ಬೆಂಗಳೂರು| 2ಬಿ ಮೀಸಲಾತಿ ರದ್ದು; ಇಂದು ಅಲ್ಪಸಂಖ್ಯಾತ ಮೋರ್ಚಾದ ಮಹತ್ವದ ಸಭೆ!
ಬೆಂಗಳೂರು: ಪ್ರವರ್ಗ 2ಬಿ ಮೀಸಲಾತಿ ರದ್ದುಗೊಳಿಸಿ ಇತರೆ ಸಮುದಾಯಗಳಿಗೆ ಹಂಚಿಕೆ ಮಾಡಿರುವ ಕುರಿತು ಭಾರತೀಯ ಜನತಾ ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ಒಳಗೆ ಈ ವಿಚಾರ ಭಾರೀ ಚರ್ಚೆಗೆ ಒಳಗಾಗಿದೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಹೆಚ್ಚಿರುವ ಕ್ಷೇತ್ರಗಳಲ್ಲಿ ಬಿಜೆಪಿ ಪರ ಮತಯಾಚನೆ ಸಾಧ್ಯವಾಗದು ಎಂದು ಮೋರ್ಚಾದ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ಇಂದು (ಬುಧವಾರ, ಮಾರ್ಚ್ 29) ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯ ಜಗನ್ನಾಥ ಭವನದಲ್ಲಿ ಅಲ್ಪಸಂಖ್ಯಾತ ಮೋರ್ಚಾದ ಸಭೆಯನ್ನು ಆಯೋಜಿಸಲಾಗಿದೆ. ಖುದ್ದು ಈ ಸಭೆಗೆ ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಸೈಯದ್ ಸಲಾಂ ಅವರೇ ಪದಾಧಿಕಾರಿಗಳನ್ನು ಆಹ್ವಾನಿಸಿದ್ದಾರೆ. ತುರ್ತಾಗಿ ಕರೆದಿರುವ ಈ ಸಭೆಯಲ್ಲಿ 2ಬಿ ರದ್ಧತಿಯಿಂದಾಗಿ ಆಗುವ ಸಾಧಕ ಬಾಧಕ ಬಗ್ಗೆ ಚರ್ಚಿಸಿ, ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾನೂನು ಸಚಿವ ಮಾಧುಸ್ವಾಮಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರಣಿ ಸದಸ್ಯರು, ಆಯೋಗದ ಅಧ್ಯಕ್ಷರು, ಮಾಜಿ ನಿಗಮದ ಅಧ್ಯಕ್ಷರು ಹಾಗೂ ಸದಸ್ಯರುಗಳು, ಖಾಯಂ ಆಹ್ವಾನಿತರು, ವಿಶೇಷ ಆಹ್ವಾನಿತರು, ಹಜ್ ಸಮಿತಿಯ ಸದಸ್ಯರು ಮತ್ತು ಜಿಲ್ಲಾಧ್ಯಕ್ಷರುಗಳು ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
2ಬಿ ರದ್ಧತಿ ಕುರಿತು ಬಿಜೆಪಿಯಲ್ಲಿರುವ ಮುಸ್ಲಿಮರ ನಿಲುವು ಏನು? ಎಂದು ಜಾಲತಾಣಗಳಲ್ಲಿ ಚರ್ಚೆಯಾಗುತ್ತಲೇ ಅಲ್ಪಸಂಖ್ಯಾತ ಮೋರ್ಚಾದ ಮುಸ್ಲಿಮರು ತುರ್ತು ಸಭೆ ಆಯೋಜಿಸಿರುವುದು ಕುತೂಹಲ ಮೂಡಿಸಿದೆ.
ಜೊತೆಗೆ, 2ಬಿ ಮೀಸಲಾತಿ ವಾಪಸಾತಿ ಕುರಿತ ಸೂಕ್ತ ಭರವಸೆ ಸಿಗದಿದ್ದರೆ ಕೆಲವು ಮುಖಂಡರು ಪಕ್ಷ ತೊರೆಯಲಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ.