-->
ಏನಿದು ಪುತ್ತೂರಿನ ಸಿಟಿ ಒಳಗಿನ ರಸ್ತೆಯ ಅವ್ಯವಸ್ಥೆ??

ಏನಿದು ಪುತ್ತೂರಿನ ಸಿಟಿ ಒಳಗಿನ ರಸ್ತೆಯ ಅವ್ಯವಸ್ಥೆ??


ವರದಿ: ಮೇಘಾ ಪಾಲೆತ್ತಾಡಿ

ಪುತ್ತೂರು: ನಗರದ ರಸ್ತೆಗಳಿಗೆ ಅರ್ಧಂಬರ್ಧ ಕಾಮಗಾರಿ ನಡೆಸುವ ಮೂಲಕ ಟೀಕೆಗೆ ಒಳಗಾಗಿರುವ ನಗರಸಭೆಯ ಈ ಕಾಮಗಾರಿ ವಾಹನ ಚಾಲಕರಿಗೆ ಒಳ್ಳೆಯದನ್ನೂ ಮಾಡಿದೆ ಅಂದರೆ ನಂಬುತ್ತೀರಾ..! ನಿಜ ಹೇಳಬೇಕೆಂದರೆ ಈ ಅರ್ಧಂಬರ್ಧ ಕಾಮಗಾರಿ ಮಳೆಗಾಲದ ಈ ದಿನಗಳಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕುವ `ರೋಡ್‌ಹಂಪ್' ತರಹ ಕೆಲಸ ಮಾಡುತ್ತಿದೆ. ಮಳೆಗಾಲದ ಸಂದರ್ಭ ಜಾರು ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಅಪಾಯ ಉಂಟಾಗುತ್ತದೆ. ಆದರೆ ಈ ರಸ್ತೆಯಲ್ಲಿನ ಜಲ್ಲಿ ದ್ವಿಚಕ್ರ ವಾಹನ ಸವಾರರನ್ನು ರಕ್ಷಣೆ ಮಾಡುತ್ತಿದೆ. 

ಪುತ್ತೂರು ನಗರಸಭೆ ನಗರದ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ರಸ್ತೆಗೆ ನಗರೋತ್ಥಾನ ಯೋಜನೆಯಡಿಯಲ್ಲಿ ಡಾಮರೀಕರಣ ಕಾಮಗಾರಿ ನಡೆಸಿದೆ. ಆದರೆ ಈ ಕಾಮಗಾರಿ ಆರಂಭಿಸಿರುವುದು ಇನ್ನೇನು ಮಳೆಗಾಲ ಆರಂಭ ಎನ್ನುವುದಕ್ಕೆ ಮೊದಲಿನ ದಿನಗಳಲ್ಲಿ. ಪರ್ಲಡ್ಕದಿಂದ ಕಲ್ಲಿಮಾರ್, ಚೇತನಾ ಹಾಸ್ಪಿಟಲ್ ಮೂಲಕ ನಗರಸಭೆಯ ಕಚೇರಿ ಹತ್ತಿರದಿಂದಲೇ ಸಾಗಿ ಮುಖ್ಯ ರಸ್ತೆಯನ್ನು ಸೇರುವ ಈ ರಸ್ತೆಯ ಕಾಮಗಾರಿಯೇ ಜನತೆಯ ಆಕ್ಷೇಪಕ್ಕೆ ಕಾರಣವಾಗಿರುವುದು. 

ಮಳೆಗಾಲದಲ್ಲಿ ಆರಂಭಿಸಿದ ಈ ಕಾಮಗಾರಿ ಆರ್ಥಿಕವಾದ ನಷ್ಟದ ವಿಚಾರದಲ್ಲಿ ಜನತೆಯ ಆಕ್ಷೇಪ ಸರಿ. ಈ ಕಾಮಗಾರಿ ಪೂರ್ತಿಯಾಗುತ್ತಿದ್ದರೆ ರಸ್ತೆ ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತಿತ್ತು. ಆದರೆ ಇದೀಗ ಮಳೆಯ ಕಾರಣ ಅರ್ಧಕ್ಕೆ ನಿಂತಿರುವ ಕಾಮಗಾರಿ ಇಲಾಖೆಗೆ ನಷ್ಟ ಉಂಟು ಮಾಡಿದೆ. ರಸ್ತೆಗೆ ಹಾಕಿರುವ ಡಾಮಾರು ಮತ್ತು ಜಲ್ಲಿ ಅನಾವಶ್ಯಕವಾದಂತಾಗಿದೆ. ನಗರೋತ್ಥಾನದಲ್ಲಿ ಮಂಜೂರುಗೊಂಡ ಅನುದಾನದ ಕಾಮಗಾರಿಯನ್ನು ಬೇಸಿಗೆ ಕಾಲದಲ್ಲಿಯೇ ಮಾಡಬಹುದಿತ್ತು. ಈಗ ಡಾಮಾರು ಹಾಕಿದ ಎರಡೇ ವಾರದಲ್ಲಿ ಕಿತ್ತುಕೊಂಡು ಹೋಗುತ್ತಿದೆ. ಅಧಿಕಾರಿಗಳ ಅಸಮರ್ಪಕ ಕೆಲಸ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಭ್ರಷ್ಟಾಚಾರ ನಡೆದಿರುವ ಸಾಧ್ಯತೆಯ ಬಗ್ಗೆಯೂ ಆರೋಪ ಮಾಡಿದ್ದರು. 

