ಪುತ್ತೂರು `ಕೈ' ಅಭ್ಯರ್ಥಿ ಘೋಷಣೆ ಮುನ್ನವೇ ಬಂಡಾಯ!!
ಪುತ್ತೂರು: ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಘೋಷಣೆಗೆ ಮುನ್ನವೇ ಬಂಡಾಯದ ಕಿಚ್ಚು ದಟ್ಟವಾಗಿ ಹಬ್ಬಿದೆ. ಹೌದು ಮಾಜಿ ಶಾಸಕಿ ಟಿ.ಶಕುಂತಳಾ ಶೆಟ್ಟಿ ಅವರನ್ನ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿಯಾಗಿ ಹೈಕಮಾಂಡ್ ಘೋಷಣೆ ಮಾಡಬೇಕು. ಒಂದು ವೇಳೆ ಘೋಷಣೆ ಮಾಡದಿದ್ದಲ್ಲಿ ಇದರ ಪರಿಣಾಮ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಪರಿಣಾಮ ಎದುರಿಸಬೇಕು. ಇದರ ಜೊತೆಗೆ ಮಹಿಳಾ ಕಾಂಗ್ರೆಸ್ ನ ಪದಾಧಿಕಾರಿಗಳು ಸರ್ವ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುವ ಸ್ಪಷ್ಟ ಸಂದೇಶವನ್ನ ಪುತ್ತೂರಿನಿಂದ ಮಹಿಳಾ ಕಾಂಗ್ರೆಸ್ ರವಾನಿಸಿದೆ.
ಪುತ್ತೂರಿನಲ್ಲಿ ಸುದ್ದಿಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಶಾರದಾ ಅರಸ್, ಶಕುಂತಳಾ ಶೆಟ್ಟಿ ಅವರು ತಮ್ಮ ಶಾಸಕತ್ವವದ ಅವಧಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನ ಪುತ್ತೂರಿಗೆ ತರುವ ಮೂಲಕ ಹತ್ತೂರಿಗೆ ಪ್ರಯೋಜನಗಳನ್ನ ಮಾಡಿದ್ದಾರೆ. ತಮ್ಮ ಅವಧಿಯಲ್ಲಿ ಅದೆಷ್ಟೋ ಜನಪರ ಯೋಜನೆಗಳನ್ನು ತಂದು ಪುತ್ತೂರಿನ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾದವರು. ಈ ಎಲ್ಲ ಅಂಶವನ್ನ ಮನಗಂಡು ಶಕುಂತಳಾ ಶೆಟ್ಟಿ ಅವರಿಗೆ ಹೈಕಮಾಂಡ್ ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಿಸಿಬೇಕು. ಇಲ್ಲದಿದ್ದಲ್ಲಿ ಪುತ್ತೂರಿನಿಂದ ಉಡುಪಿವರೆಗೂ ಪರಿಣಾಮ ಎದುರಿಸಬೇಕಾಗಬಹುದು. ಜೊತೆಗೆ ಸಾಮೂಹಿಕ ರಾಜೀನಾಮೆ ಎಚ್ಚರಿಕೆಯನ್ನ ನೀಡಿದ್ದಾರೆ.
ಈಗಾಗ್ಲೇ ಬಿಜೆಪಿ ಪಕ್ಷವು ದ.ಕ. ಜಿಲ್ಲೆಯಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳನ್ನ ಕಣಕ್ಕಿಳಿಸುವ ಮೂಲಕ ಅವಕಾಶ ನೀಡಿದೆ. ಆದ್ರೆ ಕಾಂಗ್ರೆಸ್ ಪಕ್ಷ ಕರಾವಳಿಯಲ್ಲಿ ಮಹಿಳೆಯರ ಕಡೆಗಣನೆ ಮಾಡಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಈ ವಿಷಯದ ಬಗ್ಗೆ ಸೂಕ್ತ ಕ್ರಮವನ್ನ ತೆಗೆದುಕೊಳ್ಳಬೇಕಿದೆ. ಈ ಮೂಲಕ ರಾಜಕೀಯದಲ್ಲಿ ಅನುಭವ ಇರುವ ಶಕುಂತಳಾ ಶೆಟ್ಟಿ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಇನ್ನು ಇಷ್ಟೆಲ್ಲ ಅರ್ಹತೆ ಇರುವ ಶಕುಂತಳಾ ಶೆಟ್ಟಿ ಅವರನ್ನ ಕಡೆಗಣಿಸಿದ್ದಲ್ಲಿ, ಮಹಿಳಾ ಕಾಂಗ್ರೆಸ್ ನ ಸರ್ವ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುವ ಜೊತೆಗೆ ಶಕುಂತಳಾ ಶೆಟ್ಟಿ ಅವರನ್ನ ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಯುವಂತೆ ಒತ್ತಾಯಸುತ್ತೇವೆ ಎಂದರು.