
Narayana Guru Circle: ನಿರ್ವಹಣೆ ಇಲ್ಲದೇ ಸೊರಗುತ್ತಿದೆ ನಾರಾಯಣ ಗುರು ವೃತ್ತ! ಚುನಾವಣೆಗಷ್ಟೇ ಅಸ್ತ್ರವಾಯಿತೇ?
ಮಂಗಳೂರು: ಭಾರೀ ರಾಜಕೀಯ ಹಂಗಾಮದ ಬಳಿಕ 2 ವರ್ಷಗಳ ಹಿಂದೆ ಬಿಜೆಪಿ ನೇತೃತ್ವದ ಮಹಾನಗರ ಪಾಲಿಕೆಯು ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನಿಟ್ಟಿತ್ತು. ಕಳೆದ ಲೋಕಸಭಾ ಚುನಾವಣೆ ವೇಳೆ ವೃತ್ತದಲ್ಲಿರುವ ನಾರಾಯಣ ಗುರುಗಳ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಲಾರ್ಪಣೆ ಮಾಡುವ ಮೂಲಕ ಕಡಲನಗರಿಯಲ್ಲಿ ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ ಅಭ್ಯರ್ಥಿಗಳ ಪರ ಪ್ರಚಾರ ರ‍್ಯಾಲಿಗೆ ಚಾಲನೆ ನೀಡಿದ್ದರು. ಅಂದು ಭಾರೀ ಝಗಮಗಿಸಿದ್ದ ನಾರಾಯಣ ಗುರುಗಳ ವೃತ್ತ ಇಂದು ಸೂಕ್ತ ನಿರ್ವಹಣೆ ಇಲ್ಲದೇ ಸೊರಗಿದೆ.
ಸ್ವಚ್ಛತೆ ಇಲ್ಲ, ನಿರ್ವಹಣೆ ಇಲ್ಲ, ಸರಿಯಾದ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ.. ಹೀಗೆ ಇಲ್ಲಗಳೇ ಎದ್ದು ಕಾಣುತ್ತಿದ್ದು, ಕತ್ತಲಾದ ಮೇಲಂತೂ ಇಲ್ಲಿರೋದು ಯಾವ ವೃತ್ತ ಎಂದು ಟಾರ್ಚ್ ಬೆಳಕಿನಲ್ಲಿ ಹುಡುಕುವ ಪರಿಸ್ಥಿತಿ ಎದುರಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇವಲ ಬಿಲ್ಲವರ ವೋಟ್ ಬ್ಯಾಂಕ್‌ಗಾಗಿ ಅಷ್ಟೇ ಈ ವೃತ್ತವನ್ನ ಹೈಲೈಟ್ ಮಾಡಲಾಯಿತೇ ಅನ್ನೋ ಪ್ರಶ್ನೆಯನ್ನು ನಾಗರಿಕರು ಕೇಳುತ್ತಿದ್ದಾರೆ.
ಬಿಲ್ಲವ
ಮುಖಂಡರ ಆಕ್ರೋಶ
ಚುನಾವಣೆ
ಬಂದಾಗ ನಾರಾಯಣ ಗುರುಗಳ ನೆನಪಾಗುತ್ತೆ. ಬಿಲ್ಲವ ಸಮಾಜದ ವೋಟ್ ಬ್ಯಾಂಕ್ ಗಾಗಿ
ಮಾಲಾರ್ಪಣೆ ಮಾಡಿದ ರೀತಿ ಇದೆ. ಮಂಗಳೂರು
ಸಂಸದರ ಡ್ರಾಮಾ ಮಾಡಿದ ರೀತಿ ಇದೆ. ಇವರಿಗೆ
ನಿರ್ವಹಣೆ ಮಾಡಲು ಸಾಧ್ಯವಾಗದೆ ಇದ್ದರೆ ನಮಗೆ ನೀಡಲಿ. ನಾವು
ಕುದ್ರೋಳಿ ದೇವಸ್ಥಾನ ಅಥವಾ ಬಿರುವೆರ್ ಕುಡ್ಲ
ಸಂಘಟನೆಯಿಂದ ನೋಡಿಕೊಳ್ಳುತ್ತೇವೆ ಎಂದು ಬಿರುವೆರ್ ಕುಡ್ಲ ಸಂಘಟನೆ ಸಂಸ್ಥಾಪಕ
ಉದಯ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಒಂದು ತಿಂಗಳ ಒಳಗಾಗಿ ನಿರ್ವಹಣೆ ಸಾಧ್ಯವಾಗದೇ
ಹೋದಲ್ಲಿ ಟ್ವಿಟ್ಟರ್ ಅಭಿಯಾನ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ನಿರ್ವಹಣೆ ಇಲ್ಲದ
ನಾರಾಯಣ ಗುರು ವೃತ್ತದ ವೀಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿಕೊಡುವುದಾಗಿ ಎಚ್ಚರಿಸಿದ್ದಾರೆ.
ಈ ವಿಚಾರ ಹಾಲಿ
ಸಂಸದ ಬ್ರಿಜೇಶ್ ಚೌಟ ಹಾಗೂ ಬಿರುವೆರ್ ಕುಡ್ಲ ನಡುವೆ ಮತ್ತೊಂದು ಮುನಿಸಿಗೆ ವೇದಿಕೆ ಒದಗಿಸಿದಂತಿದೆ.
ಬಿರುವೆರ್ ಕುಡ್ಲ ಸಂಸ್ಥಾಪಕ ಉದಯ್ ಪೂಜಾರಿ ನಳಿನ್ ಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದು,
ಇದ್ರಿಂದಾಗಿ ನಾರಾಯಣ ಗುರು ವೃತ್ತದ ವಿಚಾರವನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಹೆಚ್ಚಿದೆ.