
BJP: `ಆಕ್ಸಿಜನ್' ವ್ಯವಸ್ಥೆಯಲ್ಲಿದೆ ರಾಜ್ಯ ಕಾಂಗ್ರೆಸ್ ಸರ್ಕಾರ: ನಳಿನ್‍ಕುಮಾರ್ ಕಟೀಲ್
ಪುತ್ತೂರು: ರಾಜ್ಯದ ಕಾಂಗ್ರೆಸ್ ಆಡಳಿತ ಪ್ರಸ್ತುತ ಆಂತರಿಕ ಕಲಹದಿಂದ `ಆಕ್ಸಿಜನ್' ವ್ಯವಸ್ಥೆಯಲ್ಲಿದೆ. ಮೂಡಾ ಮತ್ತು ವಾಲ್ಮೀಕಿ ನಿಗಮದ ಹಗರಣ ಲಜ್ಜೆಗೆಟ್ಟ ಹಾಗೂ ನೀತಿಗೆಟ್ಟ ಸರ್ಕಾರದ ದೊಡ್ಡ ಸಾಧನೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ವಿಧಾನಪರಿಷತ್ ಉಪಚುನಾವಣೆಯ ಅಂಗವಾಗಿ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೇಸ್ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಜನತೆ ರೋಸಿಹೋಗಿದ್ದಾರೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಕದಡಿಹೋಗಿದೆ. ಗ್ರಾಮಮಟ್ಟದ ವಿಎ ಯಿಂದ ಹಿಡಿದು ವಿಧಾನಸಭಾ ಕಚೇರಿ ತನಕ ಲಂಚ ಇಲ್ಲದೆ ಯಾವುದೇ ಕೆಲಸ ನಡೆಯುತ್ತಿಲ್ಲ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದೆ. ಅಭಿವೃದ್ಧಿ ಶೂನ್ಯವಾಗಿದೆ. ಕೇವಲ ಮುಖ್ಯಮಂತ್ರಿ ಪದವಿಗಾಗಿ `ಸಂಗೀತ ಕುರ್ಚಿ' ನಡೆಸುವುದಷ್ಟೇ ರಾಜ್ಯದ ಆಡಳಿತದಲ್ಲಿ ಕಂಡುಬರುತ್ತಿದೆ ಎಂದು ಅವರು ಹೇಳಿದರು.
ಕಾಂಗ್ರೇಸ್ ಶೇ.80 ಸರ್ಕಾರ:
ಬೊಮ್ಮಾಯಿ ಸರ್ಕಾರವನ್ನು ಕಾಂಗ್ರೇಸ್ ಮುಖಂಡರು ಶೇ.40 ಸರ್ಕಾರ ಎಂದು ಹೇಳುತ್ತಿದ್ದರು. ಆದರೆ ಈಗಿನ ಪರಿಸ್ಥಿತಿ ಗಮನಿಸಿದರೆ ರಾಜ್ಯ ಸರ್ಕಾರವನ್ನು ಶೇ.80 ಸರ್ಕಾರ ಎಂದು ಕರೆಯಬೇಕಾಗಿದೆ. ಆ ಮಟ್ಟಿನ ಭ್ರಷ್ಟಾಚಾರ ನಡೆಯುತ್ತಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಲು ಅನುದಾನವೇ ಇಲ್ಲ. ಬೊಮ್ಮಾಯಿ ಸರ್ಕಾರ ನೀಡಿದ ಅನುದಾನದ ಕಾಮಗಾರಿ ಮಾತ್ರ ನಡೆಯುತ್ತಿದೆ ಎಂದು ಅವರು ಹೇಳಿದರು.
ರಾಷ್ಟ್ರ ವಿರೋಧಿಗಳಿಗೆ ಬೆಂಬಲ:
ಕಾಂಗ್ರೆಸ್ ರಾಷ್ಟ್ರವಿರೋಧಿಗಳ ಪರವಾಗಿ ಕೆಲಸ ಮಾಡುತ್ತಿದೆ. ಪಾಕಿಸ್ತಾನ್ ಜಿಂದಾಬಾದ್, ಜೈನಮುನಿ ಹತ್ಯೆ, ಹುಬ್ಬಳ್ಳಿ ಗಲಭೆ ಪ್ರಕರಣಗಳಲ್ಲಿ ಇದು ಸಾಬೀತಾಗಿದೆ. ಕಾಂಗ್ರೇಸ್ ನಡೆ ರಾಷ್ಟ್ರದ್ರೋಹಿಗಳಿಗೆ ವಿಶ್ವಾಸ ತುಂಬುವತ್ತ ಸಾಗುತ್ತಿದೆ. ಕಾಂಗ್ರೇಸ್ ಬೆಂಬಲಿ ಜನಪ್ರತಿನಿಧಿಗಳೂ ಸರ್ಕಾರದ ವಿರುದ್ಧ ಕೋಪ ವ್ಯಕ್ತಪಡಿಸುವ ಸ್ಥಿತಿಗೆ ಬಂದಿದ್ದಾರೆ. ಅಂತಹ ಆಡಳಿತ ಕಾಂಗ್ರೇಸ್ ನೀಡುತ್ತಿದೆ ಎಂದರು.
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಕೋಟಿಗಟ್ಟಲೆ ಅನುದಾನ ಬರುತ್ತಿದೆ ಎಂದು ಶಾಸಕರು ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದಾಗ ಹೌದು ಬರುತ್ತಿದೆ. ಈ ಅನುದಾನ ಸಂಜೀವ ಮಠಂದೂರು ಅವರ ಅವಧಿಯಲ್ಲಿ ಮಂಜೂರುಗೊಂಡ ಅನುದಾನವಾಗಿದೆ. ಅನುದಾನ ಮಂಜೂರುಗೊಂಡ ದಿನಾಂಕ ನೋಡಿ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ದಕ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್ ಮಾರ್ತಾ, ಪುತ್ತೂರು ನಗರಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರು, ನಿತೇಶ್ ಕುಮಾರ್ ಶಾಂತಿವನ, ಪ್ರೇಮಾನಂದ ಶೆಟ್ಟಿ, ದೇವದಾಸ್, ಸಂತೋಷ್ ರೈ ಕೈಕಾರ ಮತ್ತು ನಗರಸಭಾ ಅಧ್ಯಕ್ಷ ಲೀಲಾವತಿ ಅಣ್ಣುನಾಯ್ಕ ಇದ್ದರು.