Katipalla: ಕಾಟಿಪಳ್ಳ ಬದ್ರಿಯಾ ಮಸೀದಿಗೆ ಕಲ್ಲು ತೂರಿ ಹಾನಿ; ಸ್ಥಳದಲ್ಲಿ ನೂರಾರು ಜನ ಜಮಾವಣೆ!
Monday, September 16, 2024
ಮಂಗಳೂರು: ನಗರದ ಹೊರವಲಯದ ಕಾಟಿಪಳ್ಳ 3 ನೇ ಬ್ಲಾಕಿನ ಬದ್ರಿಯಾ ಮಸೀದಿಗೆ ದುಷ್ಕರ್ಮಿಗಳ ತಂಡವೊಂದು ಬೈಕ್ ನಲ್ಲಿ ಆಗಮಿಸಿ ಕಲ್ಲು ತೂರಾಟ ನಡೆಸಿದೆ. ಪರಿಣಾಮ, ಮಸೀದಿಯ ಗಾಜು ಪುಡಿಯಾಗಿದ್ದು, ಸ್ಥಳದಲ್ಲಿ ನೂರಾರು ಜನರು ಆಗಮಿಸಿದ್ದಾರೆ. ಸುರತ್ಕಲ್ ಠಾಣಾ ಪೊಲೀಸರು ಬಂದೋಬಸ್ತು ಒದಗಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಈದ್ ಮಿಲಾದ್ ಗಾಗಿ ಮಸೀದಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಇಂದು (ಸೆಪ್ಟಂಬರ್ 16) ನಡೆಯಲಿರುವ ಪ್ರವಾದಿ ಜನ್ಮ ದಿನಾಚರಣೆಗೆ ಮಸೀದಿ ಸಿದ್ಧಗೊಂಡಿತ್ತು. ಈ ನಡುವೆ ಭಾನುವಾರ ತಡರಾತ್ರಿ 10.30 ಗಂಟೆ ವೇಳೆಗೆ 2 ಬೈಕ್ ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಸುರತ್ಕಲ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.