BC Road: ಬಿ.ಸಿ. ರೋಡ್ ನಲ್ಲಿ ಭಿನ್ನ ಧರ್ಮೀಯರು ಒಂದಾಗಿ; ಕೋಮುವಾದಿಗಳನ್ನು ಸೋಲಿಸಿ: ಮುನೀರ್ ಕಾಟಿಪಳ್ಳ ಆಗ್ರಹ
Sunday, September 15, 2024
ಮಂಗಳೂರು: "ಮುಸ್ಲಿಮರು ನಮ್ಮ ಗಣೇಶೋತ್ಸವ ಮೆರವಣಿಗೆಗೆ ಸಿಹಿತಿಂಡಿ ನೀಡಬೇಡಿ" ಎಂದು ಬಂಟ್ವಾಳದ ಬೋಳಂತೂರಿನಲ್ಲಿ ಮಸೀದಿ ಆಡಳಿತಕ್ಕೆ ಪತ್ರ ಬರೆಸಿದಾಗಲೆ ಏನೊ ಮಸಲತ್ತಿನ ವಾಸನೆ ಹೊಡೆದಿತ್ತು. ನಾಗಮಂಗಲದಲ್ಲಿ ಮಸೀದಿ ಮುಂಭಾಗ ನಡೆದ ಘರ್ಷಣೆಯನ್ನು ನೆಪವಾಗಿಸಿಕೊಂಡು ಈಗ ಈದ್ ಮಿಲಾದ್ ಮೆರವಣಿಗೆಯ ಸಂದರ್ಭ ಪ್ರಚೋದಿಸುವ ಕೆಲಸ ಆರಂಭಗೊಂಡಿದೆ. ಜನ ಇಂತಹ ಪ್ರಚೋದನೆಗೆ ಒಳಗಾಗಬಾರದು ಎಂದು ಸಾಮಾಜಿಕ ಹೋರಾಟಗಾರ, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಈ ಬೆಳವಣಿಗೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಮೊನ್ನೆ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ "ಈದ್ ಮಿಲಾದ್ ಮೆರವಣಿಗೆ ತಡೆಯುವ ಬೆದರಿಕೆ ಧಾಟಿಯ ಭಾಷಣ ಮಾಡಿದರೆ, ಅದಕ್ಕೆ ಪ್ರತಿಕ್ರಿಯೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಮರ ಕಡೆಯಿಂದ ಬಂದ ಖಾರವಾದ ಮಾತುಗಳನ್ನು ಮುಂದಿಟ್ಟು ಈಗ ಬಜರಂಗ ದಳದ ನಾಯಕ ಪುನೀತ್ ಅತ್ತಾವರ ಬಿ.ಸಿ. ರೋಡ್ ನ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭ ಬಜರಂಗ ದಳ ಅಲ್ಲಿಗೆ ಬರುತ್ತದೆ ಎಂದು ನೇರವಾಗಿ ಬೆದರಿಕೆ ಹಾಕಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಗಣೇಶೋತ್ಸವ ಮೆರವಣಿಗೆಗೆ ಮುಸ್ಲಿಮರು, ಈದ್ ಮಿಲಾದ್ ಮೆರವಣಿಗೆಗೆ ಹಿಂದುಗಳು ಸಿಹಿತಿಂಡಿ, ಪಾನಕ ವಿತರಿಸುವ ಮೂಲಕ ಈ ಹಬ್ಬಗಳ ಮೆರವಣಿಗೆಯ ಸಂದರ್ಭ ಉಂಟಾಗುತ್ತಿದ್ದ ಉದ್ವಿಗ್ನತೆ ಬಹುತೇಕ ನಿಂತು ಹೋಗಿತ್ತು. ಸೌಹಾರ್ದತೆಯ ಹೊಸ ಸಂದೇಶ ಅಲ್ಲಿ ಪಸರಿಸತೊಡಗಿತ್ತು. ಅದು ಕೋಮುವಾದಿ ಶಕ್ತಿಗಳಿಗೆ ತಲೆ ನೋವು ತಂದಿತ್ತು. ಅದಕ್ಕಾಗಿ ಈ ಭಾರಿ " ಸಿಹಿತಿಂಡಿ ವಿತರಣೆ" ತಡೆಯಲು ಕಸರತ್ತು ನಡೆಸಲಾಗಿದೆ. ಈಗ ಸಾಮಾಜಿಕ ಜಾಲತಾಣದಲ್ಲಿನ ಪರವಿರುದ್ದದ ಚರ್ಚೆ, ವಾಕ್ಸಮರದಿಂದ ಒಂದಿಷ್ಟು ಆತಂಕ ಎದುರಾಗಿದೆ.
ನಾಳೆ(ಸೆಪ್ಟಂಬರ್ 16) ಈದ್ ಮಿಲಾದ್ ಮೆರವಣಿಗೆ ನಡೆಯಲಿದ್ದು, ಜನತೆ ಪ್ರಚೋದನೆಗಳಿಗೆ ಕಿವಿಗೊಡಬಾರದು. ಈ ಹಿಂದೆ ನಡೆದ ಮತೀಯ ಸಂಘರ್ಷದಿಂದ ಅನಾಥವಾದ ಕುಟುಂಬಗಳು, ಜೈಲು, ಕೇಸು ಎಂದು ಕ್ರಿಮಿನಲ್ ಗಳಾಗಿ ಬೀದಿಪಾಲಾದ ಸಾವಿರಾರು ಸಂಖ್ಯೆಯ ಯುವಕರು ನಮಗೆ ಈ ಸಂದರ್ಭ ನೆನಪಾಗಬೇಕು. ಈದ್ ಮೆರವಣಿಗೆ ಸಂದರ್ಭ ಸಾಧ್ಯವಾದಲ್ಲೆಲ್ಲ ಪರಸ್ಪರ ಸಿಹಿಹಂಚಿ, ಕೈ ಕುಲುಕಿ, ಮುಗುಳ್ನಗೆ ಚೆಲ್ಲಿ. ಸಾಧ್ಯವಾದರೆ ಬಿ.ಸಿ. ರೋಡ್ ನಲ್ಲಿಯೂ ಭಿನ್ನ ಧರ್ಮದವರು ಒಂದಾಗಿ ನಿಂತು ಮೆರವಣಿಗೆಗೆ ಸಿಹಿ ತಿಂಡಿ, ಪಾನೀಯ ಹಂಚಿ. ಕೋಮುವಾದಿಗಳನ್ನು ಸೋಲಿಸಿ, ಅವರು ಬೀದಿಯಲ್ಲಿ ವಿಜೃಂಭಿಸದಂತೆ ಒಂದಾಗಿ ನಡೆಯಿರಿ.
ಪೊಲೀಸರಿಗೂ ವಿರುದ್ಧವೂ ಗುಡುಗು!
ಪೊಲೀಸರು ಇಂತಹ ಪ್ರಚೋದನಕಾರಿ ಮಾತುಗಳಿಗೆ ಮೌನವಾಗಿ ಕೂತಿದ್ದಾರೆ. ಕ್ರಿಮಿನಲ್ ಗಳು, ಗೂಂಡಾಗಳು ಧರ್ಮರಕ್ಷಕರು ಎಂಬಂತೆ ಮೆರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ನಾಳೆ ಏನಾದರು ಮೆರವಣಿಗೆಯಲ್ಲಿ ಹಿಂಸೆ ಘಟಿಸಿದರೆ ನಿರ್ದಯರಾಗಿ ಬಿಡುತ್ತಾರೆ. ಸಿಕ್ಕ ಸಿಕ್ಕವರನ್ನು ಮನೆಗೆ ನುಗ್ಗಿ ಎಳೆದೊಯ್ದು, ದೂರದ ಜೈಲಿಗೆ ಹಾಕುತ್ತಾರೆ ಹತ್ತಾರು ಕೇಸು ಹಾಕಿ ನಿಮ್ಮ ಜೀವನವನ್ನೆ ನರಕ ಮಾಡಿಬಿಡುತ್ತಾರೆ. ಆಗ ಯಾರೂ ನಿಮ್ಮ ಜೊತೆಗಿರುವುದಿಲ್ಲ. ಪ್ರಚೋದನಾಕಾರಿ ಮಾತುಗಳಿಗೆ ಬಲಿಯಾಗಬೇಡಿ. ನಾಳೆ ಈದ್ ಮೆರವಣಿಗೆಯಲ್ಲಿ ಸಿಹಿ ಹಂಚಿ, ನಗು ಬೀರಿ, ಪ್ರೀತಿ ಹರಡಿ. ಅದು ಎಲ್ಲಾ ಧರ್ಮೀಯರಿಗೂ ಒಳ್ಳೆಯದು. ನಿಮ್ಮ ಮನೆಯಲ್ಲಿ ನಿಮ್ಮನೇ ಕಾಯುತ್ತಿರುವ ಅಮ್ಮ, ಅಕ್ಕ, ತಂಗಿ, ಹೆಂಡತಿ, ಮಕ್ಕಳು ಇದ್ದಾರೆ ಎಂಬುದನ್ನು ಮರೆಯದಿರಿ. ಅವರನ್ನು ಸಂಕಷ್ಟಕ್ಕೆ ದೂಡಬೇಡಿ. ಮೀಸೆ ತಿರುವುವ, ಎದೆಯುಬ್ಬಿಸಿ ಠೇಂಕರಿಸುವ "ಧರ್ಮ ರಕ್ಷಕ" ಪೋಷಾಕಿನವರನ್ನು ಎಂದಿಗೂ ನಂಬಬೇಡಿ. ಅವರು ನಿಮ್ಮವರಲ್ಲ, ನಿಮ್ಮ ಶತ್ರುಗಳು ಅವರು. ಅವರ ಬದುಕು ಚೆನ್ನಾಗಿದೆ. ಐಷಾರಾಮಿತನದಿಂದ ಕೂಡಿದೆ. ನಿಮ್ಮ ಕುಟುಂಬ ಬೀದಿಪಾಲಾಗದಂತೆ ನೋಡಿಕೊಳ್ಳಿ. ಪ್ರೀತಿ ಹರಡಲಿ ಎಲ್ಲಡೆ ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.