ಮಂಗಳೂರು: ಜಾತಿ ಲೆಕ್ಕಚಾರಕ್ಕೆ ಇಳಿದ ಬಿಜೆಪಿ; ಹಾಲಿ ಶಾಸಕರ ಸ್ಥಾನಪಲ್ಲಟ!?
ಮಂಗಳೂರು: ಭಾರತೀಯ ಜನತಾ ಪಕ್ಷವು ಟಿಕೆಟ್ ಹಂಚಿಕೆಯ ಕೊನೆಯ ಕಸರತ್ತಿನಲ್ಲಿ ರಾಜಕೀಯದ ಚದುರಂಗದಾಟ ಆಡಲು ಮುಂದಾಗಿದೆ ಎನ್ನಲಾಗಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಎನ್ನುವಂತೆ ಜಾತಿ ಲೆಕ್ಕಚಾರ ಕರಾವಳಿಯಲ್ಲಿ ಕೇಳಿ ಬರುತ್ತಿದ್ದು, ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಮಣಿಸಲು ಅದೇ ಸಮುದಾಯಕ್ಕೆ ಸೇರಿದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಬಗ್ಗೆ ಮಾತುಗಳು ಕೇಳಿ ಬಂದಿವೆ.
ಹಾಲಿ ಶಾಸಕರ
ಸ್ಥಾನಪಲ್ಲಟ!?
ಈ ಬಾರಿ ಹೇಗಾದ್ರೂ ಮಾಡಿ ಅಧಿಕಾರ ಉಳಿಸಿಕೊಳ್ಳಬೇಕೆನ್ನುವ ಜಿದ್ದಿಗೆ ಇಳಿದಿರುವ ಬಿಜೆಪಿ ಅದಕ್ಕಾಗಿ ಸಖತ್ ವರ್ಕೌಟ್ ಗೆ ಇಳಿದಿದೆ. ಹಾಲಿ ಶಾಸಕರ ಸ್ಥಾನಪಲ್ಲಟ ಮಾಡಿಯಾದರೂ ಜಯಿಸಬೇಕೆನ್ನುವ ತಂತ್ರಗಾರಿಕೆಯನ್ನು ಹೂಡಿದೆ. ಹೀಗೆ ಆದ್ದಲ್ಲಿ, ಮುಲ್ಕಿ-ಮೂಡುಬಿದಿರೆ ಹಾಲಿ ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ಮಂಗಳೂರು ಉತ್ತರ, ಡಾ. ಭರತ್ ಶೆಟ್ಟಿ ಅವರಿಗೆ ಉಳ್ಳಾಲ ಹಾಗೂ ಮುಲ್ಕಿ-ಮೂಡುಬಿದಿರೆಯಲ್ಲಿ ಬಂಟ ಸಮುದಾಯದ ಸುನಿಲ್ ಆಳ್ವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ.
ಯಾಕಾಗಿ ಹೀಗೆ?
ಈಗಾಗಲೇ ಮುಲ್ಕಿ-ಮೂಡುಬಿದಿರೆಯಲ್ಲಿ ಅಪಾರ ಅಭಿವೃದ್ಧಿ ಕಾರ್ಯದ ಹೊರತಾಗಿಯೂ ಹಾಲಿ ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ಪಕ್ಷದ ಒಳಗಿಂದಲೇ ಟಿಕೆಟ್ ನೀಡದಂತೆ ಒತ್ತಡವಿದೆ. ಅಂತೆಯೇ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಅವರು ತಮಗೆ ಟಿಕೆಟ್ ನೀಡುವಂತೆ ಒತ್ತಡವೇರುವ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ. ಇವರಿಬ್ಬರ ಜಗಳ ಶಮನ ಮಾಡುವ ಜೊತೆಗೆ ಬಂಟ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಎದುರಿಸಲು ಮುಲ್ಕಿ ನಗರಸಭೆಯ ಅಧ್ಯಕ್ಷರಾಗಿ, ಹಿಂದುತ್ವ ಸಂಘಟನೆಯಿಂದ ಬಂದ ಬಂಟ ಸಮುದಾಯದ ಸುನಿಲ್ ಆಳ್ವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಒಂದು ವೇಳೆ ಬಂಟ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿಯ ಮುಂದೆ ಜಾತಿ ಲೆಕ್ಕಚಾರದ ಮೊರೆ ಹೋದ್ರೆ ಬಿಜೆಪಿಗೆ ಮಂಡಲ ಅಧ್ಯಕ್ಷರೂ ಆಗಿರುವ ಸುನಿಲ್ ಆಳ್ವ ಹೆಚ್ಚು ಹತ್ತಿರವಾಗುದರಲ್ಲಿ ಸಂಶಯವಿಲ್ಲ.
