-->
Puttur: ವಿದ್ಯಾರ್ಥಿನಿಗೆ ಇರಿತ ಪ್ರಕರಣ; ಬಂಧಿಸಲ್ಪಟ್ಟ ಹುಡುಗ ರಿಲೀಸ್!‌ ಹೊಸ ತಿರುವು ಪಡೆದ ಕೇಸ್!

Puttur: ವಿದ್ಯಾರ್ಥಿನಿಗೆ ಇರಿತ ಪ್ರಕರಣ; ಬಂಧಿಸಲ್ಪಟ್ಟ ಹುಡುಗ ರಿಲೀಸ್!‌ ಹೊಸ ತಿರುವು ಪಡೆದ ಕೇಸ್!

 


ಪುತ್ತೂರು: ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದ್ದ ವಿದ್ಯಾರ್ಥಿನಿಗೆ ಚೂರಿ ಇರಿತ ಪ್ರಕರಣ ಸಂಬಂಧ ಬಂಧಿತನಾಗಿದ್ದ ಅಪ್ರಾಪ್ತ ಬಾಲಕನನ್ನು ಪುತ್ತೂರು ನಗರ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸೂಕ್ತ ಸಾಕ್ಷಾಧ್ಯಾರ ಸಿಗದಿರುವುದರಿಂದ ಹಾಗೂ ಅಪ್ರಾಪ್ತ ಎಂಬ ನೆಲೆಯಲ್ಲಿ ಬಿಡುಗಡೆಗೊಳಿಸಿದ್ದಾರೆ. ಘಟನೆಯ ಸತ್ಯಾಸತ್ಯತೆ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ.

ಘಟನೆ ಏನು?
ಪುತ್ತೂರು ತಾಲೂಕಿನ ಕೊಂಬೆಟ್ಟು ಸರ್ಕಾರಿ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿ ತಾನು ಕಾಲೇಜಿಗೆ ಹೋಗುತ್ತಿರುವ ವೇಳೆ ತನಗೆ ಅದೇ ಕಾಲೇಜಿನ ಬೇರೊಂದು ತರಗತಿಯ ವಿದ್ಯಾರ್ಥಿ ಚೂರಿಯಿಂದ ಇರಿದಿದ್ದಾಗಿ ಹೇಳಿದ್ದಳು. ಇದರಂತೆ ಆಕೆ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ದೂರು ದಾಖಲಿಸಿದ್ದಳು. ಅದರಂತೆ ಚೂರಿ ಇರಿದಿದ್ದಾನೆ ಎನ್ನಲಾದ ಹುಡುಗನ ಮೇಲೆ ದೂರು ದಾಖಲಾಗಿತ್ತು. ಇದಾದ ಮೇಲೆ ಈ ಪ್ರಕರಣ ಭಿನ್ನ ಕೋಮಿಗೆ ಸೇರಿದ್ದರಿಂದ ಹೊಸ ಟ್ವಿಸ್ಟ್‌ ಪಡೆದುಕೊಂಡಿತ್ತು.

ಆಸ್ಪತ್ರೆ ಮುಂದೆ ಜಮಾವಣೆ!
ಘಟನೆ ಬಗ್ಗೆ ಸುದ್ದಿ ಹರಡುತ್ತಲೇ ಮುಸ್ಲಿಂ ಮುಖಂಡರು ಹಾಗೂ ಕೆಲವೊಂದು ರಾಜಕೀಯ ಮತ್ತು ವಿದ್ಯಾರ್ಥಿ ಸಂಘಟನೆಗಳು ಆಸ್ಪತ್ರೆ ಮುಂಭಾಗ ಜಮಾಯಿಸಿದ್ದರು. ಇದರಿಂದಾಗಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಎಸ್‌ಡಿಪಿಐ, ಎನ್‌ಎಸ್‌ಯುಐ ಹಾಗೂ ಇನ್ನಿತರ ಮುಸ್ಲಿಂ ಸಂಘಟನೆಗಳ ಮುಖಂಡರು ಆಗಮಿಸಿದ್ದರಿಂದ ಪ್ರಕರಣ ಭಾರೀ ತಲ್ಲಣ ಸೃಷ್ಟಿಸಿತ್ತು. ಆರೋಪಿ ವಿದ್ಯಾರ್ಥಿಯ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಲಾಗಿತ್ತು. ಜೊತೆಗೆ, ಗಾಜು ತಾಗಿದ್ದಾಗಿ ಹೇಳುವಂತೆ ಒತ್ತಡ ಹೇರಿದ್ದಾಗಿ ಉಪನ್ಯಾಸಕರ ಮೇಲೂ ಭಾರೀ ಆಕ್ರೋಶ ವ್ಯಕ್ತವಾಗಿತ್ತು. 

ಹಿಂದೂ ಸಂಘಟನೆ ಜಮಾವಣೆ, ವಿದ್ಯಾರ್ಥಿ ಬಿಡುಗಡೆ!
ಇನ್ನು ಪ್ರಕರಣ ಸಂಬಂಧ ಪುತ್ತೂರು ನಗರ ಠಾಣೆ ಪೊಲೀಸರಿಂದ ಬಂಧಿತನಾಗಿದ್ದ ವಿದ್ಯಾರ್ಥಿಯನ್ನು ಬಿಡುಗಡೆಗೊಳಿಸಿದ್ದಾರೆ. ಸಂಜೆಯಾಗುತ್ತಲೇ ಬಿಜೆಪಿ ಮುಖಂಡ, ಪುತ್ತಿಲ ಪರಿವಾರದ ಅರುಣ್‌ ಕುಮಾರ್‌ ಪುತ್ತಿಲ ಠಾಣೆಗೆ ಆಗಮಿಸಿದ್ದು, ಸ್ಥಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಕೂಡಾ ಜಮಾಯಿಸಿದ್ದಾರೆ. ಮೇಲ್ನೋಟಕ್ಕೆ ತನಿಖೆಯಲ್ಲಿ ಯಾವುದೇ ಸ್ಪಷ್ಟತೆ ಕಾಣದಿರುವುದರಿಂದ ವಿದ್ಯಾರ್ಥಿಯನ್ನು ಪೊಲೀಸರು ಬಿಡುಗಡೆ ಮಾಡಿ ಕಳಿಸಿರುವುದಾಗಿ ತಿಳಿದು ಬಂದಿದೆ. ಇತ್ತ ಘಟನೆ ಸಂಬಂಧ ಪರ, ವಿರೋಧದ ಚರ್ಚೆಗಳು ಪುತ್ತೂರಿನಲ್ಲಿ ಜೋರಾಗಿದೆ. ಘಟನೆ ಸಂಬಂಧ ಪೊಲೀಸರು ಸಮರ್ಪಕವಾಗಿ ತನಿಖೆ ನಡೆಸಿದ್ದಲ್ಲಿ ಸತ್ಯಾಸತ್ಯತೆ ಹೊರಗೆ ಬರಲಿದೆ.

Ads on article

Advertise in articles 1

advertising articles 2

Advertise under the article