ಮುಲ್ಕಿಗೆ ಮೋದಿ, ಪುತ್ತೂರಿಗೆ ಯೋಗಿ; ಚುನಾವಣಾ ಪ್ರಚಾರಕ್ಕೆ ಕರಾವಳಿ ಸಜ್ಜು!
Tuesday, April 18, 2023
ಮಂಗಳೂರು: ಚುನಾವಣಾ ಕಣ ರಂಗೇರಿದ್ದು ಸ್ಟಾರ್ ಪ್ರಚಾರಕರ ಆಗಮನವನ್ನು ಎದುರು ನೋಡುತ್ತಿದೆ. ಬಿಜೆಪಿಯ ಉನ್ನತ ಮೂಲದ ಪ್ರಕಾರ ಮೇ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕರಾವಳಿಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.
ವಿಶೇಷವಾಗಿ ಬಂಡಾಯದ ಬಾವುಟ ಬೀಸಿರುವ ಅರುಣ್ ಕುಮಾರ್ ಪುತ್ತಿಲ ಹಾಗೂ ಬಿಜೆಪಿ 'ಸಂಘ' ತೊರೆದು ಹೋದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ವಿರುದ್ಧವಾಗಿ, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಪರ ಯೋಗಿ ಆದಿತ್ಯನಾಥ್ ಮತಯಾಚಿಸಲಿದ್ದಾರೆ ಎನ್ನಲಾಗಿದೆ.
ಇನ್ನುಳಿದಂತೆ ಮಂಗಳೂರು ಹೊರವಲಯದ ಮುಲ್ಕಿಯ ಕಾರ್ನಾಡುವಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕರಾವಳಿಯ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲ ತಿಳಿಸಿದೆ. ಇದಕ್ಕಾಗಿ ಮೈದಾನದ ಸಿದ್ಧತೆ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.
ಇನ್ನುಳಿದಂತೆ ಮೋದಿ ಪ್ರವಾಸದ ಬಗ್ಗೆ ಇನ್ನಷ್ಟೇ ಅಂತಿಮ ರೂಪುರೇಷೆ ಸಿದ್ಧಗೊಳ್ಳಲಿದೆ.