ಆದರೆ ನಗರಸಭೆ ವಾಹನ ಸವಾರರ ಹಿತದೃಷ್ಠಿಯಿಂದ ಈ ರೀತಿ ಅರ್ಧಂಬರ್ಧ ಕಾರ್ಯಕ್ರಮ ಮಾಡಿದೆ ಎಂದು ಅನ್ನಿಸುತ್ತಿದೆ.  ಈ ಭಾಗದ ರಸ್ತೆ ಹೆಚ್ಚು ಜನರ ಓಡಾಟದ ತಾಣವಾಗಿದೆ. ಕಿಲ್ಲೆ ಮೈದಾನ , ಮಿನಿವಿಧಾನ ಸೌಧ, ಕೋರ್ಟ್, ವಿವಿಧ ತಾಲೂಕು ಮಟ್ಟದ ಕಚೇರಿಗಳು, ತಾಲೂಕು ಆಸ್ಪತ್ರೆ ಹೀಗೆ ಎಲ್ಲವನ್ನೂ ಈ ರಸ್ತೆ ಬಳಕೆ ಮಾಡಿಯೇ ಹೋಗಬೇಕಾಗಿದ್ದು, ಮಳೆಗಾಲದಲ್ಲಿ ಯಾವುದೇ ಅಪಾಯ ಉಂಟಾಗಬಾರದು ಎಂಬ ದೃಷ್ಟಿಕೋನ ನಗರಸಭೆಯ ಅಧಿಕಾರಿಗಳಾಗಿತ್ತೋ ಏನೋ.. ಹಾಗಾಗಿ ಹಳೆಯ ರಸ್ತೆಗೆ ಡಾಮಾರು ಮತ್ತು ಜಲ್ಲಿ ಎರಚಿ ಬಿಟ್ಟಿದ್ದಾರೆ. ಈ ರಸ್ತೆ ಪಾಚಿ ಹಿಡಿದರೂ ಜಾರುವ ಹಾಗಿಲ್ಲ. ಡಾಮಾರಿನಿಂದಲೇ ಹಂಪ್ ನಿರ್ಮಿಸಿರುವುದರಿಂದ ವಾಹನಗಳ ವೇಗಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದೆ. ಪುತ್ತೂರಿನ ಈ ಕಾಮಗಾರಿಯ ಬಗ್ಗೆ ಈ ರೀತಿಯೂ ಯೋಚನೆ ಮಾಡಬಹುದು ಎಂಬುವುದು ಜನರಿಗೆ ಅರ್ಥವಾಗುತ್ತಿಲ್ಲ ಎಂಬ ನೋವು ಬಹುಷ; ಅಧಿಕಾರಿಗಳಿಗೆ ಇರಬಹುದೋ ಏನೋ....! 

ಒಟ್ಟಿನಲ್ಲಿ ಆರ್ಥಿಕವಾಗಿ ನಷ್ಟವಾಗಿದ್ದರೂ , ಮಳೆಗಾಲದಿಂದ ಕಾಮಗಾರಿ ಅರ್ಧದಲ್ಲಿಯೇ ನಿಲ್ಲಿಸಲಾಗಿದ್ದರೂ, ಈ ತರಾತುರಿಯ ಅರ್ಧಂಬರ್ಧ ಕಾಮಗಾರಿ ವಾಹನ ಸವಾರರ ಪಾಲಿಗೆ ಲಾಭದಾಯಕ ಎನ್ನುವುದು ವಾಹನ ಸವಾರರದ್ದೇ ಮಾತು. 


Ads on article

Advertise in articles 1

advertising articles 2

Advertise under the article