ಉಮಾನಾಥ ಕೋಟ್ಯಾನ್
ಸುರತ್ಕಲ್ ಗೆ!?
ಹೌದು, ಮುಲ್ಕಿ ಮೂಡುಬಿದಿರೆ ಹಾಲಿ ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ಮಂಗಳೂರು ಉತ್ತರ ಟಿಕೆಟ್ ನೀಡಿದರೆ ಹೇಗೆ ಅನ್ನೋ ಚರ್ಚೆಯೂ ಇದೆ. ಏಕೆಂದರೆ, ಸುರತ್ಕಲ್ ಕ್ಷೇತ್ರ ಭರತ್ ಶೆಟ್ಟಿ ಅವಧಿಯಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಂಡಿಲ್ಲ. ಹಾಗಾಗಿ ಉಮಾನಾಥ ಕೋಟ್ಯಾನ್ ಅವರನ್ನು ಮಂಗಳೂರು ಉತ್ತರದಿಂದ ಕಣಕ್ಕೆ ಇಳಿಸಿ ಅಭಿವೃದ್ಧಿಯ ನಾಗಾಲೋಟಕ್ಕೆ ಚಾಲನೆ ನೀಡುವ ಮಾತು ಕೂಡಾ ಚರ್ಚೆಯಾಗಿದೆ. ಜೊತೆಗೆ ಅಲ್ಪಸಂಖ್ಯಾತರ ಜೊತೆಗೆ ಬಹಿರಂಗ ಯುದ್ಧ ಸಾರಿದ್ದ ಭರತ್ ಶೆಟ್ಟಿ ಅವರನ್ನು ಸುರತ್ಕಲ್ ನಿಂದ ದೂರವಿರಿಸಿ, ಎಲ್ಲರನ್ನೂ ಸಮಾನವಾಗಿ ಕೊಂಡೊಯ್ಯುವ ಉಮಾನಾಥ ಕೋಟ್ಯಾನ್ ಸುರತ್ಕಲ್ ಕ್ಷೇತ್ರಕ್ಕೆ ಬೆಸ್ಟ್ ಅನ್ನೋ ಮಾತು ಕೂಡಾ ಕೇಳಿ ಬಂದಿದೆ.
ಜಾತಿ ಲೆಕ್ಕಚಾರವೂ
ಅಷ್ಟೇ ಮುಖ್ಯ
ಹೀಗೆ ಉಮಾನಾಥ ಕೋಟ್ಯಾನ್ ಅವರನ್ನ ಸುರತ್ಕಲ್ ನಿಂದ ಕಣಕ್ಕೆ ಇಳಿಸಿದರೆ, ಜಾತಿ ಲೆಕ್ಕಚಾರವೂ ಪಕ್ಕ ಆಗೋದ್ರಲ್ಲಿ ಡೌಟಿಲ್ಲ. ಉಮಾನಾಥ ಕೋಟ್ಯಾನ್ ಹಿಂದುತ್ವ ಸಂಘಟನೆಯ ಮುಖಂಡ ಸತ್ಯಜಿತ್ ಸುರತ್ಕಲ್ ಜೊತೆಗೂ ಒಳ್ಳೆಯ ಒಡನಾಟ ಹೊಂದಿದ್ದಾರೆ. ಅಷ್ಟೇ ಅಲ್ದೇ, ಸ್ವಜಾತಿಯ ನಾಯಕನೂ ಆಗಿದ್ದು ಪ್ಲಸ್ ಪಾಯಿಂಟ್. ಮೊದಲೇ ಬಿಜೆಪಿ ಸರಕಾರದ ಆಡಳಿತ ವೈಖರಿಯಿಂದ ಬೇಸತ್ತು ಜಾತಿ ಒಗ್ಗಟ್ಟು ಪ್ರದರ್ಶನದ ಮೂಲಕ ಸತ್ಯಜಿತ್ ಸುರತ್ಕಲ್ ಬಿಲ್ಲವ ಅಭ್ಯರ್ಥಿಗಳನ್ನಷ್ಟೇ ಗೆಲ್ಲಿಸುವ ಇರಾದೆಯನ್ನ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಹಾಗಾಗಿ ಸುರತ್ಕಲ್ ನಲ್ಲಿ ಮೊಯ್ದಿನ್ ಬಾವಾ ಬರ್ಲಿ, ಇನಾಯತ್ ಅಲಿಯೇ ನಿಲ್ಲಲಿ ಬಿಲ್ಲವ ಮುಖಂಡ ಉಮಾನಾಥ ಕೋಟ್ಯಾನ್ ಗೆ ಸುರತ್ಕಲ್ ಮಣೆ ಹಾಕಿದ್ದಲ್ಲಿ ಗೆಲುವು ಸುಲಭ ಆದೀತು ಅನ್ನೋ ಲೆಕ್ಕಚಾರವಿದೆ.
ಭರತ್ ಶೆಟ್ರ
ಕಥೆ ಏನು!?
ಹೀಗೆ ಆದಲ್ಲಿ, ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರನ್ನು ಉಳ್ಳಾಲದಿಂದ ಕಣಕ್ಕೆ ಇಳಿಸಲಾಗುತ್ತೆ. ಮೊದಲೇ ಎಸ್ಡಿಪಿಐ ಸ್ಪರ್ಧೆಯಿಂದ ಕಂಗೆಟ್ಟ ಕಾಂಗ್ರೆಸ್ ನ ಯುಟಿ ಖಾದರ್ ನಿಂದ ಉಳ್ಳಾಲ ಕ್ಷೇತ್ರವನ್ನು ಕಸಿಯುವಂತಹ ಪ್ರಯತ್ನ ಬಿಜೆಪಿ ಪಕ್ಷವು ಭರತ್ ಶೆಟ್ಟಿ ಮೂಲಕ ಮಾಡಲಿದೆ. ಒಂದು ವೇಳೆ ಯಶಸ್ವಿಯಾದರೆ, ಅದು ಬಿಗ್ ಸಕ್ಸಸ್. ಆಗದೇ ಹೋದಲ್ಲಿ ಮುಂದಿನ ವರ್ಷದಲ್ಲಿ ನಡೆಯುವ ಸಂಸದ ಸ್ಥಾನಕ್ಕೆ ಭರತ್ ಶೆಟ್ಟಿ ಸ್ಪರ್ಧಿಸುವ ಮೂಲಕ ಲೋಕಸಭೆಗೆ ಪ್ರವೇಶಕ್ಕೆ ಬೇಕಾದ ಅಖಾಡ ಸಿದ್ಧತೆ ಮಾಡುವುದು ಬಿಜೆಪಿ ಲೆಕ್ಕಚಾರ!
ನಳಿನ್ ರಾಜ್ಯ
ರಾಜಕಾರಣಕ್ಕೆ?
ಭರತ್ ಶೆಟ್ಟಿ ಸಂಸದನಾಗಿ ಆಯ್ಕೆಯಾದಲ್ಲಿ ನಳಿನ್ ಕುಮಾರ್ ಕಟೀಲ್
ಬಹುತೇಕ ರಾಜ್ಯ ರಾಜಕಾರಣಕ್ಕೆ ಕಾಲಿಡಲಿದ್ದಾರೆ. ಪುತ್ತೂರು, ಬಂಟ್ವಾಳ ಅಥವಾ ಮುಲ್ಕಿ ಮೂಡುಬಿದಿರೆ
ಕ್ಷೇತ್ರದಲ್ಲಿ ಸ್ಪರ್ಧಿಸಿ ಅಗ್ನಿಪರೀಕ್ಷೆಗೆ ಮುಂದಾಗುತ್ತಾರೆ ಅನ್ನೋ ಮಾತಿದೆ. ಇದೆಲ್ಲವೂ ಅನಂತರದ
ಮಾತು. ಸದ್ಯ ಸ್ಥಾನಪಲ್ಲಟ ಆಗೋ ಸಾಧ್ಯತೆ ಬಗ್ಗೆ ಜೋರಾದ ಚರ್ಚೆ ನಡೆದಿದೆ. ಅದೆಲ್ಲಕ್ಕೂ ಕಾರಣ, ಮೊಟ್ಟ
ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುರುವಾದ “ಬಿಲ್ಲವ ವರ್ಸಸ್ ಬಂಟ ಕ್ಯಾಂಡಿಡೇಟ್” ಅನ್ನೋದು
ಕಟು ಸತ್ಯ.