-->
ನಾವ್ಯಾಕೆ ರಾಜೀನಾಮೆ ನೀಡ್ಬೇಕು? ಬಿಜೆಪಿ ಸರಕಾರ ಮಾಡಿದ್ದು ಸರಿಯಿದೆ; ಮೀಸಲಾತಿ ರದ್ಧತಿಗೆ ಫಝಲ್ ಅಸೈಗೋಳಿ ಸಮರ್ಥನೆ

ನಾವ್ಯಾಕೆ ರಾಜೀನಾಮೆ ನೀಡ್ಬೇಕು? ಬಿಜೆಪಿ ಸರಕಾರ ಮಾಡಿದ್ದು ಸರಿಯಿದೆ; ಮೀಸಲಾತಿ ರದ್ಧತಿಗೆ ಫಝಲ್ ಅಸೈಗೋಳಿ ಸಮರ್ಥನೆ

 

ಮಂಗಳೂರು: ಮುಸ್ಲಿಮ್‌ ಸಮುದಾಯಕ್ಕೆ ಸೇರಿದ ಪ್ರವರ್ಗ 2ಬಿ ಮೀಸಲಾತಿಯನ್ನು ಬಿಜೆಪಿ ಸರಕಾರ ರದ್ದುಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಫಝಲ್‌ ಅಸೈಗೋಳಿ, ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಸರಕಾರ ಮೀಸಲಾತಿಯನ್ನು ಬೇರೆ ಸಮುದಾಯಕ್ಕೆ ಹಂಚಿದ್ರಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಅಲ್ಪಸಂಖ್ಯಾತ ಮೋರ್ಚಾ ಸಭೆಯಲ್ಲಿ ಫಝಲ್‌ ಅಸೈಗೋಳಿ ಅವರು ಭಾಗವಹಿಸಿದ್ದರ ಹಿನ್ನೆಲೆ ಅವರ ಪ್ರತಿಕ್ರಿಯೆಗಾಗಿ ಕರೆ ಮಾಡಿದ್ದಾಗ ಅವರು ಈ ವಿಚಾರವಾಗಿ ಮುಕ್ತವಾಗಿ ಮಾತನಾಡಿದ್ದಾರೆ.

“ಬಿಜೆಪಿ ಅಂಗಡಿಯಲ್ಲಿ ಮುಸ್ಲಿಮರು ಸೇಲ್‌ ಆಗಲ್ಲ. ಇಂದಿಗೂ ಶೇಕಡಾ 90ರಷ್ಟು ಮುಸ್ಲಿಮರು ಕಾಂಗ್ರೆಸ್‌ ನೊಂದಿಗಿದ್ದಾರೆ. ನಮಗೆ ಇಂದಿಗೂ ಇರುವುದು ಲಿಂಗಾಯಿತ ಸಮುದಾಯದ ಮತವೇ ಅಧಿಕ. ಹಾಗಾಗಿ ನಮ್ಮ ಸರಕಾರ ಮಾಡಿದ್ದು ಸರಿ ಇದೆ. ಯಾವಾಗ ನಮ್ಮ ಜೊತೆ ಶೇಕಡಾ 20-40 ರಷ್ಟು ಮುಸ್ಲಿಮರು ಬರ್ತಾರೋ, ಆಗ ನಮ್ಮ ಮೀಸಲಾತಿ ಮುಟ್ಟೋದಕ್ಕೆ ಅವರು ಧೈರ್ಯ ಮಾಡಲ್ಲʼʼ ಎಂದರು.

“ಮುಸ್ಲಿಮರ ವೋಟ್‌ ಬಿಜೆಪಿಗೆ ಸಿಗ್ತಿಲ್ಲ. ಹಾಗಾಗಿ ಲಿಂಗಾಯಿತರಿಗೆ ಮೀಸಲಾತಿ ಹಂಚಿದ್ದಾರೆ. ಅದರಲ್ಲಿ ತಪ್ಪೇನಿದೆ?” ಎಂದು ಪ್ರಶ್ನಿಸಿದ್ದಾರೆ.

ಇನ್ನು ರಾಜ್ಯದಲ್ಲಿ ಲಿಂಗಾಯಿತರಿಗಿಂತ ಮುಸ್ಲಿಮರ ವೋಟ್‌ ಜಾಸ್ತಿ ಇದೆ. ಆದ್ದರಿಂದ ನಾನು ಓರ್ವ ಮುಸ್ಲಿಂ ಸಮುದಾಯದವನಾಗಿ ಹೇಳುತ್ತಿದ್ದೇನೆ, ಬಿಜೆಪಿ ಸರಕಾರ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದರು.

ಮುಂದುವರಿದು, ನಮ್ಮ ಸಮುದಾಯದವರಿಗೆ ಬಿಜೆಪಿ ಕೊಡುಗೆ ಬಗ್ಗೆ ಕೃತಜ್ಞತೆ ಇಲ್ಲ. ಯಡಿಯೂರಪ್ಪನವರ ಕಾಲದಲ್ಲಿ ಮುಸ್ಲಿಮ್‌ ಸಮುದಾಯಕ್ಕಾಗಿ ಹಜ್‌ ಘರ್‌, ವಕ್ಫ್‌ ಬೋರ್ಡ್‌, ಕೆಎಂಡಿಸಿ ಅಂತಾ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ. ಅದಕ್ಕೆ ಪ್ರತಿಯಾಗಿ ಯಡಿಯೂರಪ್ಪನವರಿಗೆ ಕನಿಷ್ಠ ಥ್ಯಾಂಕ್ಸ್‌ ಹೇಳಿದ್ದೀವ? ಅಥವಾ ವೋಟ್‌ ಆಗಿ ಪರಿವರ್ತನೆಗೊಂಡಿದ್ದೀವ? ಎಂದು ಪ್ರಶ್ನಿಸಿದ್ದಾರೆ. ಇನ್ನಾದ್ರೂ ಮುಸಲ್ಮಾನರಿಗೆ ಜ್ಞಾನೋದಯ ಆಗುತ್ತಾ ನೋಡ್ಬೇಕಿದೆ ಎಂದಿದ್ದಾರೆ.

ಅಲ್ಲದೇ, ಮೀಸಲಾತಿ ರದ್ಧತಿ ಬಗ್ಗೆ ನಮಗೆ ಅಸಮಾಧಾನವಿದೆ. ಅದನ್ನು ಯಾವುದೇ ರಾಜೀನಾಮೆ ನೀಡದೇ ಪಕ್ಷದ ವೇದಿಕೆಯಲ್ಲೇ ಇದ್ದು ಹೋರಾಟ ಮಾಡುವೆವು. ಆದರೂ ನಾವು ಮೀಸಲಾತಿ ರದ್ಧತಿ ಮರುಸ್ಥಾಪಿಸುವಂತೆ ಮನವಿ ನೀಡುತ್ತಿದ್ದೇವೆ. ಈ ಮನವಿ ಮುಸ್ಲಿಂ ಸಮುದಾಯಕ್ಕಾಗಿ ಅಲ್ಲ, ನಮಗೋಸ್ಕರ ಮನವಿ ಕೊಡುತ್ತಿದ್ದೇವೆ ಎಂದರು.

   

Ads on article

Advertise in articles 1

advertising articles 2

Advertise under the article