ದಕ್ಷ ಅಧಿಕಾರಿಗೆ ವರ್ಗಾವಣೆ ಶಿಕ್ಷೆ !!
ಉಡುಪಿ: ದಕ್ಷ ಅಧಿಕಾರಿಯಾಗಿರುವ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್. ಅವರಿಗೆ ದಿಢೀರ್ ವರ್ಗಾವಣೆ ಶಿಕ್ಷೆ ಎದುರಾಗಿದೆ. ಈ ವರ್ಗಾವಣೆ ಶಿಕ್ಷೆಯ ಹಿಂದೆ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಗೋಪಾಲ ಪೂಜಾರಿ ಒತ್ತಡ ಇದೆ ಎಂದು ಹೇಳಲಾಗಿದೆ.
ಹೌದು ಗೋಪಾಲ ಪೂಜಾರಿ ಆಪ್ತನ ಜಾಗದ ತಕರಾರಿಗೆ ಸಂಬಂಧಪಟ್ಟಂತೆ ಅವರಿಗೆ ಸಹಕರಿಸದಿದ್ದಕ್ಕೆ ರಶ್ಮಿ ಅವರಿಗೆ ಈ ವರ್ಗಾವಣೆ ಶಿಕ್ಷೆಯನ್ನ ನೀಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಗೋಪಾಲ ಪೂಜಾರಿ ಆಪ್ತನ ಜಾಗದ ತಕರಾರನ್ನ ವಿಲೇವಾರಿ ಮಾಡುವಂತೆ ಕಾನೂನು ಮೀರಿ ರಶ್ಮಿ ಅವರಿಗೆ ಒತ್ತಡ ಹೇರಲಾಗಿತ್ತು. ಇದಕ್ಕೆ ಒಪ್ಪದ ಸಹಾಯಕ ಆಯುಕ್ತೆ ರಶ್ಮಿ ಕಾನೂನು ವ್ಯಾಪ್ತಿಯಲ್ಲೇ ಕೆಲಸ ಮಾಡಿಕೊಡುವುದಾಗಿ ಹೇಳಿದ್ದರು. ಇದರಿಂದಾಗಿ ಕಾಂಗ್ರೆಸ್ ಮುಖಂಡ ಗೋಪಾಲ ಪೂಜಾರಿಗೆ ಭಾರೀ ಹಿನ್ನೆಡೆಯಾಗಿತ್ತು. ಜೊತೆಗೆ ರಶ್ಮಿ ಅವರ ದಿಟ್ಟ ನಿರ್ಧಾರ ಮತ್ತು ದಕ್ಷತೆಗೆ ಕುಂದಾಪುರದ ಜನತೆ ಶಹಭ್ಬಾಸ್ ಎಂದು ಹಾಡಿ ಹೊಗಲಿದ್ದರು. ಅಧಿಕಾರಿ ಎಂದರೆ ಪ್ರಾಮಾಣಿಕವಾಗಿ ರಶ್ಮಿ ಅವರಂತೆ ಇರಬೇಕು ಎಂದು ಸಾರ್ವಜನಿಕರಿಂದಲೂ ಉತ್ತಮ ಪ್ರಶಂಸೆ ಬಂದಿತ್ತು. ಬಡವರಿಗೊಂದು ಕಾನೂನು ಶ್ರೀಮಂತರಿಗೊಂದು ಇರುವ ಕಾನೂನು ಇಲ್ಲ ಎಂಬ ದಿಟ್ಟತನವನ್ನ ನೇರವಾಗಿ ಗೋಪಾಲ ಪೂಜಾರಿಗೆ ತೋರಿಸಿಕೊಟ್ಟಿದ್ದರು.
ಇದಾದ ಕೆಲವೇ ದಿನಕ್ಕೆ ರಶ್ಮಿ ಅವರನ್ನ ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವರ್ಗಾವಣೆಗೊಳಿಸಿದ್ದಾರೆ. ತನ್ನ ಉತ್ತಮ ಸೇವೆ ಮೂಲಕ ಹೆಸರು ಪಡೆದಿದ್ದ ರಶ್ಮಿ ಎಸ್.ಆರ್. ಅವರ ದಿಢೀರ್ ವರ್ಗಾವಣೆಗೆ ಇದೀಗ ಕುಂದಾಪುರ ಜನತೆ ಆಕ್ರೋಶಗೊಂಡಿದ್ದಾರೆ.
