.jpg)
LOVE JIHAD:`ಸಮೀರ್ ನಿಂದ ನನ್ನ ಮಗಳ ಜೀವನ ಹಾಳು'
ಪುತ್ತೂರು: ಅನ್ಯಕೋಮಿನ ಯುವಕನೋರ್ವನ ಕಿರುಕುಳಕ್ಕೆ ಬೇಸತ್ತು ಅಸಹಾಯಕ ಪೋಷಕರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಮೊರೆ ಹೋದ ಘಟನೆ ಇಂದು ನಡೆದಿದೆ. ತಿಂಗಳಿಗೊಮ್ಮೆ ಮಹಾಲಿಂಗೇಶ್ವರ ದೇವಳದ ಕಾಣಿಕೆ ಹುಂಡಿಯ ಎಣಿಕೆ ನಡೆಯುತ್ತದೆ. ಅದರಂತೆ ಇಂದು ದೇವಳದ ಸಭಾಭವನದಲ್ಲಿ ಕಾಣಿಕೆ ಹುಂಡಿಯ ಎಣಿಕೆ ನಡೆಯುತ್ತಿತ್ತು. ಈ ವೇಳೆ ಕಾಣಿಕೆ ಹುಂಡಿಯೊಂದರಲ್ಲಿ ಚೀಟಿಯೊಂದು ಕಾಣಿಸಿಕೊಂಡಿದೆ. ಅದರಲ್ಲಿ ನೊಂದ ಪೋಷಕರ ಪತ್ರವೊಂದು ಸಿಕ್ಕಿದ್ದು, `ಸಮೀರ್ ನಿಂದಾಗಿ ನನ್ನ ಮಗಳ ಜೀವನ ಹಾಳಾಗಿದೆ. ಸಮೀರ್ ಅನ್ನುವವನು ನನ್ನ ಮಗಳ ಜೀವನವನ್ನೇ ಹಾಳು ಮಾಡಿದ್ದಾನೆ. ಇವತ್ತು ನಾನು ನನ್ನ ಮಗಳು ಬೀದಿಯಲ್ಲಿ ಇದ್ದೇವೆ. ನಮ್ಮ ಜೀವನ ಹಾಳು ಮಾಡಿದ ಸಮೀರ್ ನ ಜೀವನ ಕೂಡ ಹಾಳಾಗಬೇಕು. ಸಮೀರ್ ಗೆ ಮದುವೆ ಆಗಲು ಹುಡುಗಿ ಸಿಗಬಾರದು. ಓ ದೇವರೇ ಇದು ನನ್ನ ಪ್ರಾರ್ಥನೆ ಎಂದು ಆ ಚೀಟಿಯಲ್ಲಿ ಬರೆಯಲಾಗಿದೆ. ಇನ್ನು ಈ ಘಟನೆಗೆ ಸಂಬಂಧಿಸಿ ಹಿಂದೂ ಸಂಘಟನೆಗಳು ಆ ನೊಂದ ಕುಟುಂಬದ ಬೆಂಬಲಕ್ಕೆ ನಿಂತಿದೆ.
ಈ ಘಟನೆ ಸಂಬಂಧಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಧಾರ್ಮಿಕ ಪರಿಷತ್ ನ ಮಾಜಿ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ಲವ್ ಜಿಹಾದ್ ನ ಕರಾಳ ಮುಖ ದೇವರ ಮುಂದೆ ಪ್ರತ್ಯಕ್ಷವಾಗಿ ಕಾಣಸಿಕ್ಕಿದೆ. ಅನ್ಯಕೋಮಿನ ಯುವಕನಿಂದ ಆಗಿರುವ ಕಿರುಕುಳವನ್ನ ನೊಂದ ಪೋಷಕರು ಚೀಟಿಯಲ್ಲಿ ಬರೆದು ದೇವರ ಕಾಣಿಕೆ ಹುಂಡಿಗೆ ಹಾಕಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಹಾಗಾಗಿ ವಿಶ್ವ ಹಿಂದೂ ಪರಿಷತ್ ನಿಂದ ನಮ್ಮದೊಂದು ವಿನಂತಿ ಯಾರು ಆ ಸಮೀರ್ ಅನ್ನುವನು ಇದ್ದಾನೋ, ನಿಮ್ಮ ಮಗಳಿಗೆ ಏನೆಲ್ಲ ಕಿರುಕುಳ ಕೊಟ್ಟಿದ್ದಾನೆ ಅದನ್ನ ಧೈರ್ಯವಾಗಿ ನಮ್ಮ ಸಂಘಟನೆಯವರಲ್ಲಿ ಹಂಚಿಕೊಳ್ಳಿ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ. ಮಹಿಳಾ ಠಾಣೆಗೆ ಬಂದು ನಿಮಗಾದ ಅನ್ಯಾಯವನ್ನ ಹೇಳಿಕೊಳ್ಳಿ ನಿಮಗೆ ಬೆಂಬಲವಾಗಿ ನಿಲ್ತೀವಿ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತರಾದ ಹರಿಪ್ರಸಾದ್ ನೆಲ್ಲಿಕಟ್ಟೆ ಮಾತನಾಡಿ, ಸಮೀರ್ ಎಂಬವನನ್ನ ಆದಷ್ಟು ಬೇಗ ಪತ್ತೆಹಚ್ಚಿ ಆ ನೊಂದ ಪೋಷಕರು ಮತ್ತು ಆ ಅನ್ಯಾಯಕ್ಕೊಳಗಾದ ಹೆಣ್ಣು ಮಗಳಿಗೆ ನ್ಯಾಯ ಒದಗಿಸಬೇಕಾದ ಕೆಲಸ ಪೊಲೀಸರಿಂದ ಆಗಬೇಕು. ಸಮೀರ್ ಎನ್ನುವಾತ ಯಾಕೆ ಕಿರುಕುಳ ನೀಡುತ್ತಿದ್ದ. ಇದೊಂದು ವ್ಯವಸ್ಥಿತ ಲವ್ ಜಿಹಾದ್ ನ ಷಡ್ಯಂತ್ರ ಆಗಿರಬಹುದಾ ಎಂಬ ಬಗ್ಗೆ ಪೊಲೀಸರು ತಕ್ಷಣ ತನಿಖೆ ನಡೆಸಿ ಆತನ ಪತ್ತೆ ಹಚ್ಚುವಂತ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.