ಸುಳ್ಯ| ಬಿರುಸಿನ ಪ್ರಚಾರದಲ್ಲಿ ಆಮ್ ಆದ್ಮಿ; ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು!?
Wednesday, May 3, 2023
ಸುಳ್ಯ: ಹೊಸಮುಖಗಳ ಸ್ಪರ್ಧೆಗೆ ವೇದಿಕೆಯಾಗಿರುವ ಮೀಸಲು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಬಿರುಸಿನ ಪ್ರಚಾರದ ಮೂಲಕ ಮತದಾರರ ಒಲವು ಗಳಿಸುವಲ್ಲಿ ಯಶಸ್ವಿಯಾಗುತ್ತಿದೆ. ಕಾಂಗ್ರೆಸ್, ಬಿಜೆಪಿಯಿಂದ ಹೊಸ ಮುಖಗಳೇ ಸ್ಪರ್ಧಾ ಕಣದಲ್ಲಿರುವುದು ಸುಳ್ಯದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ಪಕ್ಷದ ಧೋರಣೆ, ಅಭಿವೃದ್ಧಿಯ ಚಿಂತನೆಯನ್ನು ಜನರ ಮುಂದಿಡುತ್ತಾ ಸಾಗಿರುವ ಬೆಳ್ಳಾರ್ಕರ್ ಹಿಂದೆ ದಿನದಿಂದ ದಿನಕ್ಕೆ ಬೆಂಬಲಿಗರ ಸಂಖ್ಯೆ ಜಾಸ್ತಿಯಾಗತೊಡಗಿದ್ದು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳನ್ನು ಕಂಗೆಡಿಸಿದೆ.
ಎಂಬಿಎ ಪದವೀಧರೆ: ಸುಮನಾ ಬೆಳ್ಳಾರ್ಕರ್ ಎಂಬಿಎ ಪದವೀಧರೆಯಾಗಿದ್ದು, ಕ್ಷೇತ್ರದಲ್ಲಿ ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಶಿಕ್ಷಣ, ಆರೋಗ್ಯ ಕುರಿತು ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ನೀಡಿದ ಮಹತ್ವದ ಕೊಡುಗೆ ಮಾದರಿಯನ್ನೇ ಇಲ್ಲೂ ಜನರಿಗೆ ಆಶ್ವಾಸನೆ ನೀಡುತ್ತಿದ್ದಾರೆ. ಒಂದು ವರ್ಷದಿಂದ ಕ್ಷೇತ್ರದಲ್ಲಿರುವ ಸುಮನಾ, ಈ ಹಿಂದೆ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿದ್ದರು. ಆದರೆ, ಆಪ್ ಪಕ್ಷದ ರಾಜಕೀಯ ಸಿದ್ಧಾಂತ ಇಷ್ಟಪಟ್ಟು ಪಾರ್ಟಿಗೆ ಸೇರುತ್ತಲೇ ಕಂಪೆನಿಗೆ ರಾಜೀನಾಮೆ ನೀಡಿದ್ದರು.
ಸುಳ್ಯದ ಮಾಜಿ ಶಾಸಕ ಕೆ. ಕುಶಾಲ ಅವರ ಪುತ್ರಿ ಸುಮನಾ ಅವರು, ಉತ್ತಮ ವಾಗ್ಮಿಯೂ ಹೌದು. ಕೊರೊನಾ ಸಮಯದಲ್ಲಿ ಹಲವಾರು ಜನಸ್ನೇಹಿ ಕಾರ್ಯಕ್ರಮಗಳನ್ನು ಮಾಡಿ ಹೆಸರು ವಾಸಿಯಾಗಿದ್ದಾರೆ. ಸದ್ಯ ಮನೆ ಮನೆ ಪ್ರಚಾರವಲ್ಲದೇ, ಆಪ್ ಸದಸ್ಯರ ಜೊತೆಗೂಡಿ ಶಕ್ತಿಮೀರಿ ಮತಯಾಚನೆಯಲ್ಲಿ ತೊಡಗಿದ್ದಾರೆ.
ಬಿಜೆಪಿಯಿಂದ ಭಾಗೀರಥಿ ಮುರುಳ್ಯ, ಕಾಂಗ್ರೆಸ್ ನಿಂದ ಕೃಷ್ಣಪ್ಪ ರಾಮಕುಂಜ ಹಾಗೂ ಜೆಡಿಎಸ್ ನಿಂದ ವೆಂಕಟೇಶ್ ಅವರು ಸ್ಪರ್ಧಾ ಕಣದಲ್ಲಿದ್ದಾರೆ.