ಗಣೇಶೋತ್ಸವ, ಕೃಷ್ಣಾಷ್ಟಮಿಗೆ ಶಾಕ್ ಕೊಟ್ಟ ಸರ್ಕಾರ!!
ಮಂಗಳೂರು: ಕರಾವಳಿಯ ಶಾಲಾ ಮೈದಾನಗಳಲ್ಲಿ ಗಣೇಶೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆಗೆ ಈ ಬಾರಿ ಬ್ರೇಕ್ ಬೀಳುವ ಸಾಧ್ಯತೆ ಹೆಚ್ಚಿದೆ. ಹೌದು ದ.ಕ. ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಹೊರಡಿಸಿರುವಂತ ಸುತ್ತೋಲೆಯೊಂದು ಇದೀಗ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಮೂಲಕ ಶಿಕ್ಷಣ ಇಲಾಖೆಯ ಸುತ್ತೋಲೆ ಮಂಗಳೂರಿನಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ.
ಸುತ್ತೋಲೆಯಲ್ಲಿ ಶಾಲೆಗಳನ್ನ ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸದಂತೆ ಹೇಳಲಾಗಿದೆ. ಈ ಮೂಲಕ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಖಡಕ್ ಸಂದೇಶವನ್ನ ಸುತ್ತೋಲೆಯ ಮೂಲಕ ಹೊರಡಿಸಲಾಗಿದೆ. ಹಲವು ವರ್ಷಗಳಿಂದ ಕರಾವಳಿ ಭಾಗದ ಸರ್ಕಾರಿ ಶಾಲಾ ಮೈದಾನಗಳಲ್ಲಿ ಗಣೇಶೋತ್ಸವ ಆಚರಣೆ ನಡೆಯುತ್ತಾ ಬಂದಿದೆ. ಸರ್ಕಾರಿ, ಅನುದಾನಿತ ಶಾಲೆಗಳ ಮೈದಾನ ಬಳಸಿ ಗಣೇಶೋತ್ಸವ ಆಚರಣೆ ನಡೆಯುತ್ತಿತ್ತು. ಆದ್ರೆ ಈ ಬಾರಿ ಶಿಕ್ಷಣ ಇಲಾಖೆ ಹೊಸ ಆದೇಶದಿಂದಾಗಿ ಗಣೇಶೋತ್ಸವ, ಶ್ರೀಕೃಷ್ಣ ಜನ್ಮಾಷ್ಠಮಿಯಂತಹ ಕಾರ್ಯಕ್ರಮಗಳಿಗೆ ಬ್ರೇಕ್ ಬೀಳಲಿದೆ.
ಶಿಕ್ಷಣ ಇಲಾಖೆಯ ಆದೇಶದ ಬೆನ್ನಲ್ಲೇ ಗಣೇಶೋತ್ಸವ, ಅಷ್ಟಮಿ ಆಚರಣೆಗೆ ಅನುಮತಿ ನೀಡಲು ಶಾಲಾಡಳಿತ ಮಂಡಳಿ ನಿರಾಕರಿಸಿದೆ. ಆದ್ರೆ ಹಲವು ಗ್ರಾಮದ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ನಡೆಸಿಕೊಂಡು ಬರುತ್ತಿದ್ದ ಗಣೇಶೋತ್ಸವ, ಅಷ್ಟಮಿ ಆಚರಣೆಗೆ ಈ ಬಾರಿ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ಶಿಕ್ಷಣ ಇಲಾಖೆಯ ಈ ಆದೇಶದ ವಿರುದ್ಧ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಅಪಸ್ವರ ಎತ್ತಿವೆ.