ಗಾಯಕ ಡಿಜೆ ಸಿರಾಜ್ ಮೇಲೂ ಹಲ್ಲೆ ನಡೆಸಿದ್ದ ಆಪತ್ಬಾಂಧವ ಆಸಿಫ್!!
ಉಡುಪಿ: ತನ್ನ ಸ್ವಂತ ಮಗಳ ವೀಡಿಯೋವನ್ನ ಅಶ್ಲೀಲವಾಗಿ ವೈರಲ್ ಮಾಡಿರುವ ಹಾಗೂ ಪತ್ನಿಗೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಆಸಿಫ್ ಆಪತ್ಬಾಂಧವನ ಇನ್ನೊಂದು ಕ್ರೂರತನದ ಮುಖ ಬಯಲಾಗಿದೆ. ಗಾಯಕ ಹಾಗೂ ಆಸಿಫ್ ಜೊತೆಗೆ ಆಂಬುಲೆನ್ಸ್ ಚಾಲಕನಾಗಿದ್ದ ಡಿಜೆ ಸಿರಾಜ್ ಮೇಲೆ ಹಲ್ಲೆ ನಡೆಸಿರುವ ವೀಡಿಯೋವೊಂದು ವೈರಲ್ ಆಗಿದೆ.
ಮಾಹಿತಿ ಪ್ರಕಾರ, ಇದು 2 ವರ್ಷಗಳ ಹಿಂದಿನ ವೀಡಿಯೋ ಆಗಿದ್ದು, ಇದೀಗ ಆಸಿಫ್ ತನ್ನ ಕುಕೃತ್ಯದಿಂದ ತಪ್ಪಿಸಿಕೊಳ್ಳಲು ಪತ್ನಿ ಮಾನ ಹರಾಜಿಗೆ ಮುಂದಾಗಿದ್ದಾನೆ. ಡಿಜೆ ಸಿರಾಜ್ ಅವರಿಗೆ ಆಸಿಫ್ ತನ್ನ ಸ್ವಂತ ಪತ್ನಿಯ ಜೊತೆಗೆ ಸೋಪಾದ ಮೇಲೆ ಕೂರಿಸಿ ಹಲ್ಲೆ ನಡೆಸಿದ್ದಾನೆ. ವೀಡಿಯೋದಲ್ಲಿ ದಾಖಲಾದ ಮಾಹಿತಿ ಪ್ರಕಾರ, ಬ್ಯಾರಿ ಭಾಷೆಯಲ್ಲಿ ಸಂಭಾಷಣೆಯಿದ್ದು ಹಣಕಾಸಿನ ವಿಚಾರಕ್ಕೆ ಹಲ್ಲೆ ನಡೆಸಿರುವುದು ಸ್ಪಷ್ಟವಾಗಿದೆ. ಆದರೆ ಆಸಿಫ್ ಅದರಲ್ಲೂ ತನ್ನ ಪತ್ನಿಗೆ ಅನೈತಿಕ ಸಂಬಂಧ ಇತ್ತು ಅನ್ನೋದನ್ನ ಬಿಂಬಿಸಲು ಮುಂದಾಗಿದ್ದಾನೆ ಎಂದು ತಿಳಿದು ಬಂದಿದೆ.
ಡಿಜೆ ಸಿರಾಜ್ ಮೇಲೆ ಬೆಲ್ಟ್, ಕೈಯಿಂದ ಹಲ್ಲೆ ನಡೆಸಲಾಗಿದ್ದು, ರಕ್ತ ಚಿಮ್ಮಿ ಬರುತ್ತಿದ್ದರೂ ಮೃಗದಂತೆ ಆಸಿಫ್ ತೀವ್ರವಾಗಿ ಹಲ್ಲೆ ನಡೆಸಿ ದುಷ್ಕೃತ್ಯ ಮೆರೆದಿದ್ದಾನೆ. ಇದಾದ ಬಳಿಕ ಸಿರಾಜ್ ಆತನಿಂದ ದೂರವಾಗಿದ್ದ ಎನ್ನಲಾಗಿದೆ.
ಡಿಜೆ ಸಿರಾಜ್ ಹೇಳಿಕೆ ಏನು?
ಇನ್ನು ವೀಡಿಯೋ ವೈರಲ್ ಆಗುತ್ತಲೇ ಡಿಜೆ ಸಿರಾಜ್ ಈ ಕುರಿತು ಸ್ಪಷ್ಟನೆ ನೀಡಿದ್ದು, ತಾನು ಎರಡು ತಿಂಗಳ ಕಾಲ ಆಸಿಫ್ ಜೊತೆಗೆ ಆಂಬುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡಿದ್ದೆ. ಸಂಬಳ ಕೊಟ್ಟಿರಲಿಲ್ಲ ಇದನ್ನ ಆಸಿಫ್ ಅವರ ಪತ್ನಿ ಜೊತೆಗೆ ಪ್ರಸ್ತಾಪಿಸಿದ್ದೆ. ಅಷ್ಟೇ ಅಲ್ಲದೇ 5 ಸಾವಿರ ರೂಪಾಯಿ ನನ್ನ ಮಗುವಿನ ಬರ್ತ್‌ಡೇ ಇರುವುದರಿಂದ ಸಾಲ ಕೇಳಿದ್ದೆ. ಇದನ್ನೇ ನೆಪವಾಗಿಸಿ ಆತನ ಪತ್ನಿ ಜೊತೆಗೆ ಕೂರಿಸಿ ನನಗೂ, ಆತನ ಪತ್ನಿಗೂ ಆಸಿಫ್ ಹಲ್ಲೆ ನಡೆಸಿದ್ದ. ಬೇಡಿಕೊಂಡರೂ ಕೇಳಿರಲಿಲ್ಲ. ಆವತ್ತು ಆಸಿಫ್ ಸರಿಯಿಲ್ಲ ಎಂದಾಗ ಈ ಸಮಾಜ ನಂಬಿರಲಿಲ್ಲ ಎಂದು ಹೇಳಿದ್ದಾರೆ.
ಪಡುಬಿದ್ರಿ ಪೊಲೀಸರೇ ಮೀನಮೇಷ ಯಾಕೆ?
ಇನ್ನು ಪ್ರಕರಣ ದಾಖಲಾಗಿ 4 ದಿನಗಳಾದರೂ ಆಸಿಫ್ ಬಂಧನವಾಗಿಲ್ಲ. ಜೊತೆಗೆ ಆಸಿಫ್ ಪತ್ನಿ ಶಬನಮ್, ತನ್ನ 6 ವರ್ಷದ ಮಗನನ್ನು ಪತಿ ಕರೆದೊಯ್ದಿದ್ದು ವಾಪಸ್ ಹಿಂದಿರುಗಿಸುವಂತೆ ಕೇಳಿಕೊಂಡಿದ್ದಾರೆ. ಒಂದನೇ ತರಗತಿಗೆ ಸೇರ್ಪಡೆಗೊಂಡಿದ್ದ ಮಗುವನ್ನ ಆಸಿಫ್ ತನ್ನ ದಾಳವಾಗಿ ಬಳಸಿಕೊಳ್ಳುತ್ತಿರುವುದಕ್ಕೆ ಹಾಗೂ ಪಡುಬಿದ್ರಿ ಪೊಲೀಸರ ಅಸಡ್ಡೆ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.