ಈದ್ ಮಿಲಾದ್ ರ‌್ಯಾಲಿ ಸವಾಲು ಹಾಕುವ, ಸಾಮರ್ಥ್ಯ ತೋರುವ ಆಚರಣೆಯಲ್ಲ: ಎ.ಕೆ. ಕುಕ್ಕಿಲ
Monday, September 16, 2024
ಮಂಗಳೂರು: ಮಿಲಾದುನ್ನಬಿ ಹಿನ್ನೆಲೆಯಲ್ಲಿ ಕೈಗೊಳ್ಳುವ ಮೆರವಣಿಗೆಗಳು ಘೋಷಣೆಗಳು ಮತ್ತು ರ‌್ಯಾಲಿಗಳು ಇನ್ನಾರಿಗೋ ಸವಾಲು ಹಾಕುವ ಮತ್ತು ಅವರಿಗೆ ತಮ್ಮ ಸಾಮರ್ಥ್ಯವನ್ನು ತೋರಿಸುವ ಉದ್ದೇಶವನ್ನು ಹೊಂದಿರಬಾರದು, ಆದರೆ ಈಗಾಗಲೇ ಶರಣ್ ಪಂಪ್ ವೆಲ್ ಹೇಳಿಕೆ, ಅದಕ್ಕೆ ಪ್ರತಿಯಾಗಿ ಮುಸ್ಲಿಂ ಸಮುದಾಯದ ವ್ಯಕ್ತಿಯೋರ್ವರ ವಾಟ್ಸಪ್ ಚಾಲೆಂಜ್ ಮತ್ತು ಅದನ್ನು ಸ್ವೀಕರಿಸಿರುವುದಾಗಿ ಸಂಘ ಪರಿವಾರದ ವ್ಯಕ್ತಿಯೋರ್ವರ ಎಫ್ ಬಿ ಪೋಸ್ಟ್ ಗಳೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇಂಥ ಬೆಳವಣಿಗೆ ಅನಾಹುತಕಾರಿ ಎಂದು ಚಿಂತಕ, ಪತ್ರಕರ್ತ ಎ.ಕೆ. ಕುಕ್ಕಿಲ ತಿಳಿಸಿದ್ದಾರೆ.
ಸದ್ಯ ಕರಾವಳಿಯ ಬೆಳವಣಿಗೆ ಬಗ್ಗೆ ಅವರು ತನ್ನ ಜಾಲತಾಣದಲ್ಲಿ ಈ ಕುರಿತಂತೆ ಗಮನ ಸೆಳೆದಿದ್ದಾರೆ. "ಪ್ರವಾದಿ ಮಾನವ ಕುಲಕ್ಕೆ ಅನುಗ್ರಹವಾಗಿ ಬಂದವರು ಎಂಬುದಾಗಿ ಕುರ್ ಆನ್ ಹೇಳುತ್ತದೆ. ಅನುಗ್ರಹ ಎಂಬುದು ಹಿಂದೂ ಮುಸ್ಲಿಂ ಎಂಬ ಬೇಧ ಇಲ್ಲದೆ ಸರ್ವರಿಗೂ ಅನ್ವಯಿಸುವ ಪದ. ಈ ಅನುಗ್ರಹೀತ ಪ್ರವಾದಿಯನ್ನು ಒಟ್ಟು ಸಮಾಜಕ್ಕೆ ಪರಿಣಾಮಕಾರಿಯಾಗಿ ಬಿಂಬಿಸುವ ರೀತಿಯಲ್ಲಿ ನಮ್ಮ ಮಾತು, ಕೃತಿಗಳು ಇರಬೇಕೇ ಹೊರತು ಯಾರದೋ ಪ್ರಚೋದನೆಗೆ ಅದೇ ರೂಪದಲ್ಲಿ ಉತ್ತರ ಕೊಡುವ ಸಂದರ್ಭಕ್ಕಾಗಿ ಇವುಗಳ ಬಳಕೆ ಆಗಬಾರದು. ಆದ್ದರಿಂದ ರಬೀಉಲ್ ಅವ್ವಲ್ 12ರ ಯಾವುದೇ ಕಾರ್ಯಕ್ರಮವನ್ನು ಆಯೋಜಿಸುವ ಮಸೀದಿಯವರು ಈ ಬಗ್ಗೆ ಜಾಗರೂಕರಾಗಿರುವುದು ಒಳ್ಳೆಯದು. ಪ್ರವಾದಿ ಒಳಿತಿನ ಸಂಕೇತ. ಸತ್ಯ ಮತ್ತು ನ್ಯಾಯದ ಸಂಕೇತ. ಅಸಹಿಷ್ಣುತೆ ಮತ್ತು ಅನ್ಯಾಯದ ವಿರೋಧಿ. ಕೆಡುಕುಗಳನ್ನು ಅತ್ಯುತ್ತಮ ಒಳಿತಿನಿಂದ ನೀಗಿಸಿರಿ ಎಂದು ಸಾರಿದ ಮನುಷ್ಯ ಪಪ್ರೇಮಿ. ಮನುಷ್ಯರೆಲ್ಲ ಸಮಾನರು ಮತ್ತು ಒಂದೇ ತಂದೆ ತಾಯಿಯ ಮಕ್ಕಳು ಎಂದು ಹೇಳಿದ್ದಷ್ಟೇ ಅಲ್ಲ ಒಳಿತಿನ ವಿಷಯದಲ್ಲಿ ಹಿಂದೂ ಮುಸ್ಲಿಂ ಎಂಬ ಭೇದ ಇಲ್ಲದೆ ಎಲ್ಲರೊಂದಿಗೂ ಸಹಕರಿಸಿರಿ ಎಂಬ ವಿಶ್ವ ಭ್ರಾತೃತ್ವದ ತತ್ವವನ್ನು ಸಾರಿದವರು. ಅವರನ್ನು ಯಾರದ್ದೋ ಸವಾಲಿಗೆ ಪ್ರತಿ ಸವಾಲಾಗಿ ಕಟ್ಟಿಕೊಡುವುದಕ್ಕಾಗಿ ಬಳಸುವುದಕ್ಕೆ ಅವಕಾಶ ನೀಡಬಾರದು" ಎಂದಿದ್ದಾರೆ.
ಮಿಲಾದ್ ಕಾರ್ಯಕ್ರಮಗಳು ಪ್ರವಾದಿಯನ್ನು ಇನ್ನಷ್ಟು ಚೆನ್ನಾಗಿ ಸಮಾಜಕ್ಕೆ ತಿಳಿಸಿ ಕೊಡುವ ಕಾರಣಕ್ಕಾಗಿ ಸುದ್ದಿಗೀಡಾಗಲಿ. ಅದಕ್ಕೆ ಪೂರಕ ಕ್ರಮಗಳನ್ನು ಎಲ್ಲ ಮಸೀದಿಯ ಮುಖ್ಯಸ್ಥರು ಮತ್ತು ಉಸ್ತಾದರು ಕೈಗೊಳ್ಳಲಿ.