ಸುರತ್ಕಲ್: ಬಿಜೆಪಿ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ ಮೇಲೆ ಹಲ್ಲೆ; ದೂರು ದಾಖಲು
ಸುರತ್ಕಲ್: ಕೃಷ್ಣಾಪುರ-ಕಾಟಿಪಳ್ಳ ವ್ಯಾಪ್ತಿಯ ಸ್ಥಳೀಯ ಬಿಜೆಪಿ ಕಾರ್ಪೋರೇಟರ್ ಮೇಲೆ ಯುವಕನೋರ್ವ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಗರದ ಹೊರವಲಯದ ಕಾಟಿಪಳ್ಳ 3ನೇ ಬ್ಲಾಕ್ ನಲ್ಲಿ ನಡೆದಿದೆ. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕ ಹಲ್ಲೆ ನಡೆಸಿರುವ ಕುರಿತು ಬಿಜೆಪಿ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ ದೂರು ನೀಡಿದ್ದು, ಸ್ಥಳೀಯ ಯುವಕ ಗಣೇಶ್ ದೇವಾಡಿಗ ಎಂಬಾತ ಈ ಕೃತ್ಯ ಎಸಗಿದ್ದಾಗಿ ಎಂದು ದೂರು ನೀಡಲಾಗಿದೆ.
ಕಾಟಿಪಳ್ಳದಲ್ಲಿ ಹಿಂದೂ ಧಾರ್ಮಿಕ ಸೇವಾ ಸಮಿತಿ ಕಟ್ಟಿಕೊಂಡಿರುವ ಎ.ಪಿ. ಮೋಹನ್, ಗಣೇಶ್ ದೇವಾಡಿಗ ಹಾಗೂ ಗಿರೀಶ್ ಎಂಬುವವರು ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ ವಿರುದ್ಧ ಮಾನಹಾನಿಕರ ಮೆಸೇಜ್ ರವಾನಿಸುವುದಲ್ಲದೆ ಆಗಾಗ ಜಗಳ ವಾಡುತ್ತಿದ್ದರು. ಇತ್ತೀಚಿಗೆ ಕಾಟಿಪಳ್ಳ ರಿಕ್ಷಾ ಪಾರ್ಕ್ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ 50 ಲಕ್ಷ ರೂ. ಅನುದಾನದಲ್ಲಿ ಗುದ್ದಲಿ ಪೂಜೆ ನಡೆಸಿದ್ದು ಅದರ ಬಗ್ಗೆ ಆರೋಪಿ ಗಣೇಶ್ ದೇವಾಡಿಗ ಮತ್ತಿತರರು ಸಾರ್ವಜನಿಕವಾಗಿ ಅವಹೇಳನಕಾರಿ ಮಾತಾಡುವುದು, ಮೆಸೇಜ್ ರವಾನಿಸುವುದು ಮಾಡುತ್ತಿದ್ದರು.
ಇದೇ ವಿಚಾರದಲ್ಲಿ ಗಣೇಶ್ ಎಂಬಾತ ಲೋಕೇಶ್ ಬೊಳ್ಳಾಜೆ ಜೊತೆ ಗಲಾಟೆ ಮಾಡಿ ಹಲ್ಲೆಗೆ ಮುಂದಾಗಿ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಲೋಕೇಶ್ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.