MANGALORE: ಬಿಜೈಯಿಂದ ಉಡುಪಿಗೆ ಇನ್ಸ್ಟಾ ಲವ್!!
ಮಂಗಳೂರು: ಬಿಜೈಯ ತನ್ನ ಮನೆಯಿಂದ ಕಳೆದ ಜುಲೈ 30ರಂದು ನಾಪತ್ತೆಯಾಗಿದ್ದ ಯುವತಿ ಕೊನೆಗೂ ಉಡುಪಿಯಲ್ಲಿ ಪತ್ತೆಯಾಗಿದ್ದಾಳೆ.
18 ವರ್ಷದ ಯುವತಿಯೊಬ್ಬಳು ಮನೆಯಲ್ಲಿ ಯಾರಿಗೂ ಹೇಳದೆ ನಾಪತ್ತೆಯಾಗಿದ್ದಳು. ಬಳಿಕ ಈ ಬಗ್ಗೆ ಮನೆಯವರು ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ತನಿಖೆ ಕೈಗೆತ್ತಿಕೊಂಡ ಬರ್ಕೆ ಠಾಣಾ ಪೊಲೀಸರ ತಂಡ ಸಿಸಿಟಿವಿ ದೃಶ್ಯ ಗಮನಿಸಿ ಮತ್ತು ಹುಡುಗಿಯ ಚಲನವಲನ ಸೋಶಿಯಲ್ ಮೀಡಿಯಾದಲ್ಲಿ ಯಾವ ರೀತಿ ಬಳಕೆಯಲ್ಲಿತ್ತು ಎಂಬುದನ್ನೆಲ್ಲ ಪತ್ತೆಹಚ್ಚಿದ್ದಾರೆ. ಇದಾದ ಬಳಿಕ ಮೋಜೋ ಆಪ್ ಮತ್ತು ಇನ್ಸ್ಟಾಗ್ರಾಂ ಅಕೌಂಟ್ ಗಳನ್ನ ಪರಿಶೀಲಿಸಿದಾಗ ಇದರಲ್ಲಿ ಸುಮಾರು 3000 ಇನ್ಸ್ಟಾಗ್ರಾಂ ಫಾಲೋವರ್ಸ್ ಇರುವುದು ಕಂಡುಬಂದಿದೆ.
ಅದರಂತೆ ಇನ್ಸ್ಟಾಗ್ರಾಂನಲ್ಲಿ ಹುಡುಗಿಯ ಜೊತೆ ಅತಿಯಾದ ಸಂಪರ್ಕ ಹೊಂದಿದವರು ಯಾರಿದ್ದಾರೆ ಎಂಬುದನ್ನೆಲ್ಲ ಪತ್ತೆಹಚ್ಚಿದಾಗ, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಗಜೇಂದ್ರಬೈಲ್ ಗ್ರಾಮದ ಯುವಕ ಸೂರಜ್ ಪೂಜಾರಿ(23) ಎಂಬಾತನ ಜೊತೆ ಹೆಚ್ಚಿನ ಸಂಪರ್ಕವಿರುವುದು ತಿಳಿದುಬಂದಿದೆ. ಬಳಿಕ ಆತನ ಮನೆಯಲ್ಲಿಯೇ ಹುಡುಗಿ ಇರುವುದು ಬೆಳಕಿಗೆ ಬಂದಿದೆ. ತದನಂತರ ಇಬ್ಬರನ್ನೂ ಬರ್ಕೆ ಠಾಣೆಗೆ ಕರೆತರಲಾಗಿದೆ. ವಿಚಾರಣೆ ವೇಳೆ ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ವಿಚಾರಣೆ ಸಂದರ್ಭದಲ್ಲಿ ಹುಡುಗಿ ಮಾನಸಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥಳಿಲ್ಲದೆ ಇರುವುದು ಕಂಡುಬಂದಿದೆ. ಅಲ್ಲದೆ ತಂದೆ-ತಾಯಿ ಜೊತೆ ಹೋಗುವುದಿಲ್ಲ ಎಂಬ ಕಾರಣಕ್ಕೆ ಹುಡುಗಿಯನ್ನ ಸದ್ಯ ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.