.jpg)
ಪುತ್ತೂರು| ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಹಿಂದುತ್ವ ಕಾರ್ಯಕರ್ತರ ವಿರೋಧ; ಜಾಲತಾಣದಲ್ಲಿ ಪೋಸ್ಟ್ ವಾರ್!
ಪುತ್ತೂರು: ಬಿಜೆಪಿ ಪಾಲಿಗೆ ಹಿಂದುತ್ವದ ಭದ್ರಕೋಟೆ ಎನಿಸಿಕೊಂಡ ಪುತ್ತೂರಿನಲ್ಲಿಯೇ ಹಿಂದೂ ಕಾರ್ಯಕರ್ತರು ತೀವ್ರ ಅಸಮಾಧಾನಗೊಂಡಿದ್ದಾರೆ. ನಿನ್ನೆ ಹೈಕಮಾಂಡ್ ಬಿಜೆಪಿಯ ಪ್ರಥಮ ಪಟ್ಟಿ ಬಿಡುಗಡೆಗೊಳಿಸುತ್ತಿದ್ದಂತೆ, ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. “ಹಿಂದುತ್ವದ ಭದ್ರಕೋಟೆಯಲ್ಲಿ ಹಿಂದುತ್ವಕ್ಕೆ ಸರಿಯಾದ ಅಭ್ಯರ್ಥಿಯನ್ನ ಆಯ್ಕೆ ಮಾಡಿಲ್ಲ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಪುತ್ತೂರಿನ ಬಿಜೆಪಿ ಅಭ್ಯರ್ಥಿಯಾಗಿ ಆಶಾ ತಿಮ್ಮಪ್ಪ ಗೌಡ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ. ಹೀಗಿರುವಾಗ ಆಕಾಂಕ್ಷಿಯಾಗಿದ್ದ ಹಿಂದುತ್ವದ ಫೈರ್ ಬ್ರ್ಯಾಂಡ್ ಗಳಾಗಿ ಗುರುತಿಸಿಕೊಂಡ ಅರುಣ್ ಕುಮಾರ್ ಪುತ್ತಿಲ ಹಾಗೂ ಕಿಶೋರ್ ಕುಮಾರ್ ಬೊಟ್ಯಾಡಿ ನಿರಾಸೆ ಎದುರಾಗಿದೆ. ಅಲ್ಲದೆ ಈ ಇಬ್ಬರು ನಾಯಕರ ಪರವಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಸಂಘಟಕರು ಒಲವನ್ನು ತೋರಿದ್ದರು. ಹಿಂದೂ ಸಂಘಟಕರಿಗೆ ಸರಿಯಾದ ಆಯ್ಕೆಯಾಗಿ ಇವರಿಬ್ಬರಲ್ಲಿ ಯಾರಿಗೂ ಟಿಕೆಟ್ ಕೊಟ್ಟರೂ ಸಮ್ಮತಿ ಅಂತ ಸಾಮಾಜಿಕ ಜಾಲತಾಣಗಳಲ್ಲೂ ಪೋಸ್ಟ್ ಗಳು ಹರಿದಾಡುತ್ತಿದ್ದವು.
ಆದ್ರೆ ಗೌಡ ಸಮುದಾಯದ ಮಹಿಳಾ ಅಭ್ಯರ್ಥಿಗೆ ಬಿಜೆಪಿ ಮಣೆಹಾಕಿದೆ. ಇದರಿಂದ ಕೆರಳಿದ ಹಿಂದುತ್ವ ಸಂಘಟನೆ ಕಾರ್ಯಕರ್ತರು, `ಈ ಸಲದ ಚುನಾವಣೆ ಫೈಟ್.. ಗೌಡ ಮತ್ತು ಕಾಂಗ್ರೆಸ್ ಉಳಿದವರಿಗೆ ನೋ ಟೆನ್ಶನ್', `ಜಾತಿ ಆಧಾರದಲ್ಲಿ ಟಿಕೆಟ್ ನೀಡಿದರೆ ಜಾತಿ ಸಂಘಟನೆಗಳು ಚುನಾವಣೆಯ ಪ್ರಚಾರಕ್ಕೆ ತೆರಳಲಿ ಅಲ್ಲಿ ಸಾಮಾನ್ಯ ಕಾರ್ಯಕರ್ತರು ಪ್ರಚಾರಕ್ಕೆ ಹೋಗುವ ಅವಶ್ಯಕತೆ ಏನಿದೆ', `ಕೊನೆಗೂ ಹಿಂದುತ್ವ ಸೋತಿದೆ ಜಾತಿವಾದ ಗೆದ್ದಿದೆ' ಎಂಬಿತ್ಯಾದಿ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ, ಪುತ್ತೂರು ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿದೆ. ಸುಳ್ಯ, ಪುತ್ತೂರಿನಲ್ಲಿ ಮಹಿಳಾ ನಾಯಕಿಯರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಹೈಕಮಾಂಡ್ ಎಲ್ಲರ ಲೆಕ್ಕಚಾರ ಉಲ್ಟಾ ಪಲ್ಟಾ ಮಾಡಿದೆ. ಪುತ್ತೂರಿನಲ್ಲಂತೂ ಆಶಾ ತಿಮ್ಮಪ್ಪ ಗೌಡ ಅವರ ಆಯ್ಕೆ ಪಕ್ಷ ಹಾಗೂ ಸಂಘಟನೆಯೊಳಗೆ ಭಾರೀ ಜಂಗೀಕುಸ್ತಿಗೆ ವೇದಿಕೆ ಒದಗಿಸಿದೆ.
ಹಾಲಿ ಶಾಸಕರಾಗಿದ್ದ
ಸಂಜೀವ ಮಠಂದೂರು ಒಂದೇ ಅವಧಿಗೆ ಸೀಟು ಕಳೆದುಕೊಂಡಿದ್ದು, ಇತ್ತೀಚೆಗೆ ನಡೆದಿದ್ದ ಬೆಳವಣಿಗೆಯೇ ಕಾರಣ
ಎನ್ನಲಾಗುತ್ತಿದೆ.