದರ್ಭ ನಮ್ಮ ಶಾಲೆಯಲ್ಲಿ ದೊಡ್ಡ ಮಟ್ಟದ ಮಕ್ಕಳ ಸಂಖ್ಯೆ ಇದ್ದು, ಇದನ್ನು ಸಹಿಸಲಾಗದ ವಿಕೃತ ಮನಸ್ಸುಗಳ ಕ್ರಿಯೆ ಇದಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‍ಡಿಎಂಸಿ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಎನ್, ಎಸ್‍ಡಿಎಂಸಿ ಸದಸ್ಯ ಕೆ.ಪಿ.ಪ್ರಸಾದ್, ನಿವೃತ್ತ ದೈಹಿಕ ಶಿಕ್ಷಕ ಜನಾರ್ಧನ ಉಪಸ್ಥಿತರಿದ್ದರು.