ಪುತ್ತೂರೂ: ಮನವೊಲಿಕೆಗೂ ಮಣಿಯದ ಪುತ್ತಿಲ; ಸೋಮವಾರವೇ ನಾಮಪತ್ರ ಸಲ್ಲಿಕೆ
ದಕ್ಷಿಣ ಕನ್ನಡ: ಬಿಜೆಪಿ ಪಕ್ಷದಿಂದ ಟಿಕೆಟ್ ಕೈ ತಪ್ಪಿದ ಬೆನ್ನಿಗೇ ಬಂಡಾಯ ಘೋಷಿಸಿದ್ದ ಪ್ರಮುಖ ಹಿಂದೂ ಸಂಘಟಕ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದಾರೆ.
ಎಪ್ರಿಲ್ 17 ರಂದು ಕಾರ್ಯಕರ್ತರ ಬೃಹತ್ ಮೆರವಣಿಗೆ ಮೂಲಕ ಪುತ್ತೂರು
ತಾಲೂಕು ಆಡಳಿತ ಸೌಧದಲ್ಲಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ.
ಈ ಬಾರಿ ಪುತ್ತೂರು ಬಿಜೆಪಿ ಟಿಕೆಟ್ ನ ಭಾರೀ ನಿರೀಕ್ಷೆಯಲ್ಲಿದ್ದ
ಅರುಣ್ ಕುಮಾರ್ ಪುತ್ತಿಲ ಅವರಿಗೆ ನಿರಾಸೆ ಉಂಟಾಗಿತ್ತು. ಹಾಲಿ ಶಾಸಕ ಸಂಜೀವ ಮಠಂದೂರು ಬದಲಾಗಿ ಆಶಾ
ತಿಮ್ಮಪ್ಪ ಗೌಡ ಅವರಿಗೆ ಪಕ್ಷವು ಟಿಕೆಟ್ ಘೋಷಿಸಿತ್ತು. ಇದರಿಂದ ಹಿಂದೂ ಸಂಘಟನೆ ಕಾರ್ಯಕರ್ತರು ತೀವ್ರವಾಗಿ
ಕೆರಳಿದ್ದರು. ಹಲವು ಸುತ್ತಿನ ಕಾರ್ಯಕರ್ತರ ಸಭೆ ಬಳಿಕ ಅರುಣ್ ಪುತ್ತಿಲ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ
ಘೋಷಿಸಿದ್ದಾರೆ.
ಸಂಧಾನ ವಿಫಲ
ಇನ್ನೊಂದೆಡೆ ಸಂಘಪರಿವಾರದ ನಾಯಕರು ಹಾಗೂ ಬಿಜೆಪಿ ವರಿಷ್ಠರು ಕೊನೆ
ಕ್ಷಣದವರೆಗೂ ಮನವೊಲಿಕೆ ಕಸರತ್ತು ಮುಂದುವರೆಸಿದ್ದಾರೆ. ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಸಹಿತ ಸಂಘ
ಹಾಗೂ ಬಿಜೆಪಿ ಪರಿವಾರದ ನಾಯಕರು ಮನವೊಲಿಕೆಗೆ ಸಭೆ ನಡೆಸಿದ್ದಾರೆ. ಆದರೆ, ಇದ್ಯಾವುದೂ ಯಶಸ್ವಿ ಕಾಣದೇ
ಅರುಣ್ ಕುಮಾರ್ ಪುತ್ತಿಲ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಎಪ್ರಿಲ್ 17ರ ಸೋಮವಾರದಂದು ಕಾರ್ಯಕರ್ತರ ಜೊತೆಗೂಡಿ ಬೆಳಿಗ್ಗೆ ದೇವರ
ಪ್ರಾರ್ಥನೆ ಬಳಿಕ ನಾಮಪತ್ರ ಸಲ್ಲಿಸಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ
ತವರಲ್ಲೇ ನಡುಕ!
ಅರುಣ್ ಕುಮಾರ್ ಪುತ್ತಿಲ ಬಂಡಾಯದಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್
ಕುಮಾರ್ ಕಟೀಲ್ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಭಾರೀ ತಲೆನೋವು ಎದುರಾಗಿದೆ. ಹಾಲಿ ಶಾಸಕರಾಗಿದ್ದ
ಬಿಜೆಪಿಯ ಎಸ್. ಅಂಗಾರ ಹಾಗೂ ಸಂಜೀವ ಮಠಂದೂರು ಅವರಂತೆ ಸುಮ್ಮನಿರದೇ ಅರುಣ್ ಕುಮಾರ್ ಪುತ್ತಿಲ
ಟಿಕೆಟ್ ಸಿಕ್ಕಿಲ್ಲ ಅನ್ನೋ ಒಂದೇ ಕಾರಣಕ್ಕೆ ಬಂಡಾಯದ ಬಾವುಟ ಬೀಸಿದ್ದಾರೆ. ಜೊತೆಗೆ ಸಾವಿರಾರು ಕಾರ್ಯಕರ್ತರ
ಮೂಲಕ ಶಕ್ತಿ ಪ್ರದರ್ಶನ ನಡೆಸಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೋರ್ವ ಹಾಲಾಡಿ ಶ್ರೀನಿವಾಸ
ಶೆಟ್ಟಿ ಆಗುತ್ತಾರೆಯೇ ಅನ್ನೋ ಮಟ್ಟಿಗೆ ತನ್ನ ವರ್ಚಸ್ಸು ಪ್ರದರ್ಶಿಸಿದ್ದಾರೆ.
ಎಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ.