ಮುಸ್ಲಿಂ ಮೀಸಲಾತಿ ರದ್ದು ವಿಚಾರ; ಬಿಜೆಪಿ ಮೈನಾರಿಟಿ ಮೋರ್ಚಾ ಸಭೆ| ಈಶ್ವರಪ್ಪ, ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಸಿಡಿಮಿಡಿ!
ಬೆಂಗಳೂರು: ಮುಸ್ಲಿಂ ಸಮುದಾಯಕ್ಕೆ ಸೇರಿದ ಪ್ರವರ್ಗ 2ಬಿ ಮೀಸಲಾತಿ ರದ್ಧತಿ ವಿಚಾರ ಸಂಬಂಧ ಭಾರತೀಯ ಜನತಾ ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ವೇದಿಕೆಯಲ್ಲೂ ಭಾರೀ ಚರ್ಚೆ ನಡೆದಿದೆ.
ಈ ಸಂಬಂಧ ಮಲ್ಲೇಶ್ವರಂ ನಲ್ಲಿರುವ ಪಕ್ಷದ ರಾಜ್ಯ ಕಚೇರಿಯ ಜಗನ್ನಾಥ
ಭವನದಲ್ಲಿ ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸಯ್ಯದ್ ಸಲಾಂ ನೇತೃತ್ವದಲ್ಲಿ ಬೃಹತ್
ಸಭೆ ನಡೆದಿದೆ. ಸಭೆಯಲ್ಲಿ ಮೀಸಲಾತಿ ರದ್ಧತಿಯಿಂದ ಪಕ್ಷ, ಸಂಘಟನೆ ಚಟುವಟಿಕೆಗೆ ತೊಡಕುಂಟಾಗಲಿದೆ ಅನ್ನೋ
ಮಾತು ವ್ಯಕ್ತವಾಗಿದೆ. ಜೊತೆಗೆ, ಸಭೆಯಲ್ಲಿದ್ದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪದಾಧಿಕಾರಿಗಳು
ಒಕ್ಕೊರಲಿನಿಂದ ತಮ್ಮದೇ ಪಕ್ಷದ ಸರಕಾರ ಮಾಡಿದ ಅನ್ಯಾಯವನ್ನು ಖಂಡಿಸಿದ್ದಾರೆ ಎನ್ನಲಾಗಿದೆ.
ಅಲ್ಲದೇ, ಮುಂದಿನ ದಿನಗಳಲ್ಲಿ ಮುಸ್ಲಿಮರು ಪಕ್ಷದತ್ತ ಹರಿದು ಬರಲು
ಶೇಕಡಾ 6 ಮೀಸಲಾತಿ ನೀಡಬೇಕು ಅನ್ನೋ ಅಭಿಪ್ರಾಯವು ಸಭೆಯಲ್ಲಿ ವ್ಯಕ್ತವಾಗಿದೆ. ಇತ್ತೀಚೆಗೆ ಆಝಾನ್
ವಿರುದ್ಧ ಹಾಗೂ ಮುಸ್ಲಿಮರ ಗುರಿಯಾಗಿಸಿ ಸಿಟಿ ರವಿ, ಸಂಸದ ಅನಂತ್ ಕುಮಾರ್ ಹೆಗ್ಡೆ ನೀಡಿದ್ದ ಹೇಳಿಕೆಗಳೆಲ್ಲ
ಭಾರೀ ಚರ್ಚೆಗೀಡಾದವು ಎಂದು ʼದಿ ನ್ಯೂಸ್ ಅವರ್ʼ ಗೆ ಬಲ್ಲ ಮೂಲಗಳು ತಿಳಿಸಿವೆ.
ಅಂತಿಮವಾಗಿ, ಮುಸ್ಲಿಮರಿಗಿದ್ದ ಮೀಸಲಾತಿಯನ್ನು ಮರುಸ್ಥಾಪಿಸುವಂತೆ
ಮಾಜಿ ಸಿಎಂ ಯಡಿಯೂರಪ್ಪ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್
ಕಟೀಲ್ ಅವರಿಗೆ ಮನವಿ ನೀಡಲು ನಿರ್ಧರಿಸಿದ್ದಾಗಿ ತಿಳಿದು ಬಂದಿದೆ.
ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಫಝಲ್ ಅಸೈಗೋಳಿ, ಪೀರ್‌ಝಾದೆ,
ಟಿಪ್ಪುಸುಲ್ತಾನ್ ದಾವಣಗೆರೆ, ಮುಖ್ತಾರ್ ಪಠಾಣ್ ಸೇರಿದಂತೆ ಸುಮಾರು 100ಕ್ಕೂ ಮಿಕ್ಕ ಪದಾಧಿಕಾರಿಗಳು
ಇದ್ದರು ಎಂದು ತಿಳಿದು ಬಂದಿದೆ.