
ಪುತ್ತೂರು| ಚುನಾವಣೆ ಹೊತ್ತಲ್ಲೇ ನೈತಿಕ ಪೊಲೀಸ್ ಗಿರಿ; ಪಿಯು ವಿದ್ಯಾರ್ಥಿಗೆ ಹಲ್ಲೆ!
ಪುತ್ತೂರು: 'ಬಜರಂಗದಳ ನಿಷೇಧ' ಕುರಿತಂತೆ ಚರ್ಚೆ ನಡೆಯುತ್ತಿರುವ ಮಧ್ಯೆ ಭಿನ್ನ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿನಿ ಜೊತೆಗಿದ್ದ ಮುಸ್ಲಿಂ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಘಟನೆ ಬಗ್ಗೆ ತೀವ್ರ ಆಕ್ಷೇಪ ಕೇಳಿ ಬಂದಿದ್ದು, ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಥಮ ಪಿಯುಸಿ ವಿದ್ಯಾರ್ಥಿ, ಮರೀಲ್ ಕಾಡುಮನೆ ನಿವಾಸಿ ಮೊಹಮ್ಮದ್ ಫಾರಿಶ್ (18) ಹಲ್ಲೆಗೊಳಗಾದ ವಿದ್ಯಾರ್ಥಿ. ಈತನು ತನ್ನ ಭಿನ್ನ ಧರ್ಮದ ಸಹಪಾಠಿ ಜೊತೆಗೆ ಸಿನಿಮಾ ವೀಕ್ಷಣೆಗೆಂದು ಪುತ್ತೂರಿಗೆ ಆಗಮಿಸಿದ್ದನು ಎನ್ನಲಾಗಿದೆ. ಈ ವೇಳೆ ಸಿನೆಮಾ ವೀಕ್ಷಣೆ ಬಳಿಕ ಜ್ಯೂಸ್ ಕುಡಿಯಲೆಂದು ಹೋದಾಗ ಅಲ್ಲಿಗೆ ಬಂದ ಒಂದು ತಂಡ ಮಹಮ್ಮದ್ ಫಾರಿಶ್ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾಗಿ ತಿಳಿದು ಬಂದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ವಿದ್ಯಾರ್ಥಿ ಮೇಲೆ ಸುಮಾರು 30 ರಿಂದ 50 ಜನರಿದ್ದ ಯುವಕರ ತಂಡ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.
ಖಂಡನೆ: ನೈತಿಕ ಪೊಲೀಸ್ ಗಿರಿ ನಡೆದ ಬೆನ್ನಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಘಟನೆಯನ್ನು ಎಸ್ಡಿಪಿಐ ಹಾಗೂ ಮುಸ್ಲಿಂ ಯುವಜನ ಪರಿಷತ್ ಖಂಡಿಸಿದೆ. ಕಾಂಗ್ರೆಸ್ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್ ಹಾಗೂ ಉಪನಿರೀಕ್ಷಕ ಶ್ರೀಕಾಂತ್ ರಾಥೋಡ್ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದೆ.